ತುಮಕೂರು: ತುಮಕೂರಿನಲ್ಲಿ ಸತತ ಮೂರು ಸಮುದಾಯದ ಸಮಾವೇಶಗಳನ್ನು ಆಯೋಜಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಮುನ್ನುಡಿ ಬರೆದಿದ್ದಾರೆ.
ಇತ್ತೀಚೆಗಷ್ಟೇ ಮಡಿವಾಳ ಹಾಗೂ ಅಲ್ಪಸಂಖ್ಯಾತ ಸಮುದಾಯದ ಸಮಾವೇಶ ತುಮಕೂರಿನಲ್ಲಿಯೇ ಸಿದ್ದರಾಮಯ್ಯ ಕೇಂದ್ರಿತವಾಗಿ ನಡೆದ ಬೆನ್ನಲ್ಲೇ ಶನಿವಾರ ಕುರುಬರ ಸಮಾವೇಶ ಕೂಡ ಭರ್ಜರಿಯಾಗಿ ಯಶ ಕಂಡಿರುವುದು ರಾಜ್ಯದಲ್ಲಿ ಮತ್ತೆ ಅಹಿಂದ ಸಂಘಟನೆಗೆ ಚಾಲನೆ ಸಿಗುವ ಕುರುಹು ನೀಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ರಾಜಕೀಯ ವಲಯದಲ್ಲಿ ಗುಟ್ಟಾಗಿ ಉಳಿದಿಲ್ಲ. ಇದೇ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ನೆರಳಿನಲ್ಲಿಯೇ ರಾಜ್ಯದೆಲ್ಲೆಡೆ ಅಹಿಂದ ಸಮಾವೇಶ ಸಂಘಟನೆಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ. 2005ರಲ್ಲಿ ತುಮಕೂರಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಅಹಿಂದ ಸಮಾವೇಶ ಸಂಘಟಿಸಿದ್ದ ಸಿದ್ದರಾಮಯ್ಯ ನಂತರ ಜೆಡಿಎಸ್ ತೊರೆದಿದ್ದು, ಎಬಿಪಿಜೆಡಿ ಕಟ್ಟಿದ್ದು, ಕಾಂಗ್ರೆಸ್ ಜತೆ ವಿಲೀನವಾಗಿ, ವಿಪಕ್ಷ ನಾಯಕ ಹಾಗೂ ಸಿಎಂ ಕೂಡ ಆಗಿದ್ದು ಈಗ ಇತಿಹಾಸ ಎನಿಸಿದ್ದು, ತುಮಕೂರು ಅವರಿಗೆ ಶಕ್ತಿ ಹೆಚ್ಚಿಸುವ ಕೇಂದ್ರವಾಗಿರುವುದು ಸುಳ್ಳಲ್ಲ. ಅಂದು ಜೆಡಿಎಸ್ ತೊರೆಯಲಿದ್ದ ಸಿದ್ದರಾಮಯ್ಯ ಪರವಾಗಿ ಸಂಸದರಾಗಿದ್ದ ಜಿ.ಎಸ್.ಬಸವರಾಜು ಸಹಿತವಾಗಿ ಎಲ್ಲ ಕಾಂಗ್ರೆಸ್ ಮುಖಂಡರು ನಿಂತಿದ್ದರು, ಈಗ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ನಾಯಕ ಸಿದ್ದರಾಮಯ್ಯ ಪರವಾಗಿ ಗಟ್ಟಿಯಾಗಿ ನಿಂತಿರುವುದು ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಂತಃ ಕಲಹಕ್ಕೆ ಕಾರಣವಾಗಿದೆ.
ಸಿಎಂ ರೇಸ್‌ನಲ್ಲಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಈ ಸಮಾವೇಶಗಳಿಂದ ದೂರ ಉಳಿದಿದ್ದು, ಮೌನವಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ, 2018ರಲ್ಲಿ ಕೊರಟಗೆರೆಯಲ್ಲಿ ಪರಮೇಶ್ವರ್ ಸೋಲಿನ ಹಿಂದೆ ಕೆಲಸ ಮಾಡಿದ್ದ ಕಾಣದ ‘ಕೈ’ಗಳೇ ಈಗಲೂ ಸಿದ್ದರಾಮಯ್ಯ ಅವರಿಗೆ ಶಕ್ತಿ ನೀಡುತ್ತಿವೆ ಎಂಬ ಮಾತು ಪ್ರಚಲಿತಕ್ಕೆ ಬಂದಿದೆ. ಆ.3ರಂದು ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ಅಹಿಂದ ಸಮಾವೇಶಕ್ಕೆ ಸಿದ್ಧತೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಸಿದ್ಧತೆ ಕೂಡ ಆರಂಭಿಸಿದ್ದು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರ ಅಧಿನಾಯಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಲು ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್.ರಾಜೇಂದ್ರ ಗೆಲುವಿನ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿರುವ ಅಹಿಂದ ಶಕ್ತಿ ಮುಖಂಡರಿಗೂ ಮನವರಿಕೆಯಾಗಿದ್ದು ಸಂಘಟನೆ ಬಲಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ರಾಜಕೀಯವಾಗಿ ಒಕ್ಕಲಿಗರು ಶಕ್ತಿ ಕಳೆದುಕೊಳ್ಳಲಾರಂಭಿಸಿದ್ದು, ಲಿಂಗಾಯತರು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆ ರಾಜಕೀಯವಾಗಿ ಯಾರಿಗೆ ಲಾಭ ತರಲಿದೆ ಎಂಬ ಕುತೂಹಲವಿದೆ.
ಡಿಕೆಶಿ ಬದಲಾವಣೆಗೆ ಮಾಸ್ಟರ್ ಪ್ಲಾನ್: ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಇ.ಡಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿರುವ ಬೆನ್ನ ಹಿಂದೆಯೇ ಸಿದ್ದರಾಮಯ್ಯ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆೆ. ಕೆ.ಎಸ್.ಈಶ್ವರಪ್ಪ ವಿಷಯದಲ್ಲಿ ಎಫ್‌ಐಆರ್ ದಾಖಲಾದ ಕೂಡಲೇ ರಾಜೀನಾಮೆ ಪಡೆದು ಬೀಗಿದ್ದ ಕಾಂಗ್ರೆಸ್‌ಗೆ ಅಧ್ಯಕ್ಷರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿರುವ ವಿಷಯವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಇದೇ ವಿಷಯ ಮುಂದಿಟ್ಟುಕೊಂಡು ಜೂನ್ ಮೊದಲ ವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಉನ್ನತ ಮಟ್ಟದ ಸಭೆಯಲ್ಲಿ ದನಿ ಎತ್ತಲು ಸಿದ್ದು ಪಾಳಯ ವೇದಿಕೆ ಸಿದ್ಧವಾಗಿಸಿಕೊಂಡಿದೆ ಎನ್ನಲಾಗಿದೆ. ಡಿಕೆಶಿ ಪದತ್ಯಾಗ ಸಾಧ್ಯತೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತಷ್ಟು ಚುರುಕಾಗಿ ಓಡಾಡುವುದು ಖಚಿತವಾಗಿದೆ.
1983ರಲ್ಲಿ ಪಕ್ಷೇತರನಾಗಿ ಶಾಸಕನಾದೆ ನಂತರ ಕನ್ನಡ ಕಾವಲು ಸಮಿತಿ, ಸಚಿವ, ಸಿಎಂ ಕೂಡ ಆಗಿದ್ದರೆ ಅದಕ್ಕೆ ತಳವರ್ಗದ ಜನರ ಸಹಕಾರವೇ ಕಾರಣ, ಇವರ ಋಣ ತೀರಿಸಬೇಕಾದ್ದು ನನ್ನ ಕರ್ತವ್ಯ. 2005ರಲ್ಲಿ ಅಹಿಂದಾ ಸಮಾವೇಶ ತುಮಕೂರಿನಲ್ಲಿಯೇ ನಡೆದಿತ್ತು, ಈಗ ಕುರುಬರ ಸಮಾವೇಶ ದೊಡ್ಡ ಪ್ರಮಾಣದಲ್ಲಿ ನಡೆದಿರುವುದು ಸಂತೋಷ ತಂದಿದೆ.
– ಸಿದ್ದರಾಮಯ್ಯ ಮಾಜಿ ಸಿಎಂ