ಸಿರಿಕಂಠದ ಗಾಯಕಿ ಎಚ್.ಆರ್.ಲೀಲಾವತಿ

| ಸಂಧ್ಯಾ ಅಜಯ್ ಕುಮಾರ್

ಗಾಯಕಿಯಾಗಿ, ಲೇಖಕಿಯಾಗಿ ಹೆಸರು ಮಾಡಿ, ಎಚ್.ಆರ್.ಎಲ್ ಎಂದೇ ಹೆಸರುವಾಸಿಯಾಗಿರುವ ಎಚ್.ಆರ್. ಲೀಲಾವತಿ ಅವರದ್ದು ಬಹುಮುಖ ಪ್ರತಿಭೆ. ಆಕಾಶವಾಣಿ ಕಲಾವಿದೆಯಾಗಿ ಜನಪ್ರಿಯರಾಗಿರುವ ಎಚ್ಆರ್.ಎಲ್. ಸುಗಮಸಂಗೀತಕ್ಕೆ ವಿಶೇಷ ಕೊಡುಗೆಯನ್ನು ನೀಡಿದವರು. ಈ ಬಾರಿಯ ಆಳ್ವಾಸ್ ನುಡಿಸಿರಿಯ ಪ್ರಶಸ್ತಿಯೂ ಅವರಿಗೆ ಲಭ್ಯ. ಒಬ್ಬ ಹೆಣ್ಣು ಮಗಳು ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಅನ್ವರ್ಥನಾಮ ಅಂದರೆ ಅದು ಹೆಚ್.ಆರ್,ಲೀಲಾವತಿ. ಇವರ ಬದುಕಿನ ಹೆಜ್ಜೆಗುರುತು ಇಲ್ಲಿದೆ.

ಉಡುಗಣವೇಷ್ಟಿತ ಚಂದ್ರಸುಶೋಭಿತ ದಿವ್ಯಾಂಬರ ಸಂಚಾರಿ…ಎನ್ನುವ ಸಾಲುಗಳು ಡಾ.ಜಿ.ಎಸ್.ಶಿವರುದ್ರಪ್ಪನವರದ್ದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅದನ್ನು ಹಾಡಿ ಜನಪ್ರಿಯಗೊಳಿಸಿದ ಮೊದಲ ನಾಮಧೇಯ ಹೆಚ್.ಆರ್.ಲೀಲಾವತಿಯವರಿಗೆ ಸಲ್ಲುತ್ತದೆ. ಗ್ರಾಮಾಫೋನ್ ಕಾಲದಲ್ಲಿ ರೇಡಿಯೋ ಪ್ರಚಲಿತ ವಿದ್ಯಮಾನ ಎನಿಸಿದಾಗ ಹೆಚ್ಚು ಹೆಚ್ಚು ಕಿವಿಗೆ ಇಂಪು ನೀಡಿದ ದನಿ ಹೆಚ್.ಆರ್.ಲೀಲಾವತಿಯವರದ್ದು. ಒಬ್ಬ ಗಾಯಕಿಯಾಗಿ ಸಾಧಸಿದ್ದಲ್ಲದೆ ಇತರ ಕ್ಷೇತ್ರಗಳಲ್ಲೂ ಅವರ ಆಸಕ್ತಿ ಹೆಚ್ಚಿದೆ. ಅವರು ಗಾಯಕಿ ಮಾತ್ರವಲ್ಲದೇ, ರಾಗಸಂಯೋಜಕಿ, ಶಿಸ್ತಿನ ಶಿಕ್ಷಕಿ, ಕವಯಿತ್ರಿ, ಲೇಖಕಿ, ಜೊತೆಗೆ 82ರ ವಯಸ್ಸಿನಲ್ಲಿಯೂ ಅದೇ ಕಟ್ಟುನಿಟ್ಟನ್ನು ಪಾಲಿಸುತ್ತಿರುವವರು. ಮಾತು ಕಠಿಣ ಎನ್ನಿಸಿದರೂ ಹೂಮನಸ್ಸಿನ ಹೆಚ್.ಆರ್.ಲೀಲಾವತಿಯವರ ಸಾಧನೆ ಕುರಿತು ಅರಿಯುತ್ತ ಹೋದಂತೆ ಒಬ್ಬ ಸಾಧಕಿಯ ಬದುಕಿನ ಅನಾವರಣ ಇಲ್ಲಾಗುತ್ತದೆಂಬುದರಲ್ಲಿ ಅತಿಶಯೋಕ್ತಿಯಲ್ಲ. ನೇರ ನಡೆ ನುಡಿ ವ್ಯಕ್ತಿತ್ವದ ಹೆಚ್.ಆರ್.ಲೀಲಾವತಿ ಇಂದಿಗೂ ಕೂಡಾ ಅದನ್ನೇ ಪಾಲಿಸಿಕೊಂಡು ಬಂದು ಹಿರಿತನದ ಚಿಲುಮೆಯಾಗಿ ಕಿರಿಯರೊಟ್ಟಿಗೂ ಬೆರೆಯುತ್ತಾರೆ. ಅದೆಷ್ಟೇ ಕಿರಿಯರಾಗಿರಲಿ, ನಿನ್ನಿಂದ ಸಾಧ್ಯ, ನೀನು ಕಲಿ ಎಂದು ಹುರಿದುಂಬಿಸುವ ಹಿರಿತನ ಅವರಲ್ಲಿದೆ.

ಹೆಚ್ ಆರ್ ಲೀಲಾವತಿ ಹುಟ್ಟಿದ್ದು ಬೆಂಗಳೂರಾದರೂ ಬೆಳೆದದ್ದೆಲ್ಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಅಠಾಣ ರಾಮಣ್ಣರೆಂದೇ ಚಿರಪರಿಚಿತರಾಗಿದ್ದ ತಂದೆ ಗಮಕ, ರಂಗಗೀತೆಗಳನ್ನು ಪ್ರಚಾರಕ್ಕೆ ತಂದವರು. ನಿಜ ಹೆಸರು ಹಾಸನ ರಾಮಣ್ಣ, ತಾಯಿ ನಾಟಕ ರಂಗದ ಕೊಟ್ಟೂರಪ್ಪರವರ ಶಿಷ್ಯೆ ಜಯಲಕ್ಷಮ್ಮ. ಹೀಗೆ ಮನೆಯಲ್ಲಿ ಸಂಗೀತ, ನಾಟಕದ ವಾತಾವರಣವಿದ್ದುದರಿಂದ ಲೀಲಾವತಿಯವರಿಗೆ ಹಾಡುವ ಕಲೆ ರಕ್ತಗತವಾಗಿಯೇ ಬಂತು. 1923ರ ಸಂದರ್ಭದಲ್ಲಿ ಲೀಲಾವತಿಯವರ ತಂದೆ, ಬಿ.ಎಂ.ಶ್ರೀಯವರ ಗೀತೆಗಳಿಗೆ ರಾಗ ಹಾಕುತ್ತಿದ್ದರಂತೆ. ಆ ಗೀತೆಗಳನ್ನು ಆಕಾಶವಾಣಿಯಲ್ಲಿ ಹಾಡಿ ಭೇಷ್ ಎನಿಸಿಕೊಂಡವರು ಲೀಲಾವತಿ. ತಮ್ಮ ಐದನೇ ವಯಸ್ಸಿಗೇ ವೇದಿಕೆಯಲ್ಲಿ ಹಾಡಿದ ಕೀರ್ತಿ ಇವರದ್ದು. ಏಳು ವರ್ಷವಾದಾಗ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಿಡಬೇಕೆಂಬ ಬಯಕೆಯನ್ನು ಹೊತಿ ್ತ ದ್ದರಂತೆ.

ಹೀಗೆ ಒಬ್ಬ ಸಂಗೀತಗಾರ್ತಿಯಾಗಬೇಕೆಂಬ ಬಯಕೆ ಅವರ ಮನದಲ್ಲಿ ಅವರಿಗರಿವಿಲ್ಲದಂತೆಯೇ ಮೊಳೆಯುತ್ತಿತ್ತು. ಲೀಲಾವತಿಯವರ ವಿದ್ಯಾಭ್ಯಾಸ ಮೈಸೂರು ವಿ ವಿ ಯಲ್ಲಿ ಬಿ.ಎ.ಪದವಿ. ಸಂಗೀತ ವಿದ್ಯಾನಿಧಿ ದಿವಂಗತ ಎನ್ ಚೆನ್ನಕೇಶವಯ್ಯ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡುತ್ತಿದ್ದಂತೆ, ದಿ.ಎ.ವಿ.ಕೃಷ್ಣಮಾಚಾರ್ಯ(ಪದ್ಮಚರಣ್) ಅವರ ಬಳಿ ಭಾವಗೀತೆ, ಹಿಂದಿಗೀತೆ, ಹಿಂದಿ ಭಜನೆಗಳ ಕಲಿಕೆ ನಡೆಸಿ, ಕೋಲ್ಕತ್ತಾದ ಜ್ಞಾನಪ್ರಕಾಶ್ ಫ್ರೋಷ್ ಹಾಗೂ ಗುವಾಹಟಿಯ ದೇಬೇನ್ ಶರ್ವರಲ್ಲಿ ಹಿಂದಿ ಹಾಗೂ ಅಸ್ಸಾಮಿ ಗೀತೆಗಳನ್ನು ಕಲಿತು, ನಾಗಪುರದ ಬಿ.ಸುಬ್ಬರಾವ್ ರಲ್ಲಿ ಹಿಂದಿಯಲ್ಲಿ ವರ್ಣಗಳು ಹಾಗೂ ಭಕ್ತಿಗೀತೆಗಳನ್ನು ಕಲಿತಿದ್ದಾರೆ. ಹೀಗೆ ಅವರೊಬ್ಬ ದೊಡ್ಡ ಗಾಯಕಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದರು. ಮೈಸೂರು ಆಕಾಶವಾಣಿಯಲ್ಲಿ ’ಎ’ಟಾಪ್ ದರ್ಜೆಯ ಸಂಗೀತ ಸಂಯೋಜಕಿಯಾಗಿದ್ದು ತಮ್ಮ ಕಾರ್ಯ ಪ್ರವೃತ್ತಿ ಆರಂಭಿಸಿದ ಲೀಲಾವತಿಯವರು, ಕನ್ನಡ ಭಾವಗೀತೆಗಳು, ದೇವರನಾಮ, ವಚನಗಾಯನ, ಜಾನಪದ ಸಂಗೀತವನ್ನು ಶ್ರೋತೃಗಳಿಗೆ ಉಣಬಡಿಸಿದರು. ಹಿಂದಿ ಗೀತೆ ಹಾಗೂ ಭಜನ್ಸ್ ಗಳಲ್ಲಿ ಆಕಾಶವಾಣಿ ’ಬಿ’ಹೈಗ್ರೇಡ್ ಕಲಾವಿದರು ಅಲ್ಲದೇ ಸಂಗೀತ ಸಂಯೋಜಕಿಯಾಗಿ ಸಂಗೀತ ರೂಪಕಗಳು, ನಾಟಕಗಳು ಇತ್ಯಾದಿ ಸಂಗೀತ ಸಂಯೋಜನೆ ಪ್ರಸಾರ ಮಾಡಲಾಗಿದ್ದು, ಬೆಂಗಳೂರು, ಮೈಸೂರು,ಧಾರವಾಡ, ಮಂಗಳೂರು ಆಕಾಶವಾಣಿ ನಿಲಯಗಳಲ್ಲಿ ಹಾಗೂ ದೂರದರ್ಶನದಲ್ಲಿ ಸಂಯೋಜಕಿಯಾಗಿ ಕಂಗೊಳಿಸಿದರು. ಅಲ್ಲದೇ ವಿವಿಧ ಭಾಷೆಗಳಲ್ಲಿ ಭಕ್ತಿಗೀತೆಗಳನ್ನು ಹಾಗೂ ಭಾವಗೀತೆಗಳನ್ನು ಹಾಡಿ ತಮ್ಮ ಕಲಾ ಸಾಮರ್ಥ್ಯ ಮೆರೆದವರು ಹೆಚ್.ಆರ್.ಲೀಲಾವತಿ.

ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಪ್ರತಿಷ್ಠಿತ ವೇದಿಕೆಗಳಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಗಾಯನ, ಭಾರತದ ಬಹುಭಾಗಗಳಲ್ಲಿ ಹಿಂದಿ ಹಾಗೂ ಕನ್ನಡ ಭಾವಗೀತೆಗಳನ್ನು ಹಾಡಿದ್ದಾರೆ. ಅಮೆರಿಕದ ಹಲವಾರು ಕಡೆಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಪತಿ ಎಸ್.ಜಿ.ರಘುರಾಂ ಅವರ ಸ್ವರಸಂಯೋಜನೆಯ ಮಾಡ್ಗೂಳ್ಕರ್ ಅವರ ಮರಾಠಿ ಗೀತ ರಾಮಾಯಣದ ಕನ್ನಡ ಅವತರಣಿಕೆಯ ಅನೇಕ ಕಾರ್ಯಕ್ರಮಗಳಲ್ಲಿ ಹಾಡಿ ಜನಮನ್ನಣೆ ಗಳಿಸಿದ್ದಾರೆ. 1983 ರಲ್ಲಿ ಅಮೆರಿಕೆಯ ಟ್ರೆಂಟನ್ ನಗರದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಸರ್ಕಾರದ ವತಿಯಿಂದ ಕಳುಹಿಸಲ್ಪಟ್ಟ ಪ್ರಪ್ರಥಮ ರಾಯಭಾರಿ ಅಂದರೆ ಹೆಚ್.ಆರ್.ಲೀಲಾವತಿ ಹಾಗು ಅವರ ಪತಿ ರಘುರಾಂ. 1998 ರಲ್ಲಿ ಅಮೆರಿಕದ ಫೀನಿಕ್ಸ್ ನಗರದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿಯೂ ಭಾಗಿಯಾಗಿದ್ದರು.

ಫ್ರಭು ಲಿಂಗಲೀಲೆ, ಪಾಪ-ಪುಣ್ಯ,ಸಾವಿತ್ರಿ, ಹಾಗೂ ರಾಷ್ಟ್ರಕವಿ ಕುವೆಂಪುರವರ ಸಾಕ್ಷ್ಯಚಿತ್ರದಲ್ಲಿ ಹಾಡಿದ್ದಾರೆ. ಇವರ ರಾಗಸಂಯೋಜಿತ ಅನೇಕ ಭಾವಗೀತೆಗಳು, ಭಕ್ತಿಗೀತೆಗಳು ಕ್ಯಾಸೆಟ್ ಹಾಗೂ ಸಿಡಿಗಳ ರೂಪದಲ್ಲಿ ಮುದ್ರಿತವಾಗಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಅಧ್ಯಕ್ಷೆಯಾಗಿ 2001-04ರ ವರೆಗೆ ಅಧಿಕಾರದಲ್ಲಿದ್ದು, ದಕ್ಷಿಣ ಭಾರತ ಸಂಗೀತ ಅಕಾಡಮಿ ತಂಜಾವೂರು ಇದರ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದರು. ಕೇಂದ್ರ ಸಂಗೀತ ಅಕಾಡಮಿ ನಾಗಪುರ, ಇದರ ಸದಸ್ಯೆಯೂ ಆಗಿದ್ದರು. ಬೆಂಗಳೂರು ಸಂಗೀತ ಗಂಗಾ ಸಂಸ್ಥೆಯ ಚಿಕ್ಕಮಗಳೂರಿನಲ್ಲಿ ನಡೆಸಿದ ಸಂಗೀತ ಸಮ್ಮೇಳನದ ಅಧ್ಯಕ್ಷೆಯಾಗಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತು ನಡೆಸಿದ ಸಂಗೀತ ಸಮ್ಮೇಳನದ ಅಧ್ಯಕ್ಷೆಯಾಗಿ, ಆಕಾಶವಾಣಿ ಧ್ವನಿ ಪರೀಕ್ಷಾ ಪ್ಯಾನಲ್ ಸದಸ್ಯೆಯಾಗಿ, ಚಲನಚಿತ್ರ ಮಂಡಳಿಯ ಆಯ್ಕೆ ಸಮಿತಿ ಸದಸ್ಯೆಯಾಗಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದವರು ಲೀಲಾವತಿ.

ಲೇಖಕಿಯಾಗಿ-

ಎಚ್.ಆರ್.ಎಲ್.ಅವರ ಆಸಕ್ತಿಯ ವಿಸ್ತಾರ ಹತ್ತುಹಲವು. ಸಂಗೀತ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿರದೆ ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದು, 1982ರಲ್ಲಿ ಫ್ಯಾಮಿಲಿ ಪ್ಲಾನಿಂಗ್ ಫೌಂಡೇಷನ್ ಆಫ್ ಇಂಡಿಯಾ ಏರ್ಪಡಿಸಿದ್ದ ನಾಟಕ ಸ್ಪರ್ಧೆಯಲ್ಲಿ ಹೆಚ್.ಆರ್.ಎಲ್ ರ ಮಧುಚಂದ್ರ ನಾಟಕಕ್ಕೆ ಮೊದಲ ಬಹುಮಾನ ಬಂದಿದ್ದು ಇದಕ್ಕೊಂದು ಸಾಕ್ಷಿ. ಮೈಸೂರು ಆಕಾಶವಾಣಿಗಾಗಿ ತಯಾರಿಸಿ ನಿಸರ್ಗ ವಂದನ ಸಂಗೀತ ರೂಪಕಕ್ಕೆ ಆಕಾಶವಾಣಿಯ ರಾಜ್ಯ ಪ್ರಶಸ್ತಿಯು ಹೆಚ್.ಆರ್.ಎಲ್ ಅವರಿಗೆ ದೊರಕಿದೆ. ಅನೇಕ ಕತೆ, ಕಾದಂಬರಿಗಳನ್ನೂ ಬರೆದಿದ್ದಾರೆ.

ಯಾವುದನ್ನೂ ಅಪೇಕ್ಷಿಸದ ಹೆಚ್.ಆರ್.ಎಲ್ ಇಂದೂ ಕೂಡ ಅದೇ ಚಾಕಚಕ್ಯತೆಯಿಂದ ಎಲ್ಲಿಂದ ಎಲ್ಲಿಯವರೆಗೂ ಕಾರ್ಯಕ್ರಮ ನೀಡಲು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಹೋಗಿಬರುತ್ತಾರೆ. ಇಂದಿಗೂ ಕೂಡಾ ಕವಿಗಳ ವಿಚಾರ, ಕಾವ್ಯಧಾರೆ, ಹಾಡಿದವರು, ಸ್ವರಸಂಯೋಜಕರು, ಇಂಥವರದ್ದೇ ಹಾಡು ಎಂದು ಹೇಳುವ ಇವರ ಜ್ಞಾಪಕಶಕ್ತಿಗೆ ಶಿರಬಾಗಲೇಬೇಕು.

ಇಂದಿನ ದಿನಗಳಲ್ಲಿ ಸುಗಮ ಸಂಗೀತ ಕ್ಷೇತ್ರ ತನ್ನ ಛಾಪನ್ನ ಮೂಡಿಸುತ್ತಿದೆಯಾದರೂ, ಉದಯೋನ್ಮುಖ ಗಾಯಕರು ಅದರ ಗಮ್ಯತೆಯನ್ನು ಅರ್ಥೈಸಿಕೊಳ್ಳುತ್ತಿಲ್ಲ. ವೇಗವಾದ ಬೆಳವಣಿಗೆ ಶಾಶ್ವತ ಅಲ್ಲ ಅನ್ನುವುದನ್ನು ಅರಿತು, ವೇದಿಕೆಗೆ ಮಾತ್ರ ಸೀಮಿತರಾಗಬಾರದು. ಇದರಲ್ಲಿ ಪಾಲಕರ ಪಾತ್ರವೂ ಅತಿ ಮುಖ್ಯ. ಮಕ್ಕಳ ಕಲೆಯನ್ನು ಪೋ›ತ್ಸಾಹಿಸುವ ನಿಟ್ಟಿನಲ್ಲಿ ಸಂಗೀತವನ್ನು ಕಲಿಯಲೇಬೇಕು, ಕಲಿತು ಟಿ.ವಿ.ಯಲ್ಲಿ ಹಾಡಲೇಬೇಕು ಎನ್ನುವ ಹುಚ್ಚುತನ ಬಿಟ್ಟು, ಪಕ್ವತೆಯತ್ತ ಗಮನಹರಿಸಬೇಕು. ಕಲೆ, ಕಲಾವಿದರನ್ನು ಬೆಳೆಸುತ್ತದೆ. ಹಾಗೆಯೇ ಆಸಕ್ತಿ, ಶ್ರದ್ಧೆ ಜೊತೆಗೆ ನಿರಂತರ ಅಭ್ಯಾಸ ಅತ್ಯಂತ ಪ್ರಮುಖವಾದದ್ದು. ನಾನು ಹಾಡುವುದೇ ಸರಿ ಎಂಬ ಗರ್ವ,ದರ್ಪ ಇದ್ದಲ್ಲಿ ಅಂಥವರು ಮುಂಬರಲು ಸಾಧ್ಯವೇ ಇಲ್ಲ. ಇವತ್ತು ಸಕಲ ಸೌಕರ್ಯಗಳು ಸುಲಭವಾಗಿ ಲಭಿಸುವ ಕಾಲ. ನಮ್ಮ ಕಾಲದ ಕಷ್ಟದ ದಿನಗಳು ಈಗಿಲ್ಲ.ಎಲ್ಲವೂ ಕೈಗೆಟಕುವ ಇಂದಿನ ದಿನಮಾನಗಳಲ್ಲಿ ಸಂಗೀತ ಕ್ಷೇತ್ರ ವಿಸ್ತರಿಸಿದೆ. ವೇದಿಕೆಗಳು, ನಿರಂತರ ಕಾರ್ಯಕ್ರಮಗಳು, ಅಲ್ಲದೇ ರಿಯಾಲಿಟಿ ಶೋಗಳು ಆಕರ್ಷಣೀಯ ನಿಜ. ಆದರೆ ಅದೇ ಮುಖ್ಯ ಎಂದಾಗಬಾರದು. ನಿತ್ಯ ಅಭ್ಯಾಸ, ಕಲಿಕೆ ಗುರುಭಕ್ತಿ, ಎಲ್ಲವೂ ಮಾನವೀಯ ಮೌಲ್ಯಗಳಲ್ಲಿ ಒಂದು. ಹೀಗಿರುವಾಗ ಉದಯೋನ್ಮುಖ ಗಾಯಕರು ಸಂಗೀತದ ತಳಹದಿ ಇಲ್ಲದೇ ಮೆರದಾಡುವುದನ್ನು ನೋಡಿದರೆ ಹಿಂಸೆಯಾಗುತ್ತದೆ. ಪ್ರತಿಭೆ ತನ್ನ ಸೌಂದರ್ಯ, ವಸ್ತ್ರವಿನ್ಸಾಸದಿಂದ ಕಾಪಾಡುವಂಥದ್ದಲ್ಲ. ಪರಿಶ್ರಮದಿಂದ ಕಲಿತು ಹಾಡಿದರೆ ಕೇಳುಗರಿಗೂ ಹೆಚ್ಚು ಆಪ್ತವಾಗುತ್ತದೆ. ಸಂಗೀತ ಜ್ಞಾನ, ಸಮಯ ಪರಿಪಾಲನೆ ಹೀಗಿ ಪ್ರತಿಯೊಂದು ಅಂಶವೂ ಮೌಲಿಕವಾದದ್ದು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ ಎಂದು ಇಂದಿನವರಿಗೆ ಕಿವಿಮಾತು ಹೇಳುತ್ತಾರೆ ಎಚ್.ಆರ್.ಎಲ್.

ಸುಗಮಸಂಗೀತಕ್ಕಾಗಿರುವ ಪ್ರಥಮ ಸಂಸ್ಥೆ

1985ರಲ್ಲಿ ಕರ್ನಾಟಕ ಸುಗಮ ಸಂಗೀತದ ಏಳಿಗೆಗಾಗಿ ಪ್ರಪ್ರಥಮವಾಗಿ ಹುಟ್ಟುಹಾಕಿದ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ನ ಆರಂಭದ ಕಾರ್ಯಕರ್ತೆ ಹೆಚ್.ಆರ್ ಲೀಲಾವತಿ. ಅಕಾಡೆಮಿ ವತಿಯಿಂದ ಸಾವಿರಾರು ವಿದ್ಯಾರ್ಥಿಗಳು ಸುಗಮ ಸಂಗೀತ ಕಲಿಕೆಯ ಜೊತೆಗೆ ಆಕಾಶವಾಣಿ, ದೂರದರ್ಶನ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಇದರ ಹಿಂದಿನ ಶಕ್ತಿ ಲೀಲಾವತಿ ಎಂಬುದು ಹೆಮ್ಮೆಯ ವಿಷಯ.

ಲತಾಮಂಗೇಷ್ಕರ್ ಮೆಚ್ಚಿನ ಗಾಯಕಿ

ಲತಾಮಂಗೇಷ್ಕರ್ ಅವರನ್ನು ಬಹುವಾಗಿ ಮೆಚ್ಚುವ ಲೀಲಾವತಿ ಅವರು, ತಮ್ಮ ಮನೆಗೆ ‘ಜಯಲತ’ ಎಂದು ಹೆಸರು ಕೊಟ್ಟಿದ್ದಾರೆ. ‘ಜಯ’ ಎಂಬುದು ಹೆಚ್.ಆರ್.ಲೀಲಾವತಿಯವರ ತಾಯಿ ಜಯಲಕ್ಷ್ಮಮ್ಮ ಎಂದಾದರೆ ‘ಲತ’ಎಂಬುದು ಲತಾಮಂಗೇಷ್ಕರ್ ಅಂತೆ. ಮನೆಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಪ್ರೀತಿಯಿಂದಲೇ ಕರೆದು ಉಪಚರಿಸಿ ಹೀಗೇ ಕಲಿಯಬೇಕೆಂದು ಸಂಗೀತ ಪಾಠವನ್ನು ಹೇಳಿಕೊಡುತ್ತಿದ್ದರು. ಈಗಲೂ ಕೂಡಾ ಹೆಚ್.ಆರ್.ಲೀಲಾವತಿಯವರು ಬರುತ್ತಿದ್ದಾರೆ ಎಂದರೆ ಎಷ್ಟೇ ವಯಸ್ಸಿನ ವಿದ್ಯಾರ್ಥಿಯಾಗಲಿ ಎದ್ದು ನಿಂತು ನಮಸ್ಕರಿಸುತ್ತಾರೆ. ನಾನು ನನ್ನ ಗುರುಗಳನ್ನು ಲೀಲಾವತಿ ಎಂದೇ ಕರೆಯುವುದು. ಸುಗಮ ಸಂಗೀತದ ಮೊದಲ ಪಂಕ್ತಿಗೆ ಸೇರಿದವರು ಲೀಲಾವತಿ. ಅವರಷ್ಟು ಈ ಕ್ಷೇತ್ರದ ಬಗ್ಗೆ ತಿಳಿದವರು ತುಂಬ ಕಡಿಮೆ. ಅವರ ಮನೆ ಯಾವಾಗಲೂ ಸಂಗೀತ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಅದನ್ನು ನೋಡುವುದೇ ಚೆಂದ ಎಂಬುದು ಹೆಚ್.ಆರ್.ಎಲ್. ಅವರ ಆಪ್ತ ಶಿಷ್ಯೆ ಡಾ.ರೋಹಿಣಿ ಮೋಹನ್ ಅವರ ಮನದಾಳದ ಮಾತುಗಳು.

ಪ್ರಶಸ್ತಿಗಳು

ಇದಕ್ಕೆ ಪೂರಕವಾಗಿ ಅವರಿಗೆ ಸಂದ ಪ್ರಶಸ್ತಿಗಳು ಅನೇಕ. ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಸಂತ ಶಿಶುನಾಳ ಪ್ರಶಸ್ತಿ, ಗಾನಕಲಾ ಪರಿಪೂರ್ಣೆ, ಗಾನಶಾರದೆ, ಸುಗಮ ಸಂಗೀತ ಪ್ರವೀಣೆ, ಸೇರಿದಂತೆ ಅನೇಕ ಪ್ರಶಸ್ತಿಗಳು ಮುಡಿಗೇರಿದೆ. ಇತ್ತೀಚೆಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯೂ ಲಭಿಸಿದ್ದು ಬಹುಶಃ ನಾಡಿನ ಹಲವು ವೇದಿಕೆಗಳಲ್ಲಿ ನೀಡಿದ ಪ್ರಶಸ್ತಿ ಫಲಕಗಳ ಪ್ರಥಮ ಹೆಸರು ಹೆಚ್.ಆರ್.ಲೀಲಾವತಿಯವರದ್ದು ಎಂಬುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *