ಸಿಡಾಕ್ ಸಭೆಯಲ್ಲಿ ಸಚಿವ ಪರಮೇಶ್ವರ ಗಡಿಬಿಡಿ

ಧಾರವಾಡ: ಆಗೊಮ್ಮೆ ಈಗೊಮ್ಮೆ ಬರುವ ಸಚಿವರಿಗೆ ಪೂರ್ಣ ಮಾಹಿತಿ ನೀಡಬೇಕು ಎಂದು ಎಲ್ಲ ಸಿದ್ಧತೆಯೊಂದಿಗೆ ಅಧಿಕಾರಿಗಳು ಸಭೆಗೆ ಆಗಮಿಸಿದ್ದರು. ಆದರೆ, ಸಚಿವರು ಮಾತ್ರ ಯಾವುದನ್ನೂ ಆಸಕ್ತಿಯಿಂದ ಕೇಳದೆ, ಅಲ್ಪ ಸ್ವಲ್ಪ ಕೇಳಿ ಕೆಲ ಸಲಹೆ ನೀಡಿ ಹೊರಟು ನಿಂತರು.

ನಗರದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿನ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ದಲ್ಲಿ ಬುಧವಾರ ನಡೆದ ಸಿಡಾಕ್ ಹಾಗೂ ಹು-ಧಾ ಜಿಟಿಟಿಸಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಕಾರ್ಯ ವೈಖರಿ ಇದು.

ಕೇಂದ್ರಕ್ಕೆ ಆಗಮಿಸಿದ ಸಚಿವರು ಮೊದಲು ಹಾವೇರಿ ಜಿಲ್ಲೆಯ ಜಿ.ಪಂ. ಸದಸ್ಯರ ತರಬೇತಿ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಡಿಬಿಡಿಯಲ್ಲೇ ಅಧಿಕಾರಿಗಳು ಪ್ರದರ್ಶಿಸಿದ ಪಿಪಿಟಿ ವೀಕ್ಷಿಸಿದರು. ನಂತರ ಕೆಲ ಸಲಹೆ ನೀಡಿ 20ರಿಂದ 25 ನಿಮಿಷದಲ್ಲಿ ಸಭೆ ಮುಕ್ತಾಯಗೊಳಿಸಿದರು.

ಸಭೆಯಲ್ಲಿ ಮಾತನಾಡಿದ ಸಚಿವರು, ಟೆಕ್ನಿಕಲ್ ಹಾಗೂ ನಾನ್ ಟೆಕ್ನಿಕಲ್ ಅಭ್ಯರ್ಥಿಗಳಿಗೆ ಒಟ್ಟಿಗೆ ತರಬೇತಿ ನೀಡಿದರೆ ಸಂಸ್ಥೆ ಉದ್ದೇಶ ಸಫಲವಾಗುವುದಿಲ್ಲ. ಬೇರೆ ಬೇರೆ ತರಬೇತಿ ನೀಡಬೇಕು. ಕೆಲ ತರಬೇತಿಗಳನ್ನು 6 ದಿನಗಳು ಮಾತ್ರ ನಡೆಸಲಾಗುತ್ತಿದೆ. ಅವುಗಳ ಅವಧಿ ಹೆಚ್ಚಿಸಬೇಕು ಎಂದು ಸೂಚಿಸಿದರು.

ತರಬೇತಿ ಪಡೆದು ಸ್ವಯಂ ಉದ್ಯೋಗ ನಡೆಸುವ ಅಭ್ಯರ್ಥಿಗಳ ಪ್ರೊಜೆಕ್ಟ್​ಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಶೇ.70ರಷ್ಟು ಹಣ ನೀಡುತ್ತಿದ್ದು, ಶೇ. 90ಕ್ಕೆ ಏರಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಸಂಸ್ಥೆಗೆ ವರ್ಷಕ್ಕೆ 9 ಕೋಟಿ ರೂ. ವ್ಯಯಿಸಲಾಗುತ್ತಿದೆ. ಆದರೆ ಇಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ಕಾರಣಬೇಕು. ತರಬೇತಿ ಪಡೆದವರಲ್ಲಿ ಉದ್ಯೋಗ ಪ್ರಾರಂಭಿಸಿದವರ ಸಂಖ್ಯೆ ಕಡಿಮೆ ಇದೆ. ಅದನ್ನು ಸುಧಾರಿಸುವ ಕೆಲಸ ನಡೆಯಬೇಕು ಎಂದರು.

ಸ್ವಯಂ ಉದ್ಯೋಗ ಪ್ರಾರಂಭಿಸುವವರು ಕೆಐಎಡಿಬಿ ನಿವೇಶನ ಪಡೆಯುವುದು ಕಷ್ಟ. ಹೀಗಾಗಿ ನಾವೇ ಜಾಗ ಗುರುತಿಸಿ ಶೆಡ್ ನಿರ್ವಿುಸಿಕೊಡುವ ಚಿಂತನೆ ನಡೆದಿದೆ. ಈ ಕುರಿತು ಸಂಸ್ಥೆ ವತಿಯಿಂದ ಪ್ರಸ್ತಾವ ಸಲ್ಲಿಸಿದರೆ ಯೋಜನೆ ಸಿದ್ಧಪಡಿಸಲು ಅನುಕೂಲವಾಗುತ್ತದೆ. ಜಿಟಿಟಿಸಿ ತರಬೇತಿ ಪಡೆಯುವ ಎಸ್​ಸಿ, ಎಸ್​ಟಿ ಹಾಗೂ ಹಿಂದುಗಳಿದ ವರ್ಗಗಳ ಅಭ್ಯರ್ಥಿಗಳಿಗೆ ಮಾತ್ರ ಸ್ಟೈಫಂಡ್ ನೀಡಲಾಗುತ್ತಿದೆ. ಇದನ್ನು ಸಾಮಾನ್ಯ ವರ್ಗದವರಿಗೂ ವಿಸ್ತರಿಸಬೇಕು. ಈ ಕುರಿತು ಸಮಗ್ರ ಮಾಹಿತಿ ನೀಡಿ. ಸಂಬಂಧಪಟ್ಟ ಇಲಾಖೆ ಜೊತೆ ಮಾತನಾಡುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಿಡಾಕ್ ನಿರ್ದೇಶಕ ಬಿ.ಎಂ. ಗೋಟೂರ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಎಚ್. ರಾಘವೇಂದ್ರ, ಅಧಿಕಾರಿಗಳು, ಇತರರು ಇದ್ದರು.

———-ಬಾಕ್ಸ್———-

ಪಿಡಿಒ ಕೈಚೀಲ ಹಿಡಿದು ಓಡಾಡ್ತಾರೆ

ಧಾರವಾಡ: ಇಂದಿನ ಗ್ರಾಪಂ, ತಾಪಂ ಅಧ್ಯಕ್ಷರು ಪಿಡಿಒಗಳ ಕೈ ಚೀಲ ಹಿಡಿದುಕೊಂಡು ಓಡಾಡುತ್ತಾರೆ. ಇದು ಅತ್ಯಂತ ನೋವಿನ ವಿಷಯವೋ ಅಥವಾ ದುರಂತ ಎನ್ನಬೇಕೋ ತಿಳಿಯದಂತಾಗಿದೆ ಎಂದು ಸಚಿವ ಪಿ.ಟಿ. ಪರಮೇಶ್ವರ ನಾಯಕ ಬೇಸರ ವ್ಯಕ್ತಪಡಿಸಿದರು.

ಅಬ್ದುಲ್ ನಜೀರ್​ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ ಸಿಡಾಕ್​ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಾವೇರಿ ಜಿಲ್ಲೆಯ ಜಿ.ಪಂ.ಹಾಗೂ ತಾ.ಪಂ ಮಹಿಳಾ ಸದಸ್ಯರ ತರಬೇತಿ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು.

ಶಾಸಕರು, ಮಂತ್ರಿಗಳಿಂದ ಮೆಚ್ಚುಗೆ ಪಡೆಯಲು ಅಧಿಕಾರಿಗಳು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ದಾರಿ ತಪ್ಪಿಸುತ್ತಾರೆ. ಹೀಗಾಗಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಅಧಿಕಾರ ಸಣ್ಣದು ಎಂಬ ಅಭಿಪ್ರಾಯ ಬಿಟ್ಟು ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಹೊಂದಬೇಕು ಎಂದರು.

ತರಬೇತಿ ಪಡೆದ 19 ಜನರಿಗೆ ಸಚಿವರು ಪ್ರಮಾಣಪತ್ರ ವಿತರಿಸಿದರು. ಸಂಸ್ಥೆ ಉಪ ನಿರ್ದೇಶಕ ಬಿ.ಎಸ್. ಮೂಗನೂರಮಠ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಎಪಿಎಂಸಿ ಸದಸ್ಯ ವೀರಣ್ಣ, ಕೊಟ್ರೇಶ, ಸಂಸ್ಥೆ ಪದಾಧಿಕಾರಿಗಳು, ಇತರರು ಇದ್ದರು. ಮಲ್ಲಿಕಾರ್ಜುನ ಸ್ವಾಗತಿಸಿದರು.

Leave a Reply

Your email address will not be published. Required fields are marked *