ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಇಂದಿನಿಂದ

ಹಳಿಯಾಳ: ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಫೆ. 19ರಿಂದ ಅಧ್ಯಾತ್ಮಿಕ ಪ್ರವಚನ ಆರಂಭಿಸಲಿದ್ದು, ಒಂದು ತಿಂಗಳವರೆಗೆ ನಡೆಯಲಿದೆ.

ಪಟ್ಟಣದ ಶ್ರೀ ಶಿವಾಜಿ ಕ್ರೀಡಾಂಗಣದಲ್ಲಿ ನಿತ್ಯ ಬೆಳಗ್ಗೆ 6.30ರಿಂದ 7.30ರವರೆಗೆ ಶ್ರೀಗಳು ಪ್ರವಚನ ನೀಡಲಿದ್ದಾರೆ. ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಕಿಲ್ಲಾದಲ್ಲಿನ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದು, ಅಲ್ಲಿ ನಿತ್ಯ ಸಂಜೆ 5 ರಿಂದ 6.30ರವರೆಗೆ ಚಿಂತನಾಗೋಷ್ಠಿ ನಡೆಸುವರು. ಪ್ರವಚನ ಆಲಿಸಲು ಆಗಮಿಸುವ ಗ್ರಾಮಾಂತರ ಭಾಗದವರಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಉಪ್ಪಿನ ಬೆಟಗೇರಿ ಹಳಿಯಾಳ ಮಠದ ಶ್ರೀ ಮ.ನಿ.ಪ್ರ ಕುಮಾರ ವಿರೂಪಾಕ್ಷ ಮಹಾಸ್ವಾಮಿ, ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಅಂಬಿಕಾನಗರ ಮಠದ ಶ್ರೀ 108 ಷ.ಬ. ಶ್ರೀ ಗುರು ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಕೆ.ಕೆ. ಹಳ್ಳಿಯ ಶ್ರೀ ನಿತ್ಯಾನಂದ ಆಶ್ರಮದ ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಬೆಂಗಳೂರು ಗೋಸಾವಿ ಮಠದ ಶ್ರೀ ಮಂಜುನಾಥ ಮಹಾರಾಜರು, ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಧಾರವಾಡ ರಾಮಕೃಷ್ಣ ಆಶ್ರಮದ ಶ್ರೀ ವಿಜಯಾನಂದ ಸ್ವಾಮಿಗಳು, ಆದಿಶಕ್ತಿ ಪೀಠ ಹಳಿಯಾಳದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮಿ, ಯಡೋಗಾ ಶ್ರೀ ಸಿದ್ಧಾರೂಢ ಮಠದ ಶ್ರೀ ನಿರ್ಮಲಾನಂದ ಮಾತಾಜಿ, ಅರ್ಲವಾಡ ಆನಂದಾಶ್ರಮದ ಪ.ಪೂ. ಶ್ರೀ ಓ ರುದ್ರಾಕ್ಷಿಬಾಬಾ ಸಾನ್ನಿಧ್ಯ ವಹಿಸಲಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಶ್ರೀಗಳ ಆಗಮನ: ಸೋಮವಾರ ಸಂಜೆ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಹಳಿಯಾಳ ಪಟ್ಟಣಕ್ಕೆ ಆಗಮಿಸಿದರು. ಇಲ್ಲಿಯ ಶ್ರೀ ಬಸವೇಶ್ವರ ವೃತದಲ್ಲಿ ಶ್ರೀಗಳನ್ನು ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ತಾಲೂಕು ಆಡಳಿತದ ಪರವಾಗಿ ಗ್ರೇಡ್-2 ತಹಸೀಲ್ದಾರ ರತ್ನಾಶಂಕರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯವರ, ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶ್ರೀಕಾಂತ ಹೂಲಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಸ್ವಾಮಿ ಬರಮಾಡಿಕೊಂಡರು. ಪುರಸಭೆ ಸದಸ್ಯ ಉದಯ ಹೂಲಿ, ವಿಆರ್​ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಆಧ್ಯಾತ್ಮಿಕ ಪ್ರವಚನ ಸಮಿತಿಯ ಡಾ.ಟಿ.ಸಿ. ಮಲ್ಲಾಪೂರಮಠ, ಎಂ.ಬಿ. ತೋರಣಗಟ್ಟಿ, ಬಸವರಾಜ ಬೆಂಡಿಗೇರಿ ಇದ್ದರು. ಇದಕ್ಕೂ ಮುನ್ನ ಶ್ರೀ ಶಿವಾಜಿ ಕ್ರೀಡಾಂಗಣಕ್ಕೆ ಭೇಟಿಯಿತ್ತ ಶ್ರೀಗಳು ಪ್ರವಚನದ ನಡೆದಿರುವ ಸಿದ್ಧತೆ ವೀಕ್ಷಿಸಿದರು.