ಸಿದ್ಧಗಂಗಾ ಮಠಕ್ಕೆ ಸಚಿವ ಪಾಟೀಲ್ ಭೇಟಿ

ತುಮಕೂರು: ಸಿದ್ಧಗಂಗಾ ಮಠಕ್ಕೆ ಭಾನುವಾರ ಗೃಹ ಸಚಿವ ಎಂ.ಬಿ.ಪಾಟೀಲ್ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಬಗ್ಗೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಜತೆ ರ್ಚಚಿಸಿದರು.

ಪೂಜ್ಯರ ಕ್ರಿಯಾವಿಧಿ ನಡೆದ ನಂತರ ಮಠಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಇವತ್ತು ಭೇಟಿಯಾಗಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದೇನೆ ಎಂದು ಸುದ್ದಿಗಾರರಿಗೆ ಪಾಟೀಲ್ ತಿಳಿಸಿದರು.

ಡಿಸಿಎಂ ಪರಮೇಶ್ವರ್ ತಿಳಿಸಿರುವಂತೆ ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಅಧ್ಯಯನ ಕೇಂದ್ರ, ಅವರ ಸಾಧನೆ ತಿಳಿಯಲು ನಡೆದು ಬಂದ ದಾರಿ, ಸಾಹಿತ್ಯದ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸಲು ವಸ್ತು ಸಂಗ್ರಹಾಲಯ ನಿರ್ವಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದರು.

ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಮೊದಲ ಬಾರಿಗೆ ಬಿಜಾಪುರದಲ್ಲಿ ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದೆ. ನಂತರ ಶ್ರೀಮಠದೊಂದಿಗೆ ಒಡನಾಟ ಇಟ್ಟುಕೊಂಡಿದ್ದೆ ಎಂದು ಸ್ಮರಿಸಿದರು.

ಹಳಕಟ್ಟಿ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಶ್ರೀಗಳು ಬಸವಣ್ಣ ಅವರಷ್ಟೇ ಪ್ರೀತಿಯ ಸ್ಥಾನವನ್ನು ಹಳಕಟ್ಟಿಗೆ ಕೊಟ್ಟಿದ್ದರು. ಬಡ ಮಕ್ಕಳಿಗೆ ಅನ್ನ, ಜ್ಞಾನ ದಾಸೋಹ ನೀಡುತ್ತಿದ್ದ ಶ್ರೀಗಳು ಈ ಶತಮಾನದ ಮಹಾನ್ ಪುರುಷ ಎಂದು ಬಣ್ಣಿಸಿದರು.

ಸಿದ್ಧಗಂಗಾಶ್ರೀಗಳು ಭಾರತೀಯರ ‘ಹೃದಯರತ್ನ’ವಾಗಿದ್ದಾರೆ, ಭಾರತರತ್ನ ಪ್ರಶಸ್ತಿ ನೀಡಿದ್ದರೆ ಪ್ರಶಸ್ತಿಗೂ ಬೆಲೆ ಬರುತ್ತಿತ್ತು. ಎಲ್ಲರಂತೆ ನಮಗೂ ನಿರಾಸೆಯಾಗಿದೆ. ಸ್ವಾಮೀಜಿ ಕಾಯಕನಿಷ್ಠೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ರಾಜ್ಯ ಸರ್ಕಾರ ಬಜೆಟ್​ನಲ್ಲಿ ಕಾರ್ಯಕ್ರಮ ಘೊಷಿಸಲಿದೆ.

| ಎಂ.ಬಿ.ಪಾಟೀಲ್ ಗೃಹ ಸಚಿವ

ನಾಳೆ ಸಾಮೂಹಿಕ ಕೇಶಮುಂಡನ: ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಜ.31ರಂದು ನಡೆಯಲಿರುವ ಪೂರ್ವಭಾವಿಯಾಗಿ ಸಿದ್ಧಗಂಗಾ ಮಠದ ಎಲ್ಲ ವಿದ್ಯಾರ್ಥಿಗಳು ಮಂಗಳವಾರ ಕೇಶ ಮುಂಡನೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಡಾ.ಶಿವಕುಮಾರ ಸ್ವಾಮೀಜಿ ಹಳ್ಳಿ, ಹಳ್ಳಿಗಳಲ್ಲಿ ಸುತ್ತಾಡಿ ಲಕ್ಷಾಂತರ ಬಡ ಮಕ್ಕಳನ್ನು ಕರೆತಂದು ಅನ್ನ, ಅಕ್ಷರ, ಆಶ್ರಯ ಕೊಟ್ಟು ಬದುಕು ಕೊಟ್ಟಿದ್ದಾರೆ. ಮಠದಲ್ಲಿ ಕಲಿಯುತ್ತಿರುವ 8 ಸಾವಿರಕ್ಕೂ ಹೆಚ್ಚು ಮಕ್ಕಳು ಕೇಶ ಮುಂಡನ ಮಾಡಿಸಿಕೊಳ್ಳಲಿದ್ದಾರೆ. ಅಖಿಲ ಭಾರತ ಸವಿತಾ ಸಮಾಜ ಯುವಕ ಸಂಘದ ಪದಾಧಿಕಾರಿಗಳು ಮಕ್ಕಳಿಗೆ ಉಚಿತವಾಗಿ ಕೇಶ ಮುಂಡನ ಮಾಡಲು ಸಿದ್ಧಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಅನುಮತಿ ಪಡೆದಿದ್ದಾರೆ. ಜ.31ರಂದು ನಡೆಯುವ ಕಾರ್ಯಕ್ರಮ ಪೂರ್ವಭಾವಿಯಾಗಿ ಜ.29ರಂದು ಮಕ್ಕಳು ಹಾಗೂ ಭಕ್ತರಿಗೆ ಕೇಶಮಂಡನ ಕಾರ್ಯ ನಡೆಯಲಿದೆ.