ಸಿಸಿ ಟಿವಿ, ಖಾಕಿ ಖದರ್‌ಗೆ ಬೆದರಿದಳಾ ಭಾನಾಮತಿ…?

ಅಶೋಕ ಶೆಟ್ಟರ

ಬಾಗಲಕೋಟೆ: ಅಯ್ಯೋ ನಮ್ಮೂರಲ್ಲಿ ಭಾನಾಮತಿ ಕಾಟ ಶುರುವಾಗಿದೆ, ಏಕಾಏಕಿ ದೊಪ್ಪಂತ ಕಲ್ಲು ಬೀಳ್ತವೆ, ನಮಗಂತೂ ದಿಕ್ಕು ತೋಚದಾಗಿದೆ…! ಇದು ಪಾಲಕರು, ಪೋಷಕರ ಉದ್ಘೋಷ.

ಸರ್… ಕಲ್ಲು ಎಲ್ಲಿಂದ ಬರುತ್ತೆ, ಹೇಗೆ ಬರುತ್ತೆ, ಸ್ವಲ್ಪನೂ ಗೊತ್ತಾಗಲ್ಲ. ಬಿದ್ದ ಮೇಲೆಯೇ ಕಲ್ಲು ಬಿತ್ತು ಎಂದು ಗೊತ್ತಾಗುತ್ತೆ. ನಮಗೂ ಏನೂ, ಎಂತೂ ತಿಳಿಯದಾಗಿದೆ. ಹೀಗಂತ ಹೇಳ್ತಿದ್ರು ಆ ಶಾಲೆಯ ಶಿಕ್ಷಕರು.

ಖರೇ ಹೇಳ್ತೇವ್ರಿ, ಕಲ್ಲು ಬಂದಿದ್ದು ನಮಗ್ಯಾರಿಗೂ ಸ್ಪಲ್ಪನೂ ಕಾಣ್ಲಿಲ್ರೀ, ಕಲ್ಲು ಬಿದ್ದು ತಲೆ ಒಡೆದೈತ್ರಿ, ಭಾಳ್ ಅಂದ್ರ ಭಾಳ್ ಹೆದರ್ಕಿ ಆಗಾತೈತ್ರಿ, ಇದು ಶಾಲಾ ವಿದ್ಯಾರ್ಥಿಗಳ ಹೊರಹಾಕಿದ ಆತಂಕ.

ಏನ್ರೀ ಇದು ಕಥೆ! ಇಂತಹ ಮಾಹಿತಿ, ತಂತ್ರಜ್ಞಾನ ಯುಗದಲ್ಲಿ ಮೂಢನಂಬಿಕೆ, ಕಂದಾಚಾರ ನಂಬ್ತಾರಲ್ಲ. ಇದೆಲ್ಲ ನಡೆಯತ್ತೇನ್ರೀ. ಇದೆಲ್ಲ ಕಿಡಿಗೇಡಿಗಳ ಕೃತ್ಯ. ಬಿಟ್ಟಾಕ್ರಿ ಇದನ್ನ ಎಂದು ಪ್ರಜ್ಞಾವಂತರು, ಡಿಸಿ, ಎಸ್ಪಿ ಅವರು ಸ್ಪಷ್ಟ ನುಡಿ.

ಇದು ಗುಳೇದಗುಡ್ಡ ತಾಲೂಕಿನ ಇಂಜಿನವಾರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ಒಂದುವರೆ ತಿಂಗಳಿಂದ ಅದಶ್ಯ ರೀತಿಯಲ್ಲಿ ಕಲ್ಲುಗಳು ಬೀಳುತ್ತಿವೆ ಎನ್ನುವ ಸುದ್ದಿಯ ಬಗ್ಗೆ ಕೇಳಿ ಬರುತ್ತಿದ್ದ ವಿವಿಧ ವಿಶ್ಲೇಷಣೆಗಳು.

ಆದರೆ, ಒಂದುವರೆ ತಿಂಗಳಿಂದ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಪ್ರತಿ ಕಾಲುಗಂಟೆ, ಅರ್ಧಗಂಟೆಗೊಮ್ಮೆ ಬೀಳುತ್ತಿದ್ದ ಕಲ್ಲುಗಳು ಸೋಮವಾರ ಮಾತ್ರ ಇಡೀ ದಿನ ಕಳೆದರೂ ಒಂದೇ ಒಂದು ಕಲ್ಲು ಬೀಳಲಿಲ್ಲ ಎನ್ನುವುದು ಕಟುವಾಸ್ತವ.

ಏನೋ ಕಿಡಿಗೇಡಿಗಳು ಮಾಡಿಬಹುದು, ಒಂದೆರಡು ದಿನಗಳಲ್ಲಿ ಸರಿಯಾಗುತ್ತೆ ಎಂದುಕೊಂಡಿದ್ದ ಇಲಾಖೆ ಅಧಿಕಾರಿಗಳಿಗೆ ಕೊನೆಗೆ ಇದು ಸವಾಲಾಗಿ ಪರಿಣಮಿಸಿತ್ತು. ದಿನೇ ದಿನೆ ಬೀಳುತ್ತಿರುವ ಕಲ್ಲುಗಳ ಸಂಖ್ಯೆ ಹೆಚ್ಚಾಗುತ್ತ ಹೋಯಿತು. ವಿದ್ಯಾರ್ಥಿಗಳಿಗೆ ಗಾಯಗಳಾದವು. ಎರಡು ದಿನ ಮಕ್ಕಳಿಗೆ ರಜೆ ಕೊಟ್ಟ ಮೇಲೆ ಪ್ರಕರಣ ಗಂಭೀರತೆ ಪಡೆದುಕೊಂಡಿತು. ಇದಕ್ಕೆ ಅಂತ್ಯ ಹಾಡಬೇಕು, ಮಕ್ಕಳು ಮತ್ತು ಪಾಲಕರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಯಿತು.

ಅಂತಿಮವಾಗಿ ಶಾಲೆಯಲ್ಲಿ ಐದು ಸಿಸಿಟಿವಿ ಕ್ಯಾಮರಾ ಅಳವಡಿಸಲಾಯಿತು. ಸೋಮವಾರ ಬೆಳ್ಳಂ ಬೆಳಗ್ಗೆ ಗುಳೇದಗುಡ್ಡ ಠಾಣೆ ಪಿಎಸ್ ಐ ನೂರ್‌ಜಾನ್ ಸಾಬರ್ ನೇತೃತ್ವದಲ್ಲಿ 10 ಹೆಚ್ಚು ಪೊಲೀಸರು ಶಾಲೆಯಲ್ಲಿ ಠಿಕಾಣಿ ಹೂಡಿದರು. ಜತೆಗೆ ಶಿಕ್ಷಣ ಇಲಾಖೆ ವತಿಯಿಂದ ವಿಜ್ಞಾನ ಪರಿವೀಕ್ಷಕ ಎಂ.ಎ. ಬಾಳೆಕಾಯಿ, ಪವಾಡ ಬಯಲು ರಹಸ್ಯ ಮಾಡುವ ಶಿಕ್ಷಕ ರಾಜಶೇಖರ ಮುತ್ತಿನಮಠ, ಮಹಾಲಿಂಗಪುರ ಜ್ಞಾನದೇಗುಲ ಸಂಸ್ಥಾಪಕ ಎಂ.ಎಸ್. ತೆಗ್ಗಿನಮಠ ನೇತತ್ವದಲ್ಲಿ ಶಿಕ್ಷಕರ ತಂಡ ಶಾಲೆಗೆ ಆಗಮಿಸಿತು.

ತಿಂಗಳಿಂದ ಪ್ರತಿದಿನ ವಿದ್ಯಾರ್ಥಿಗಳು ಶಾಲಾ ಕಾಂಪೌಂಡ್ ಪ್ರವೇಶ ಮಾಡುತ್ತಲೇ ಕಲ್ಲುಗಳು ಬೀಳಲು ಆರಂಭವಾಗುತ್ತವೆ ಎಂದು ಹೇಳಲಾಗುತ್ತಿತ್ತು. ಆದರೆ, ಸೋಮವಾರ ಮಾತ್ರ ಅಂತಹ ಸನ್ನಿವೇಶ ಕಂಡು ಬರಲಿಲ್ಲ. ಸಿಸಿಟಿವಿ ಅಳವಡಿಸಿದ್ದರಿಂದ ವಿದ್ಯಾರ್ಥಿಗಳಿಗೂ ಸಹ ಕಲ್ಲುಗಳು ಎಲ್ಲಿಂದ ಬರುತ್ತವೆ ಎನ್ನುವುದು ಗೊತ್ತಾಗುತ್ತೆ ಎನ್ನುವ ಧೈರ್ಯ ಮೂಡಿದಂತಿತ್ತು. ಹೀಗಾಗಿ ಶಾಲೆಯ 24 ವಿದ್ಯಾರ್ಥಿಗಳು ಪೈಕಿ ಪ್ರಾರ್ಥನೆ ವೇಳೆಗೆ 20 ಮಕ್ಕಳು ಹಾಜರಿದ್ದರು. ಬೆಳಗ್ಗೆಯಿಂದ ಸಂಜೆವರೆಗೂ ಒಂದೇ ಒಂದು ಕಲ್ಲು ಸಹ ಶಾಲಾ ಆವರಣದಲ್ಲಾಗಲಿ, ಕೊಠಡಿಯಲ್ಲಾಗಲಿ ಅಥವಾ ವಿದ್ಯಾರ್ಥಿಗಳು ನಡೆದುಕೊಂಡು ಹೋದ ಜಾಗದಲ್ಲಿ ಬಿದ್ದಿದ್ದು ಕಾಣಲೇ ಇಲ್ಲ.

ಶಾಲೆಯಲ್ಲಿ ನಡೆಯುತ್ತಿರುವುದು ಮಾಟ, ಮಂತ್ರ, ಭಾನಾಮತಿ ಕಾಟವಲ್ಲ. ಯಾರೋ ಕೆಲ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಯಾವುದೋ ಕಾರಣಕ್ಕೆ ಮಕ್ಕಳು ಮತ್ತು ಪಾಲಕರಲ್ಲಿ ಭೀತಿ ಸಷ್ಟಿಸಲು ಮಾಡಿರುವ ಬಾನಗಡಿ ಕೆಲಸ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಪವಾಡ ರಹಸ್ಯ ಬಯಲು
ಪವಾಡ ರಹಸ್ಯ ಬಯಲು ಮಾಡುವ ಶಿಕ್ಷಕ ಮುತ್ತಿನಮಠ ನೇತೃತ್ವದ ಶಿಕ್ಷಕರ ತಂಡ ಕೊಠಡಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅನೇಕ ಪವಾಡ ರಹಸ್ಯ ಬಯಲು ಮಾಡಿ ತೋರಿಸಿದರು. ಸಿಸಿಟಿವಿ ಇರುವುದರಿಂದ ಕೊಠಡಿಗಳಲ್ಲಿ ಯಾರೇ ಬಂದು ಹೋದರೂ ರೆಕಾರ್ಡ್ ಆಗುತ್ತದೆ ಎನ್ನುವ ವಾಸ್ತವ ತಿಳಿಸಿಕೊಟ್ಟರು. ಇದರಿಂದ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದ್ದ ಆತಂಕವೂ ಕಡಿಮೆ ಆದಂತೆ ಕಂಡು ಬಂತು.

ವಿಜಯವಾಣಿ/ದಿಗ್ವಿಜಯ ನ್ಯೂಸ್ ತಂಡದ ಹದ್ದಿನ ಕಣ್ಣು:
ಇಂಜಿನವಾರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂಢನಂಬಿಕೆ, ಕಂದಾಚಾರದ ಲವಾಗಿ ಮಕ್ಕಳಲ್ಲಿ ಆತಂಕ ಸೃಷ್ಟಿಯಾಗಿದೆ. ಇದಕ್ಕೆ ಭಾನಾಮತಿ ಕಾಟ ಕಾರಣ ಎನ್ನುವ ಗ್ರಾಮದ ಕೆಲವರ ಭೀತಿ ದೂರ ಮಾಡುವ ನಿಟ್ಟಿನಲ್ಲಿ ವಿಜಯವಾಣಿ/ದಿಗ್ವಿಜಯ ನ್ಯೂಸ್ ತಂಡ ಒಂದು ಕಣ್ಣು ನೆಟ್ಟಿತ್ತು. ಶುಕ್ರವಾರ ಬೆಳಗ್ಗೆಯೇ ಶಾಲೆಗೆ ತೆರಳಿ ಶಾಲೆಯ ಸುತ್ತಮುತ್ತ ಪರಿಶೀಲನೆ ನಡೆಸಿತ್ತು. ಮಧ್ಯಾಹ್ನದವರೆಗೂ ನಮ್ಮ ತಂಡ ಕ್ಯಾಮರಾ ಆನ್ ಮಾಡಿಕೊಂಡು ನಿಗಾವಹಿಸಿತ್ತು. ಆದರೆ, ಆ ಸಮಯದಲ್ಲಿ ಒಂದೇ ಒಂದು ಕಲ್ಲು ಸಹ ಬಿದ್ದಿರಲಿಲ್ಲ. ಆಗಲೇ ಇದು ಕಿಡಿಗೇಡಿಗಳ ಕತ್ಯ ಎನ್ನುವುದು ಗೋಚರಿಸಿತ್ತು. ಆದರೆ, ನಮ್ಮ ತಂಡ ಹಿಂತಿರುಗಿದ ಮೇಲೆ ಮತ್ತೆ ಕಲ್ಲು ಬಿದ್ದಿವೆ ಎನ್ನುವ ಪುಕಾರು ಎದ್ದಿತ್ತು. ಈ ಹಿನ್ನೆಲೆ ಸೋಮವಾರ ಬೆಳಗ್ಗೆ ಮತ್ತೆ ನಮ್ಮ ತಂಡ ಶಾಲೆಯಲ್ಲಿ ರಿಯಾಲಿಟಿ ಚೆಕ್ ಮಾಡಲು ತೆರಳಿತ್ತು. ಬೆಳಗ್ಗೆ ವಿದ್ಯಾರ್ಥಿಗಳ ಜತೆಗೆ ಪ್ರಾರ್ಥನೆ, ತರಗತಿಯ ಪಾಠ, ಊಟದ ವೇಳೆ ಮಕ್ಕಳ ಜತೆಗಿದ್ದು, ಧೈರ್ಯ ತುಂಬುವ ಕೆಲಸ ಮಾಡಿತು.

ಬಾಗಲಕೋಟೆ, ಪಾಲಕರು, ಕಲ್ಲು, ಶಾಲೆ, ಶಿಕ್ಷಕರು, Bagalkot, Parents, Stone, School, Teachers,

Leave a Reply

Your email address will not be published. Required fields are marked *