ಸಿನಿಮಾ

ಸಿದ್ದರಾಮಯ್ಯ ಪ್ರಮಾಣ ವಚನ: ಸಿಹಿ ಹಂಚಿ ಸಂಭ್ರಮ

ಎಚ್.ಡಿ.ಕೋಟೆ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಎಚ್.ಡಿ. ಕೋಟೆ ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.


ಜಿಲ್ಲಾ ಕಾಂಗ್ರೆಸ್ ಡಿಸಿಸಿ ಸದಸ್ಯ ಪರಶಿವಮೂರ್ತಿ ಮಾತನಾಡಿ, ಅನಿಲ್ ಚಿಕ್ಕಮಾದು ಸತತ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಾಲೂಕಿನಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಮೊದಲ ಅವಧಿಯಲ್ಲಿ ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದರು. ಹಾಗಾಗಿ ತಾಲೂಕಿನ ಜನತೆ ಎರಡನೇ ಬಾರಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ ಎಂದರು.


ಕಳೆದ ಬಾರಿ ಬಿಜೆಪಿ ಸರ್ಕಾರ ಇದ್ದರೂ ಮುಖ್ಯಮಂತ್ರಿ, ಸಚಿವರ ಜತೆ ಉತ್ತಮ ಒಡನಾಟ ಇಟ್ಟುಕೊಂಡು ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ಜತೆ ಶಾಸಕರು ಉತ್ತಮ ಒಡನಾಟ ಇಟ್ಟುಕೊಂಡಿರುವ ಕಾರಣ ತಾಲೂಕಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಲ್ಇಡಿ ಟಿವಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ವೀಕ್ಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.


ಮುಖಂಡರಾದ ಶಶಿ ಪಟೇಲ್, ಮಾದೇವ, ಸೋಮು, ಬುದನೂರು ಮಾದೇವ, ಅಪ್ರಾನ್ ಖಾನ್, ಅಕ್ರಮ್, ತನು, ಪಾರುಕ್, ರಾಜು, ಚಿಕ್ಕಣ್ಣ, ಮೂರ್ತಿ, ಚಲುವರಾಜು, ಜೈಬಾಲ್, ಸ್ನೇಕ್ ಹಾಲಿ, ತಿಮ್ಮರಾಜು, ಶಿವರಾಜು ಮುಂತಾದವರು ಹಾಜರಿದ್ದರು.

Latest Posts

ಲೈಫ್‌ಸ್ಟೈಲ್