ಸಿಪಿಕೆ ಸಮಗ್ರ ಸಾಹಿತ್ಯ ಹೊರಬರಲಿ

ಮೈಸೂರು: ಡಾ.ಸಿಪಿಕೆ ಅವರ ಸಮಗ್ರ ಸಾಹಿತ್ಯ ಕೃತಿಯನ್ನು ಹೊರತರಬೇಕು ಎಂದು ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಆಶಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ, ನೃಪತುಂಗ ಚಾರಿಟಬಲ್ ಟ್ರಸ್ಟ್ ಮತ್ತು ಅರಸು ಜಾಗೃತಿ ಅಕಾಡೆಮಿ ಸಹಯೋಗದಲ್ಲಿ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಡಾ.ಸಿಪಿಕೆ ಅವರ 80ರ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ಸಿಪಿಕೆ ಅವರಿಗೆ ದೊಡ್ಡ ಹೆಸರಿದೆ. ಅವರ ಸಾಹಿತ್ಯ ಗಾತ್ರದ ಜತೆಗೆ ಗುಣದಲ್ಲೂ ದೊಡ್ಡದಾಗಿದೆ. ಇಲ್ಲಿಯವರೆಗೆ ಅರು 400 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹೀಗಾಗಿ, ಅವರ ಎಲ್ಲ ಕೃತಿಗಳನ್ನು ಸಮಗ್ರ ಸಾಹಿತ್ಯವಾಗಿ ಹೊರತರಬೇಕಿದೆ. ಈ ಕೆಲಸಕ್ಕೆ ಸರ್ಕಾರ ಮಾತ್ರವಲ್ಲ, ಸಿಪಿಕೆ ಅವರ ಎಲ್ಲ ಸ್ನೇಹಿತರೂ ಕೈ ಜೋಡಿಸಬೇಕು ಎಂದರು.

ವೃತ್ತಿಯಿಂದ 60 ವರ್ಷಕ್ಕೆ ನಿವೃತ್ತಿ ಹೊಂದುತ್ತೇವೆ. 60 ರಿಂದ 70 ವರ್ಷ ವೃದ್ಧಾಪ್ಯದ ಬಾಲ್ಯ. 70 ರಿಂದ 80 ವೃದ್ಧಾಪ್ಯದ ಯೌವನ. 80 ರಿಂದ 90 ವೃದ್ಧಾಪ್ಯದ ನಡು ಯೌವನ. 90 ರಿಂದ 100 ವೃದ್ಧಾಪ್ಯದ ಇಳಿ ವಯಸ್ಸಾಗಿದೆ. ಸಿಪಿಕೆ ಅವರು ಈಗ ವೃದ್ಧಾಪ್ಯದ ನಡು ಯೌವನಕ್ಕೆ ಕಾಲಿಟ್ಟಿದ್ದಾರೆ ಎಂದು ಅಥೈಸಿದ ಅವರು, ಸಿಪಿಕೆ ಶತಾಯಷಿಗಳಾಗಬೇಕು ಎಂದು ಆಶಿಸಿದರು.

ವಿಶ್ರಾಂತ ಕುಲಪತಿ ಡಾ.ಪಿ.ವೆಂಕಟರಾಮಯ್ಯ ಮಾತನಾಡಿ, ಸಿಪಿಕೆ ಅವರು ತಿನಂಶ್ರೀ ಮತ್ತು ಕುವೆಂಪು ಅವರ ಪ್ರಭಾವಕ್ಕೆ ಒಳಗಾಗಿ, ಶಿಸ್ತಿನ ಜೀವನ ನಡೆಸುತ್ತಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ ಎಂದರು.

ಡಾ.ಸಿಪಿಕೆ ದಂಪತಿಯನ್ನು ಅಭಿನಂದಿಸಲಾಯಿತು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ‘ಡಾ.ಸಿಪಿಕೆ ಚುಟುಕು ತೋರಣ’ ಹಾಗೂ ‘ಕಾವ್ಯಕೆ ಗುರು’ ಕೃತಿಗಳನ್ನು ಬಿಡುಗಡೆ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಿ.ಜಗದೀಶ್, ಶಾಂತಾ ಮಹಾದೇವಪ್ರಸಾದ್, ಕೆ.ಬಿ.ಲಿಂಗರಾಜ್, ರಾಘವೇಂದ್ರರಾಜೇ ಅರಸ್, ಲಯನ್ ಶಿವಕುಮಾರ್, ಬಿ.ಕುಮಾರ್, ಮಡ್ಡಿಕೆರೆ ಗೋಪಾಲ್, ಮಲೆಯೂರು ಉಮೇಶ್ ಮತ್ತು ಮಾಧುರ್ಯ ರಾಮಸ್ವಾಮಿ ಅವರಿಗೆ ಅರಸು ಜಾಗೃತಿ ಅಕಾಡೆಮಿ ವತಿಯಿಂದ ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಅರಸು ಜಾಗೃತಿ ಅಕಾಡೆಮಿ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ, ಡಾ.ಎಂ.ಜಿ.ಆರ್.ಅರಸು, ಮಧುದೀಕ್ಷಿತ್ ಗುರೂಜೀ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *