Thursday, 13th December 2018  

Vijayavani

Breaking News

ಸಿದ್ಧತೆಯಲ್ಲಿ ಎಡವಿದ ಕೊಹ್ಲಿ-ಶಾಸ್ತ್ರಿ!

Thursday, 11.01.2018, 3:02 AM       No Comments

ಮುಂಬೈ: ಭಾರತದ ಬೌಲರ್​ಗಳು ಸಂಘಟಿತ ನಿರ್ವಹಣೆ ತೋರಿ ಕೇಪ್​ಟೌನ್ ಟೆಸ್ಟ್​ನಲ್ಲಿ ದಕ್ಷಿಣ ಆಫ್ರಿಕಾದ 20 ವಿಕೆಟ್​ಗಳನ್ನು ಉರುಳಿಸಿದ್ದರು. ಆದರೆ, ಬೌಲರ್​ಗಳ ಶ್ರಮಕ್ಕೆ ಬ್ಯಾಟ್ಸ್​ಮನ್​ಗಳಿಂದ ನ್ಯಾಯ ಸಿಗಲಿಲ್ಲ. ಗೆಲ್ಲುವಂತಿದ್ದ ನ್ಯೂಲ್ಯಾಂಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ 72 ರನ್​ಗಳಿಂದ ಸೋಲು ಕಂಡಿತು. ಬೌಲರ್​ಗಳು ತಮ್ಮ ಗೌರವವನ್ನು ಉಳಿಸಿಕೊಂಡರೆ, ಬ್ಯಾಟ್ಸ್​ಮನ್​ಗಳ ಬಗ್ಗೆ ಟೀಕಾಪ್ರಹಾರ ಆರಂಭವಾಗಿದೆ. ಈ ನಡುವೆ ಬಿಸಿಸಿಐ ಕೂಡ ಕೇಪ್​ಟೌನ್ ಟೆಸ್ಟ್ ಸೋಲಿನ ಹೊಣೆಯನ್ನು ಟೀಮ್ ಮ್ಯಾನೇಜ್​ವೆುಂಟ್ ಮೇಲೆಯೇ ಹೊರಿಸಿದೆ.

ಮೊದಲ ಟೆಸ್ಟ್​ಗೂ ಮುನ್ನ ತಂಡ ಅಭ್ಯಾಸ ಪಂದ್ಯ ಆಡಿದ್ದರೆ, ಬ್ಯಾಟ್ಸ್​ಮನ್​ಗಳಿಂದ ಇಂಥ ನಿರ್ವಹಣೆ ಬರುತ್ತಿರಲಿಲ್ಲ ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗಿದೆ. ತವರಿನಲ್ಲಿ ಶ್ರೀಲಂಕಾ ವಿರುದ್ಧ ಸಂಪೂರ್ಣ ಸರಣಿ ಆಡಿದ್ದ ಭಾರತ ತಂಡ ಡಿ. 28ಕ್ಕೆ ದಕ್ಷಿಣ ಆಫ್ರಿಕಾಕ್ಕೆ ಕಾಲಿಟ್ಟಿತ್ತು. ಅಭ್ಯಾಸ ಪಂದ್ಯವಾಡಿ ಸಮಯ ವ್ಯರ್ಥ ಮಾಡುವುದಕ್ಕಿಂತ ಹೆಚ್ಚುವರಿ ಅಭ್ಯಾಸ ಅವಧಿಯಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ವಿರಾಟ್ ಕೊಹ್ಲಿ ಮಾಡಿದ್ದರು. ಇದಕ್ಕಾಗಿ ಟೀಮ್ ಇಂಡಿಯಾ ವೇಗದ ಬೌಲರ್​ಗಳೊಂದಿಗೆ ನಾಲ್ವರು ಹೆಚ್ಚುವರಿ ವೇಗಿಗಳನ್ನು ಅಭ್ಯಾಸದ ವೇಳೆ ಬೌಲಿಂಗ್ ಮಾಡಲು ಕಳುಹಿಸಲಾಗಿತ್ತು. ಆದರೆ, ಇದು ಯಾವುವೂ ಪ್ರಯೋಜನಕ್ಕೆ ಬಂದಿಲ್ಲ.

ಈಗ ಬೆಳಕಿಗೆ ಬಂದಿರುವ ವಿಚಾರವೆಂದರೆ, ಟೆಸ್ಟ್ ಸ್ಪೆಷಲಿಸ್ಟ್​ಗಳಾದ ಮುರಳಿ ವಿಜಯ್, ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆಯನ್ನು ದಕ್ಷಿಣ ಆಫ್ರಿಕಾ ವಾತಾವರಣ ಹಾಗೂ ಅಲ್ಲಿನ ಪಿಚ್​ಗೆ ಹೊಂದಿಕೊಳ್ಳಲು ಮುಂಚಿತವಾಗಿ ಕಳುಹಿಸುವ ಪ್ರಸ್ತಾವನೆಯನ್ನು ಬಿಸಿಸಿಐ ಇಟ್ಟಿತ್ತು. ಆದರೆ, ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಒಳಗೊಂಡ ಟೀಮ್ ಮ್ಯಾನೇಜ್​ವೆುಂಟ್ ಇದಕ್ಕೆ ನಿರಾಸಕ್ತಿ ತೋರಿತ್ತು ಎಂದು ವರದಿಯಾಗಿದೆ. ಬಿಸಿಸಿಐ ಅಲ್ಲದೆ, ಕ್ರಿಕೆಟ್ ಆಡಳಿತಾಧಿಕಾರಿ ಸಮಿತಿ (ಸಿಒಎ) ಕೂಡ ಇದೇ ಅಭಿಪ್ರಾಯ ಹೊಂದಿತ್ತು. ಟೀಮ್ ಮ್ಯಾನೇಜ್​ವೆುಂಟ್​ಗೆ ಈ ಬಗ್ಗೆ ತಿಳಿಸಿಯೂ ಇತ್ತು. ಅಲ್ಲದೆ, ಶ್ರೀಲಂಕಾ ವಿರುದ್ಧ ಸೀಮಿತ ಓವರ್​ಗಳ ಕ್ರಿಕೆಟ್ ಸರಣಿಗೆ ಅಗ್ರ ಟೆಸ್ಟ್ ಆಟಗಾರರನ್ನು ಕೈಬಿಟ್ಟು ಅವರನ್ನು ಆಫ್ರಿಕಾಕ್ಕೆ ಮುಂಚಿತವಾಗಿ ಕಳಿಹಿಸುವ ಯೋಚನೆ ಮಾಡಿತ್ತು. ‘ತಂಡದ ಅಗ್ರ ಟೆಸ್ಟ್ ಆಟಗಾರರನ್ನು ದಕ್ಷಿಣ ಆಫ್ರಿಕಾಕ್ಕೆ ಮುಂಚಿತವಾಗಿ ಕಳುಹಿಸುವ ಆಫರ್​ಅನ್ನು ಟೀಮ್ ಮ್ಯಾನೇಜ್​ವೆುಂಟ್​ಗೆ ನೀಡಿದ್ದೆವು. ಮುರಳಿ ವಿಜಯ್, ಪೂಜಾರ ಹಾಗೂ ರಹಾನೆ ಏಕದಿನ ತಂಡದಲ್ಲಿ ಇದ್ದಿರಲಿಲ್ಲ. ಅವರು ದೇಶೀಯ ಕ್ರಿಕೆಟ್​ನಲ್ಲಿ ಭಾಗಿಯಾಗಿದ್ದರು. ದಕ್ಷಿಣ ಆಫ್ರಿಕಾಕ್ಕೆ ಮುಂಚಿತವಾಗಿ ತೆರಳುವ ಆಟಗಾರರ ಎಲ್ಲ ವೆಚ್ಚವನ್ನು ಭರಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಆದರೆ, ಟೀಮ್ ಇದಕ್ಕೆ ಆಸಕ್ತಿ ವಹಿಸಿರಲಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. –ಏಜೆನ್ಸೀಸ್

ರಾಹುಲ್ ದ್ರಾವಿಡ್ ಮನವಿ ಪುರಸ್ಕಾರ

19 ವಯೋಮಿತಿ ವಿಶ್ವಕಪ್​ಗಾಗಿ ಭಾರತ ತಂಡ ನ್ಯೂಜಿಲೆಂಡ್​ಗೆ ಬಹಳ ಮುಂಚಿತವಾಗಿ ತೆರಳಿತ್ತು. ತಂಡದ ಕೋಚ್ ರಾಹುಲ್ ದ್ರಾವಿಡ್, ತಂಡವನ್ನು ಬೇಗನೆ ಕಳುಹಿಸಿಕೊಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಕ್ರಿಕೆಟ್ ಮಂಡಳಿ ಕೂಡ ತಕ್ಷಣವೇ ಒಪ್ಪಿಗೆ ನೀಡಿತು’ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಬಗ್ಗೆ ಸೌರವ್ ಗಂಗೂಲಿ ಬೇಸರ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ತವರಿನ ಟೆಸ್ಟ್ ಪಂದ್ಯ ಫಾಮ್ರ್ ಪರಿಗಣಿಸಿದ ವಿರಾಟ್ ಕೊಹ್ಲಿ ನಿಲುವಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ. ‘ಆಟಗಾರರ ಹಾಲಿ ಫಾಮ್ರ್ ಮುಖ್ಯ ಎನ್ನುವುದನ್ನು ಒಪು್ಪತ್ತೇನೆ. ಆದರೆ, ಕಳೆದ ಕೆಲ ವರ್ಷಗಳಲ್ಲಿ ಕೆಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆ ವಿದೇಶದ ಟೆಸ್ಟ್​ಗಳಲ್ಲಿ ಯಾವ ರೀತಿಯ ನಿರ್ವಹಣೆ ತೋರಿದ್ದಾರೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಧವನ್ ಹಾಗೂ ರೋಹಿತ್ ಶರ್ಮ ವಿದೇಶದ ಟೆಸ್ಟ್​ಗಳಲ್ಲಿ ಕಳಪೆ ಆಟ ಆಡಿದ್ದಾರೆ ಎನ್ನುವುದನ್ನು ದಾಖಲೆಗಳೇ ಹೇಳುತ್ತವೆ’ ಎಂದು ಗಂಗೂಲಿ ಹೇಳಿದ್ದಾರೆ.

ಸಲಹೆ ಮಾತ್ರವೇ ನೀಡುತ್ತೇವೆ

ಪ್ರವಾಸದ ಸರಣಿಯ ವೇಳೆ ಟೀಮ್ ಮ್ಯಾನೇಜ್​ವೆುಂಟ್​ಗೆ ಕ್ರಿಕೆಟ್ ಮಂಡಳಿ ಸಲಹೆ ಮಾತ್ರವೇ ನೀಡುತ್ತದೆ. ಆದರೆ, ಅಂತಿಮ ನಿರ್ಧಾರ ಮಾಡುವ ಎಲ್ಲ ಹಕ್ಕು ಟೀಮ್ ಮ್ಯಾನೇಜ್​ವೆುಂಟ್​ಗೆ ಇರುತ್ತದೆ ಎಂದು ಬಿಸಿಸಿಐ ತಿಳಿಸಿದೆ. ‘ಹಿಂದಿನ ಆಟಗಾರರಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್​ರನ್ನು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ಗೆ ಬಹಳ ಮುಂಚಿತವಾಗಿ ಕಳುಹಿಸುತ್ತಿದ್ದೆವು. ತಂಡವನ್ನು ಕೂಡಿಕೊಳ್ಳುವ ಮುನ್ನ ಅಲ್ಲಿನ ಸ್ಥಳೀಯ ತಂಡಗಳೊಂದಿಗೆ ಅವರು ಆಡುತ್ತಿದ್ದರು. ಇನ್ನು ವಿದೇಶ ಪ್ರವಾಸದ ವೇಳೆ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲು ನಾವು ಸಿದ್ಧರಿದ್ದೇವೆ. ಆದರೆ, ಇದರ ಅಂತಿಮ ನಿರ್ಧಾರ ಮಾಡಬೇಕಾಗಿರುವುದು ಟೀಮ್ ಮ್ಯಾನೇಜ್​ವೆುಂಟ್’ ಎಂದು ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top