ಮೂಲ ಬೃಂದಾವನಗಳ ಅಭಿವೃದ್ಧಿಗೆ ಯೋಜನೆ

<ಮಂತ್ರಾಲಯ ಮಠದ ಶ್ರೀಸುಬುಧೇಂದ್ರ ತೀರ್ಥರ ಹೇಳಿಕೆ>

ಸಿರಗುಪ್ಪ (ಬಳ್ಳಾರಿ): ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪರಂಪರೆಯ ಮೂಲ ಬೃಂದಾವನಗಳ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ಕೆಂಚನಗುಡ್ಡ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿರುವ ಶ್ರೀ ವಸುಧೇಂದ್ರ ತೀರ್ಥರ ಮೂಲ ಬೃಂದಾವನ ನವೀಕರಣ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದರು. ಕೆಂಚನಗುಡ್ಡ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ 256 ವರ್ಷಗಳಿಂದ ಜಾಗೃತಾವಸ್ಥೆಯಲ್ಲಿ ಭಕ್ತರನ್ನು ಅನುಗ್ರಹಿಸುತ್ತಿರುವ ಶ್ರೀ ವಸುಧೇಂದ್ರ ತೀರ್ಥರ ಮೂಲ ಬೃಂದಾವನವನ್ನು 1.5 ಕೋಟಿ ರೂ.ವೆಚ್ಚದಲ್ಲಿ ನವೀಕರಣಗೊಳಿಸಲಾಗುತ್ತಿದೆ ಎಂದರು.

ಪೂಜಾ ಮಂದಿರ, ಭೋಜನಾ ಶಾಲೆ, ಕಚೇರಿ, ಉಗ್ರಾಣ, ಶ್ರೀಗಳಿಗಾಗಿ ಪೂಜಾ ಮಂದಿರ, ವಿಶ್ರಾಂತಿ ಗೃಹ, ಅಡುಗೆಮನೆ ಹಾಗೂ ಶ್ರೀ ಮಠದಲ್ಲಿ ಕಾರ್ಯನಿರ್ವಹಿಸುವ ಅರ್ಚಕರು, ಕೆಲಸಗಾರರಿಗೆ ವಸತಿ ಸೌಲಭ್ಯ ಹಾಗೂ ಭಕ್ತರಿಗಾಗಿ ವಿಶ್ರಾಂತಿ ಗೃಹ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪ, ಪುಷ್ಪವನ, ತುಳಸಿವನ, ಉದ್ಯಾನವನ ಸೇರಿ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಈ ಕ್ಷೇತ್ರವನ್ನು ಮಂತ್ರಾಲಯದಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಅರ್ಚಕ ರಂಗನಾಥ ಆಚಾರ್ಯ ಮತ್ತು ಭಕ್ತರು ಇದ್ದರು.