ಸಿದ್ಧಾರೂಢ ಮಹಾರಾಜ ಕೀ ಜೈ

ಹುಬ್ಬಳ್ಳಿ: ಗೋಧೂಳಿ ಸಮಯದಲ್ಲಿ ಭಕ್ತರು ಆರಾಧ್ಯ ದೈವ ಶ್ರೀ ಸಿದ್ಧಾರೂಢರು- ಗುರುನಾಥರೂಢರ ಮಹಾರಥ ಎಳೆಯುತ್ತಿದ್ದಂತೆ ಭಕ್ತ ಸಮೂಹದ ಹರ ಹರ ಮಹಾದೇವ, ಓಂ ನಮಃ ಶಿವಾಯ ಮಂತ್ರಘೋಷ ಮುಗಿಲು ಮುಟ್ಟಿತು.

ಎಲ್ಲಿ ನೋಡಿದರೂ ಶಿವಭಕ್ತರು, ಸಿದ್ಧಾರೂಢ ಮಹಾರಾಜ ಕೀ ಜೈ… ಗುರುನಾಥರೂಢ ಮಹಾ ರಾಜ ಕೀ ಜೈ… ಮಂತ್ರ ಪಠಣ, ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಲಿಂಬೆಹಣ್ಣು, ಬೆಂಡು ಬೆತ್ತಾಸು ಎಸೆದು ಕೃತಾರ್ಥರಾದರು. ಶ್ರೀ ಸಿದ್ಧಾರೂಢ ಹಾಗೂ ಗುರುನಾಥ ಆರೂಢರ ಉತ್ಸವ ಮೂರ್ತಿಗಳನ್ನು ಅಲಂಕೃತ ರಥದಲ್ಲಿ ಇಡಲಾಗಿತ್ತು.

ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಮಂಗಳವಾರ ಲಕ್ಷಾಂತರ ಭಕ್ತರ ಹಷೋದ್ಘಾರ ಮಧ್ಯೆ ಮಹಾ ರಥೋತ್ಸವ ಸಂಭ್ರಮದಿಂದ ನಡೆಯಿತು. ಡೊಳ್ಳು, ಜಾಂಜ್ ಸೇರಿದಂತೆ ವಿವಿಧ ವಾದ್ಯ-ಮೇಳಗಳು ರಥೋತ್ಸವಕ್ಕೆ ಮೆರಗು ತಂದವು. ಧಾರವಾಡ ಹಾಗೂ ಅಕ್ಕಪಕ್ಕದ ಜಿಲ್ಲೆಯಷ್ಟೇ ಅಲ್ಲ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಾಗರ ರಥೋತ್ಸವ ಕಣ್ತುಂಬಿಕೊಂಡಿತು. ಜಾತಿ, ಧರ್ಮ ಭೇದಭಾವವಿಲ್ಲದೇ ಲಕ್ಷಾಂತರ ಭಕ್ತರು ಸೇರಿದ್ದರು.

ಸಿದ್ಧಾರೂಢ ಮಠ ಸುತ್ತಮುತ್ತಲಿನ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನಗಳು, ಭಕ್ತರ ಭರಾಟೆ ಕಂಡು ಬಂತು. ಪಾದಯಾತ್ರೆ ಮೂಲಕವೂ ಸಾವಿರಾರು ಜನರು ಬಂದಿದ್ದರು. ಕಳೆದೊಂದು ವಾರದಿಂದ ಸಿದ್ಧಾರೂಢ ಮಠ ಶಿವರಾತ್ರಿ ನಿಮಿತ್ತ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಶ್ರೀ ಗುರುನಾಥರೂಢರ ಪೂರ್ವಾಶ್ರಮದ ಸಹೋದರಿ

ಶ್ರೀ ಗುರುನಾಥರೂಢರ ಪೂರ್ವಾಶ್ರಮದ ಸಹೋದರಿ ಬೆಂಗಳೂರಿನಲ್ಲಿ ನೆಲೆಸಿರುವ ಪಾರ್ವತಮ್ಮ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷ. ಈ ವೇಳೆ ಮಾತನಾಡಿದ ಅವರು, ಜಾತ್ರೆ, ರಥೋತ್ಸವದಲ್ಲಿ ಭಾಗಿಯಾಗಿರುವುದಕ್ಕೆ ಬಹಳ ಸಂತೋಷವಾಗಿದೆ. ಶ್ರೀಮಠ ಹಾಗೂ ಇಲ್ಲಿನ ವ್ಯವಸ್ಥೆ ಹೆಚ್ಚು ಖುಷಿ ನೀಡಿದೆ ಎಂದು ಹೇಳಿದರು. ಪಾರ್ವತಮ್ಮ ಅವರ ಸೊಸೆಯಂದಿರು, ಮೊಮ್ಮಕ್ಕಳು ಸಹ ಭಾಗವಹಿಸಿದ್ದರು. ಟ್ರಸ್ಟ್ ಆಡಳಿತಾಧಿಕಾರಿ, ನ್ಯಾಯಾಧೀಶ ಈಶಪ್ಪ ಭೂತೆ, ಅಧ್ಯಕ್ಷ ಡಿ.ಡಿ. ಮಾಳಗಿ ಹಾಗೂ ಪದಾಧಿಕಾರಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.