ಸಿವಿಲ್ ಕೆಲಸಕ್ಕೆ ವಾಚರ್​ಗಳು

ಕಾರವಾರ: ಅರಣ್ಯ ಗಡಿ ಗುರುತಿಸುವ ಕಾರ್ಯವನ್ನು ಇಲಾಖೆ ಅಧಿಕಾರಿಗಳು ಟೆಂಡರ್ ಕರೆದು ಗುತ್ತಿಗೆದಾರರ ಮೂಲಕ ಮಾಡಿಸುವ ಬದಲು ಇಲಾಖೆಯ ವಾಚರ್(ವೀಕ್ಷಕರು)ಗಳನ್ನೇ ಬಳಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.

ಕಾಡ್ಗಿಚ್ಚು ತಾಂಡವವಾಡುತ್ತಿರುವ ಬೇಸಿಗೆ ಅವಧಿಯಲ್ಲಿ ವಾಚರ್​ಗಳನ್ನು ಸಿವಿಲ್ ಕಾರ್ಯಗಳಿಗೆ ನೇಮಿಸಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟಿದೆ.

ನಕಾಶೆಯಂತೆ ಅರಣ್ಯ ಗಡಿಯನ್ನು ಗುರುತಿಸಿ ಕಲ್ಲು ಅಥವಾ ಸಿಮೆಂಟ್ ಫಿಲ್ಲರ್​ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತದೆ. ಅರಣ್ಯ ಇಲಾಖೆಯ ರ್ವಂಗ್ ಪ್ಲಾನ್ ವಿಭಾಗ ಈ ಕಾಮಗಾರಿ ಕೈಗೊಳ್ಳಬೇಕು. ಆದರೆ, ಅಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಅವರಿಂದ ನಕಾಶೆಯನ್ನು ಪಡೆದು ಇಲ್ಲಿನ ಅರಣ್ಯಾಧಿಕಾರಿಗಳೇ ಆ ಕಾರ್ಯ ನಡೆಸುತ್ತಾರೆ.

ನಕಾಶೆಯಂತೆ ಗಡಿಯನ್ನು ಗುರುತಿಸಿ ಪ್ರತಿ ತಿರುವಿನ ಜಾಗದಲ್ಲಿ ಸಿಮೆಂಟ್ ಫಿಲ್ಲರ್​ನ್ನು ನೆಟ್ಟು ಅದರ ಮೇಲೆ ಜಿಪಿಎಸ್ ಪಾಯಿಂಟ್ ಬರೆದು, ಅರಣ್ಯ ಇಲಾಖೆ ಹೆಸರು ಹಾಕುವ ಕಾರ್ಯ ಇದಾಗಿದೆ. 1 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಕಾಮಗಾರಿ ಆಗಿದ್ದರಿಂದ ನಿಯಮದನ್ವಯ ಆಯಾ ವಿಭಾಗದಿಂದ ಟೆಂಡರ್ ಕರೆದು ಕಾಮಗಾರಿ ಸ್ಥಳ ಗುರುತಿಸಿ ಆಯಾ ವಲಯದ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಮಗಾರಿ ಮಾಡಿಸಲಾಗುತ್ತದೆ.

ಕೆನರಾ ವೃತ್ತದ ವಿವಿಧ ಅರಣ್ಯ ವಿಭಾಗಗಳಲ್ಲಿ 2018-19 ನೇ ಸಾಲಿನಲ್ಲಿ ಕಾಮಗಾರಿ ನಡೆದಿದೆ. ಆದರೆ, ನಿಯಮದನ್ವಯ ಟೆಂಡರ್ ಕರೆಯದೇ ಫಾರೆಸ್ಟ್ ವಾಚರ್​ಗಳು, ಹಾಗೂ ಇತರ ಸಿಬ್ಬಂದಿ ಮೂಲಕವೇ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳ ಸೂಚನೆಯಂತೆ ಫಾರೆಸ್ಟ್ ವಾಚರ್​ಗಳು ಅರಣ್ಯ ಇಲಾಖೆಯ ಜಾಗದಲ್ಲೇ ಸಿಮೆಂಟ್ ಫಿಲ್ಲರ್​ಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

1 ಲಕ್ಷಕ್ಕೂ ಅಧಿಕ ಮೊತ್ತದ ಸಿವಿಲ್ ಕಾಮಗಾರಿಯನ್ನು ಟೆಂಡರ್ ಕರೆಯದೇ ಮಾಡಿರುವುದು ನಿಯಮದ ಉಲ್ಲಂಘನೆಯಾಗಿದೆ. ಬೇಸಿಗೆ ಸಂದರ್ಭದಲ್ಲಿ ವಾಚರ್​ಗಳನ್ನು ತೊಡಗಿಸಿಕೊಂಡು ಕಾಮಗಾರಿ ನಡೆಸುತ್ತಿರುವ ಬಗ್ಗೆ ಅವರಿಂದಲೇ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.

ಅರಣ್ಯ ಗಡಿ ಗುರುತಿಸುವ ಕಾರ್ಯ ನಮ್ಮ ವ್ಯಾಪ್ತಿಯಲ್ಲಿ ಕಳೆದ ವರ್ಷದಿಂದ ನಡೆದಿದೆ. ಟೆಂಡರ್ ಕರೆದೇ ಕಾಮಗಾರಿ ನಡೆಸಲಾಗಿದೆ. ಈ ಬಾರಿ ಒಂದಿಷ್ಟು ಹೆಚ್ಚುವರಿ ಕಾಮಗಾರಿಗಳನ್ನು ಪಡೆಯಲಾಗಿದೆ. ಕೆಲವೆಡೆ ಅರಣ್ಯ ಗಡಿ ಗುರುತಿಸುವ ಸಂಬಂಧ ಸಾರ್ವಜನಿಕರಿಂದ ವಿರೋಧಗಳು ವ್ಯಕ್ತವಾಗುವುದರಿಂದ ಖಾಸಗಿಯವರಿಂದ ಈ ಕಾರ್ಯ ಸಾಧ್ಯವಿಲ್ಲ. ಇದರಿಂದ ಖುದ್ದು ಅರಣ್ಯಾಧಿಕಾರಿಗಳೇ ಈ ಕಾರ್ಯ ನಡೆಸುತ್ತಿದ್ದಾರೆ. | ಕೆ. ಗಣಪತಿ ಡಿಎಫ್​ಒ, ಕಾರವಾರ