ಸಿಲ್ವರ್ ಮರಗಳು, ಜೋಳದ ಕಡ್ಡಿಗೆ ಬೆಂಕಿ

ವೈಯಕ್ತಿಕ ದ್ವೇಷದಿಂದ ಕಿಡಿಗೇಡಿಗಳ ಕೃತ್ಯಪಟ್ಟಣ ಪೊಲೀಸ್ ಠಾಣೆಗೆ ದೂರು

ಪಿರಿಯಾಪಟ್ಟಣ : ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ಸಿಲ್ವರ್ ಮರಗಳು ಹಾಗೂ ಸಂಗ್ರಹಿಸಿಡಲಾಗಿದ್ದ ಜೋಳದ ಕಡ್ಡಿಗಳಿಗೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮಲ್ಲಿನಾಥಪುರ ಗ್ರಾಮದ ಎಂ.ಎಸ್.ಸ್ವಾಮಿಗೌಡ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗ್ರಾಮದ ಕೆಲವು ಸಂಬಂಧಿಗಳು ಶಿವರಾತ್ರಿ ಹಬ್ಬದಂದು ರಾತ್ರಿ 7.30ರಲ್ಲಿ ಶುಂಠಿ ಬೆಳೆಗೆ ಮುಚ್ಚಲೆಂದು ಜಮೀನಿನಲ್ಲಿ ಸಂಗ್ರಹಿಸಿಡಲಾಗಿದ್ದ 7-8 ಟ್ರಾೃಕ್ಟರ್ ಜೋಳದ ಕಡ್ಡಿಗಳಿಗೆ ಬೆಂಕಿ ಹಾಕಿ ನಾಶಪಡಿಸಿದ್ದಾರೆ. ಹಾಗೆಯೇ ಬುಧವಾರ ರಾತ್ರಿ ಮತ್ತೊಂದು ಜಮೀನಿನಲ್ಲಿ ಬೆಳೆದಿದ್ದ ಸಿಲ್ವರ್ ಮರಗಳಿಗೆ ಬೆಂಕಿ ಹಾಕಿದ್ದರು. ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಸುಮಾರು ರೂ. 2 ಲಕ್ಷದ ಮೌಲ್ಯದ 50 ಸಿಲ್ವರ್ ಮರಗಳು ಮತ್ತು 2 ಹೊನ್ನೆ ಮರ ಬೆಂಕಿಗೆ ಆಹುತಿಯಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ನನಗೂ ಹಾಗೂ ನನ್ನ ದೊಡ್ಡಪ್ಪನ ಮಗ ನಂಜೇಗೌಡನಿಗೆ ಕೆಲ ವಿಷಯಗಳಲ್ಲಿ ಮನಸ್ತಾಪವಿದ್ದು, ಇದರಿಂದಾಗಿಯೇ ನಂಜೇಗೌಡ ಈ ಕೃತ್ಯ ಎಸೆಗಿದ್ದಾನೆ ಎಂದು ಸ್ವಾಮಿಗೌಡ ಆರೋಪಿಸಿದ್ದಾರೆ. ಜಮೀನಿಗೆ ಬೆಂಕಿ ಹಾಕಿ ನಂಜೇಗೌಡ ಮತ್ತು ಆತನ ಪತ್ನಿ ಸ್ಥಳದಿಂದ ಓಡಿಹೋಗುತ್ತಿದ್ದನ್ನು ಗ್ರಾಮಸ್ಥರು ಗಮನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕೃತ್ಯವನ್ನು ಎಸಗಿರುವ ನಂಜೇಗೌಡ ಮತ್ತು ಆತನ ಪತ್ನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟಣದ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

07ಪಿವೈಪಿ0102: ಪಿರಿಯಾಪಟ್ಟಣ ತಾಲೂಕಿನ ಮಲ್ಲಿನಾಥಪುರ ಗ್ರಾಮದಲ್ಲಿ ಕಿಡಿಗೇಡಿಗಳು ಹಾಕಿದ ಬೆಂಕಿಯಿಂದ ಸುಟ್ಟುಹೋಗಿರುವ ಸಿಲ್ವರ್ ಮರಗಳು.
=-=-=-=-=-=-=-=-=-=-=-=-=-=-=-=-=-=-=-=-=-