ಸಿದ್ಧಗಂಗಾಶ್ರೀ ತಿಂಗಳ ಪುಣ್ಯಸ್ಮರಣೆ

ತುಮಕೂರು: ಶಿವಸಾಯುಜ್ಯವಾದ ಡಾ.ಶಿವಕುಮಾರ ಸ್ವಾಮೀಜಿ ತಿಂಗಳ ಪುಣ್ಯಸ್ಮರಣೆ ಪ್ರಯುಕ್ತ ಗುರುವಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಸಿದ್ಧಗಂಗಾ ಮಠಕ್ಕೆ ಆಗಮಿಸಿದ ಸಾವಿರಾರು ಭಕ್ತರು ಹಾಗೂ ಮಠದ ಮಕ್ಕಳಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸರತಿಯಲ್ಲಿ ಆಗಮಿಸಿ ಗದ್ದುಗೆ ದರ್ಶನ ಪಡೆದರು.

ಮುಂದಿನ ಒಂದು ವರ್ಷದವರೆಗೂ ಪ್ರತಿ ತಿಂಗಳ 21ನೇ ತಾರೀಖಿನಂದು ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಆಚರಿಸಲಾಗುವುದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಪ್ರತಿ ತಿಂಗಳ 21ನೇ ತಾರೀಖಿನಂದು ಭಕ್ತರು, ಅಭಿಮಾನಿಗಳು ಭಕ್ತಿಯಿಂದ ಪುಣ್ಯಸ್ಮರಣೆ ಆಚರಿಸುವ ಸಂಕಲ್ಪ ಮಾಡಿದ್ದಾರೆ. ಮೊದಲ ತಿಂಗಳ ಪುಣ್ಯಸ್ಮರಣೆಯಲ್ಲಿ ನೆಲಮಂಗಲ ತಾಲೂಕು ಮೊದಲಕೋಟೆ ಗ್ರಾಮಸ್ಥರು ಮಠದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಪ್ರಸಾದ ಕಾರ್ಯ ವ್ಯವಸ್ಥೆ ಮಾಡಿದ್ದಾರೆ ಎಂದರು.

ಪುಣ್ಯಸ್ಮರಣೆ ಪ್ರಯುಕ್ತ ಪಾಯಸ, ರೆವೆ ಉಂಡೆ, ಚಿತ್ರಾನ್ನ, ಅನ್ನ, ಸಾರು, ಮಜ್ಜಿಗೆ ಒಳಗೊಂಡ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಗದ್ದುಗೆಗೆ ವಿಶೇಷ ಅಲಂಕಾರ: ಸಿದ್ಧಗಂಗಾ ಹಳೆಯ ಮಠದ ಮುಂಭಾಗದಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪ್ರತಿದಿನವೂ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಮಾಸಿಕ ಪುಣ್ಯಸ್ಮರಣೆಯ ಸಂದರ್ಭದಲ್ಲಿಯೂ ವಿಶೇಷ ಅಲಂಕಾರ ಮಾಡಲಾಗಿತ್ತು. ಗುರುವಾರ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.