ಸಿಮೆಂಟ್ ಪೈಪ್ ಸೇತುವೆಗೆ ವಿರೋಧ

ಮುಳಗುಂದ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 4.18 ಕೋಟಿ ರೂ. ವೆಚ್ಚದಲ್ಲಿ ಮುಳಗುಂದದಿಂದ ಹರ್ತಿ ಗ್ರಾಮದವರೆಗೆ ನಿರ್ವಿುಸಲಾಗಿರುವ 4.5 ಕಿ.ಮೀ ಉದ್ದದ ರಸ್ತೆ ಅವೈಜ್ಞಾನಿಕವಾಗಿದ್ದು, ಮಾರ್ಗದಲ್ಲಿ ಸೇರಿಹಳ್ಳ ಹಾಗೂ ದೊಡ್ಡಹಳ್ಳಗಳಿಗೆ ಕೇವಲ ಮೂರು ಅಡಿ ವ್ಯಾಸದ ಸಿಮೆಂಟ್ ಪೈಪ್ ಬಳಸಿ ಸೇತುವೆ ನಿರ್ವಿುಸಲಾಗಿದೆ ಎಂದು ರೈತರು ದೂರಿದ್ದಾರೆ.

ಈ ಹಳ್ಳಗಳಿಗೆ ಸಾವಿರಾರು ಎಕರೆ ಹೊಲಗಳಿಂದ ಹರಿದು ಬರುವ ಮಳೆ ನೀರು ಈ ಹಿಂದೆ ಸಾಕಷ್ಟು ಅನಾಹುತ ಸೃಷ್ಟಿಸಿದ ನಿದರ್ಶನಗಳಿವೆ. ರಸ್ತೆ ಕಾಮಗಾರಿ ಪ್ರಾರಂಭದಲ್ಲೇ ಪೈಪ್ ಸೇತುವೆ ಬದಲು ಕಾಂಕ್ರಿಟ್ ಸೇತುವೆ ನಿರ್ವಣಕ್ಕೆ ರೈತರು ಒತ್ತಾಯಿಸಿದ್ದರು. ಈ ಯೋಜನೆಯಡಿ ಬರುವ ಗ್ರಾಮದ ರಸ್ತೆಗಳಿಗೆ ಪೈಪ್ ಬದಲಿಸಿ ಕಾಂಕ್ರಿಟ್ ಸೇತುವೆ ನಿರ್ವಿುಸಲು ಸಾಧ್ಯವಿಲ್ಲ ಎಂದು ಸಂಬಂಧಪಟ್ಟ ಇಂಜಿನಿಯರ್ ತಿಳಿಸಿದ್ದರು. ಆದರೆ, ಇದೇ ಯೋಜನೆಯಡಿ ನೀಲಗುಂದ ರಸ್ತೆಯಲ್ಲಿರುವ ಹಳ್ಳಕ್ಕೆ ಪೈಪ್ ಸೇತುವೆ ಇರುವ ಅಂದಾಜು ಪತ್ರಿಕೆ ಬದಲಿಸಿ ಕಾಂಕ್ರೀಟ್ ಸೇತುವೆ ನಿರ್ವಿುಸುತ್ತಿದ್ದಾರೆ. ಇದು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ.

ಈ ಮೊದಲು 2014-‰15ರಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಎಸ್​ಎಫ್​ಸಿ ಅನುದಾನದಲ್ಲಿ ಪೈಪ್ ಸೇತುವೆ ನಿರ್ವಿುಸಲಾಗಿತ್ತು. ಆದರೆ, ಸೇತುವೆ ಮಳೆ ನೀರಿನ ರಭಸಕ್ಕೆ ಕಿತ್ತು ಹೋಗಿತ್ತು. ಈಗ ಮತ್ತೆ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಪೈಪ್ ಬಳಸಿ ಸೇತುವೆ ನಿರ್ವಿುಸಲಾಗಿದೆ. ಹೀಗಾಗಿ ಮಳೆಗಾಲದಲ್ಲಿ ಈ ಸೇತುವೆಯೂ ಅಪಾಯಕಾರಿ ಎನ್ನುವುದು ರೈತರ ಆತಂಕವಾಗಿದೆ.

ಹೊಸ ರಸ್ತೆ ನಿರ್ಮಾಣ ರೈತರಿಗೆ ಖುಷಿ ತಂದಿದೆಯಾದರೂ ಗಟ್ಟಿಮುಟ್ಟಾದ ಸೇತುವೆ ನಿರ್ವಿುಸಬೇಕಿತ್ತು. ಪೈಪ್ ಬದಲಾಗಿ ಸಿಮೆಂಟ್ ಕಾಂಕ್ರಿಟ್ ಬಳಸಿ ಸೇತುವೆ ನಿರ್ವಿುಸಬೇಕು. | ಸಿದ್ರಾಮಯ್ಯ ಹಿರೇಮಠ, ಶಿವಲಿಂಗಪ್ಪ , ಸ್ಥಳೀಯರು

ಹಳ್ಳದಲ್ಲಿ ಹರಿಯುವ ನೀರಿನ ಹರಿವು ನೋಡಿಕೊಂಡ ಸೇತುವೆ ಕಟ್ಟಲಾಗುತ್ತದೆ. ಈ ಹಳ್ಳಗಳಿಗೆ ಅಂದಾಜು ಪತ್ರಿಕೆ ಪ್ರಕಾರ ಸಿಮೆಂಟ್ ಪೈಪ್ ಸೇತುವೆ ಹಾಗೂ ಮೇಲ್ಭಾಗದಲ್ಲಿ ಸಿಸಿ ರಸ್ತೆ ಇದೆ. ಇದರಿಂದ ರಸ್ತೆಗೆ ತೊಂದರೆ ಇಲ್ಲ. | ಆರ್.ಜಿ.ಪಾಟೀಲ, ಇಂಜಿನಿಯರ್ ಯೋಜನಾ ವಿಭಾಗ ಗದಗ