ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲೇ ಜಿಲ್ಲಾಧಿಕಾರಿಯನ್ನು ಏಕವಚನದಲ್ಲಿ ಬೈಯ್ದು ಅವಮಾನ ಮಾಡಿದ್ದಾರೆ. ಆ ಮೂಲಕ ಇಡೀ ಅಧಿಕಾರಶಾಹಿ ವರ್ಗಕ್ಕೆ ಅವಮಾನ ಮಾಡಿದ್ದಾರೆ. ಎಲ್ಲರನ್ನೂ ಏಕವಚನದಲ್ಲಿ ಮಾತಾಡಿಸೋದು ಸಿದ್ದರಾಮಯ್ಯಗೆ ಚಟ. ಸಿದ್ದರಾಮಯ್ಯ ತಮ್ಮ ಅಹಂಕಾರ ಬಿಡಬೇಕು. ಅಧಿಕಾರದಿಂದ ಸಿದ್ದರಾಮಯ್ಯ ಕೆಳಗಿಳಿದ ಮೇಲೆ ಅವರ ಪರಿಸ್ಥಿತಿ ಏನಾಗುತ್ತದೆ ಎಂದು ನೆನಪಿಸಿಕೊಳ್ಳಲಿ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರ ಅಹಂಕಾರದ ನಡವಳಿಕೆಯಿಂದ ಜಿಲ್ಲಾಧಿಕಾರಿ ದಿವಾಕರ್ ತೀವ್ರ ಮುಜುಗರಕ್ಕೆ ಒಳಗಾಗಿ ಹಿಂದಕ್ಕೆ ಹೋಗಿದ್ದಾರೆ. ಸಿದ್ದರಾಮಯ್ಯ ಆಡಿದ ಮಾತಿನಿಂದ ಅವರ ಆತ್ಮಸ್ತೈರ್ಯ ಕುಗ್ಗಿದೆ. ಅಂದಿನ ಸನ್ನಿವೇಶದಿಂದ ಡಿಸಿಗೆ ಎಷ್ಟು ಅವಮಾನವಾಗಿರಬೇಕು? ಎಷ್ಟು ನೋವಾಗಿರಬೇಕು? ಈ ಘಟನೆಯಿಂದ ಜನರು ಡಿಸಿಯನ್ನು ನೋಡುವ ರೀತಿ ಬದಲಾಗಲಿದೆ. ಸಿಎಂ ಸಿದ್ದರಾಮಯ್ಯ ದುರಹಂಕಾರದಿಂದ ನಡೆದುಕೊಳ್ಳುವುದನ್ನು ಬಿಡಬೇಕು. ಇವರೇನು ದೇವರಾಜ ಅರಸು ಅಲ್ಲ. ಮುಡಾದಲ್ಲಿ ಭ್ರಷ್ಟಾಚಾರ ಮಾಡಿದ ಇಬ್ಬರು ಆಯುಕ್ತರನ್ನು ಮುಟ್ಟುವ ಯೋಗ್ಯತೆ ಇಲ್ಲ. ನೀವು ಒಬ್ಬ ಡಿಸಿ ಮೇಲೆ ದರ್ಪ ಮಾಡುತ್ತೀರಾ? ಎಂದು ಹರಿಹಾಯ್ದರು.
ಊರು ಸೀಮೆಯಲ್ಲಿ ಇಲ್ಲದ ನಾಯಕನಾ ಸಿದ್ದರಾಮಯ್ಯ? ಸಿದ್ದರಾಮಯ್ಯ ದೇವರಾಜ ಅರಸುಗಿಂತ ದೊಡ್ಡ ಲೀಡರ್ ಏನೂ ಅಲ್ಲ. ದೇವರಾಜ ಅರಸು ಅವರೇ ಯಾವತ್ತೂ ಅಹಂಕಾರ ತೋರಲಿಲ್ಲ ಎಂದರು.
ಗೋಮಾತೆಯನ್ನು ಪೂಜಿಸುತ್ತೇವೆ. ಗೋಮಾತೆಯ ಕೆಚ್ಚಲು ಕೊಯ್ಯುವ ಸ್ಥಿತಿಗೆ ಈ ರಾಜ್ಯವನ್ನು ಸಿದ್ದರಾಮಯ್ಯ ತಂದಿದ್ದಾರೆ. ನಿಮ್ಮ ಆಡಳಿತಕ್ಕೆ ಅಷ್ಟು ಬೆಂಕಿ ಹಾಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.