ಸಿದ್ದಾಪುರ: ತಾಲೂಕಿನಾದ್ಯಂತ ದೀಪಾವಳಿ (ದೊಡ್ಡಹಬ್ಬ)ಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸುವುದು, ಆಯುಧ ಪೂಜೆ, ಲಕ್ಷ್ಮೀ ಪೂಜೆ ಜತೆಗೆ ಗ್ರಾಮೀಣ ಭಾಗದಲ್ಲಿ ಭೂತಪ್ಪ, ಚೌಡಿ ಸೇರಿ ಮತ್ತಿತರ ವನದೇವತೆಗಳ ಪೂಜೆ ನೆರವೇರಿಸಿ ಅವುಗಳಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.
ದೀಪಾವಳಿಯಂದು ಗೋವುಗಳಿಗೆ ಸ್ನಾನ ಮಾಡಿಸಿ ಬಣ್ಣ ಹಚ್ಚಿ, ಕೊರಳಿಗೆ ಗಂಟೆ, ಗೊಂಡೆ ಹೂವಿನ ಹಾಗೂ ಸೇವಂತಿಗೆ ದಂಡೆ, ಅಡಕೆ ಹಾಗೂ ಪಚ್ಚೆತೆನೆ ದಂಡೆಗಳನ್ನು ಕಟ್ಟಿ ಶೃಂಗರಿಸಿ ಗೋಪೂಜೆ ಸಲ್ಲಿಸಲಾಯಿತು.
ಗೋವುಗಳಿಗೆ ಕಡಬು, ಪಾಯಸ, ಹೋಳಿಗೆ ಮತ್ತಿತರ ಸಿಹಿತಿಂಡಿಗಳನ್ನು ನೀಡಿ ಪ್ರಸಾದ ಸ್ವೀಕರಿಸಿ ನಂತರ ಊರಿನ ಭೂತಪ್ಪನ ಕಟ್ಟೆಗೆ ಗೋವುಗಳನ್ನು ಹೊಡೆದುಕೊಂಡು ಹೋಗಿ ಅಲ್ಲಿ ಪೂಜೆ ಸಲ್ಲಿಸಿ ಆಕಳುಗಳನ್ನು ಓಡಿಸುವ ಕಾರ್ಯ ನಡೆಸಲಾಗುತ್ತದೆ. ಆದರೆ, ಈ ವರ್ಷ ಸಾಮಾನ್ಯವಾಗಿ ಎಲ್ಲಿಯೂ ಆಕಳುಗಳನ್ನು ಓಡಿಸುವ ಕಾರ್ಯ ನಡೆಯಲಿಲ್ಲ. ಆಕಳುಗಳನ್ನು ಸಾಕಿದವರ ಸಂಖ್ಯೆಯೇ ಕಡಿಮೆ. ಇದ್ದ ಗೋವನ್ನು ಕೊಟ್ಟಿಗೆಯಿಂದ ಹೊರ ಹಾಕುವುದು ಕಷ್ಟವಾಗಿದೆ.