ಸಿಟ್ಟು, ಸೇಡು ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಕೃತಿಗಳು

ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟರೆ ಆಪತ್ತು, ವಿಪತ್ತು ಹೆಚ್ಚುತ್ತವೆ. ಕೋಪದ ಕೈಗೆ ಬುದ್ಧಿ ಕೊಟ್ಟು ಕೆಡಬಾರದೆಂಬ ಸಾಮಾನ್ಯ ಜ್ಞಾನವನ್ನು ಶಿಕ್ಷಕರು, ಪಾಲಕರು ಮಕ್ಕಳಿಗೆ ತಿಳಿಹೇಳಬೇಕು. ಇಂದು ಸಮಾಜದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಡಲು ಪ್ರೇರೇಪಿಸುವ ಸಿಟ್ಟು, ಸೊಕ್ಕು, ಸೇಡನ್ನು ಜನ ನಿಯಂತ್ರಿಸಲೇಬೇಕು.

 ಇತ್ತೀಚಿನ ದಿನಗಳಲ್ಲಿ ಜನರಲ್ಲಿ ತಾಳ್ಮೆ ಮತ್ತು ಸಹನೆ ಕಡಿಮೆಯಾಗಿ ಆತಂಕ ಮತ್ತು ಕೋಪ ಹೆಚ್ಚುತ್ತಿರುವುದು ದುರಂತ. ಒಂದು ಕಾಲಕ್ಕೆ ವಿಮಾನಯಾನ ಮಾಡುವವರಿಗೆ ರಾಜಮರ್ಯಾದೆ ಕೊಡುತ್ತಿದ್ದರು! ಈಗ ಪ್ರಯಾಣಿಕರು ಕ್ಷುಲ್ಲಕ ಕಾರಣಕ್ಕೆ ಕೆಲಸದವರ ಮೇಲೆ ಕೋಪದಿಂದ ಹರಿಹಾಯ್ದರೆ, ಅವರು ತಾವೇಕೆ ತಾಳಿಕೊಳ್ಳಬೇಕೆಂದು ಪ್ರಯಾಣಿಕರನ್ನೇ ಹೆಡೆಮುರಿ ಕಟ್ಟಿದ್ದನ್ನು ನಾವೆಲ್ಲ ಮಾಧ್ಯಮಗಳಲ್ಲಿ ನೋಡಿದ್ದೇವೆ. ಯಾಕೆ ನಮ್ಮ ಸಮಾಜ ಜಗಳಗಂಟರ ಸಮಾಜವಾಗುತ್ತಿದೆ? ಮಂತ್ರಿಗಳು, ಸಂಸದರು, ನ್ಯಾಯಾಧೀಶರು, ಓದಿದವರು, ಹಣವಂತರು ಯಾಕೆ ಶಿಷ್ಟಾಚಾರ ಮರೆತಂತೆ ಆಡುತ್ತಿದ್ದಾರೆ? ಎಂದು ಚಿಂತನ-ಮಂಥನ ಮಾಡಿ ಪರಿಹಾರ ಕಂಡುಹಿಡಿಯಬೇಕೆಂದರೆ ಜ್ಞಾನ, ವಿಜ್ಞಾನ ಮತ್ತು ತತ್ತ್ವಜ್ಞಾನ ಏನು ಹೇಳುತ್ತದೆ ಎಂಬುದನ್ನು ನಾವು ಅರಿಯಲೇಬೇಕು. ನಮ್ಮ ನಡವಳಿಕೆಯಲ್ಲಿ ಪರಿವರ್ತನೆ ತರಲೇಬೇಕು. ಇಲ್ಲದಿದ್ದರೆ ಸಮಾಜದ ಸ್ವಾಸ್ಥ್ಯ ಹದಗೆಡುವುದು ಖಚಿತ.

ಸಾಮಾನ್ಯ ಜ್ಞಾನ: ‘ಬಡವನ ಕೋಪ ದವಡೆಗೆ ಮೂಲ’ ಅಂತ ಗಾದೆಮಾತಿದೆ. ಅಂದರೆ ಬಡವರು ಮಾತ್ರ ಕೋಪ ಮಾಡಿಕೊಳ್ಳಬಾರದು ಅಂತ ಅಲ್ಲ. ಕೋಪ ಯಾರೇ ಮಾಡಿಕೊಂಡರೂ ಎದುರಾಳಿ ತಿರುಗೇಟು ಕೊಟ್ಟರೆ ಹಲ್ಲು ಮುರಿಯುವುದು ಖಂಡಿತ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಲ್ಲಿ ಕೂಡ ಕೋಪ ಹೆಚ್ಚುತ್ತಿದೆ. ಜನರೊಂದಿಗೆ ಅಹಂಕಾರದಿಂದ ವರ್ತಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಸಾಮಾನ್ಯವಾಗಿ ಜನರು ಕೋಪ ಬರುವುದು ಸಹಜ ಅಂದುಕೊಳ್ಳುತ್ತಾರೆ. ಅದು ಮಿಥ್ಯ. ಯಾವುದಾದರೂ ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಪ್ರತೀಕಾರಕ್ಕಾಗಿ ಪೌರುಷ ತೋರಿಸಲು ಹೋಗಿ ಬಾಯಿಗೆ ಬಂದಂತೆ ಮಾತನಾಡಿ, ಮಾತಿಗೆ ಮಾತು ಬೆಳೆದು ಮರ್ಯಾದೆ ಕಳೆದುಕೊಂಡವರೇನು ಕಡಿಮೆ ಇಲ್ಲ.

ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟರೆ ಆಪತ್ತು ಮತ್ತು ವಿಪತ್ತು ಎರಡೂ ಹೆಚ್ಚುತ್ತವೆ ಎಂಬುದನ್ನು ಮರೆಯಬಾರದು. ವಿದುರನೀತಿ ಎಂದೇ ಜಗತ್ಪ್ರಸಿದ್ಧವಾದುದರಲ್ಲಿ ಸ್ವತಃ ವಿದುರ ಧೃತರಾಷ್ಟ್ರನಿಗೆ ಹೇಳುತ್ತಾನೆ- ‘ಸಿಟ್ಟು ನಮ್ಮನ್ನೇ ಸುಟ್ಟುಹಾಕುವಷ್ಟು ಶಕ್ತಿಶಾಲಿ ಎಂಬುದನ್ನು ಮರೆಯಬೇಡ ಧೃತರಾಷ್ಟ್ರ’. ಸಿಟ್ಟಿನಿಂದ ಆಗುವ ಅನಾಹುತಗಳನ್ನು ವಿದುರ ವಿವರಿಸುತ್ತ ಹೀಗೆ ಹೇಳುತ್ತಾನೆ- ‘ಸಿಟ್ಟಿನಿಂದ ಮಿತ್ರರು ವೈರಿಗಳಾಗುತ್ತಾರೆ. ಸುಖ, ನೆಮ್ಮದಿ ಮಾಯವಾಗಿ, ದುಃಖ-ಚಿಂತೆ ಆವರಿಸುತ್ತದೆ. ಕೋಪ ತಡೆಗಟ್ಟಿದರೆ ಮಾತ್ರ ಮನಸ್ಸು ಆತ್ಮೀಯ ಬಂಧುವಿನಂತೆ ಸಹಕರಿಸಿ ಆತ್ಮೋನ್ನತಿಗೆ ಕಾರಣವಾಗಬಹುದು. ಬುದ್ಧಿ ಹೇಳಿದಂತೆ ನಡೆಯದಿದ್ದರೆ ಇಂದ್ರಿಯಗಳು ವೈರಿಗಳಂತೆ ನಮ್ಮನ್ನು ಹಾಳುಮಾಡುತ್ತವೆ ಎಂದು ಮರೆಯಬೇಡ ರಾಜನ್’.

ಕೋಪದ ಕೈಗೆ ಬುದ್ಧಿ ಕೊಟ್ಟು ಕೆಡಬಾರದೆಂಬ ಸಾಮಾನ್ಯ ಜ್ಞಾನವನ್ನು ನಾವು ಚಿಕ್ಕಮಕ್ಕಳಿದ್ದಾಗಲೇ ಶಿಕ್ಷಕರು, ಪಾಲಕರು ಮಕ್ಕಳಿಗೆ ತಿಳಿಹೇಳಬೇಕು. ನಾನು ಚಿಕ್ಕವಳಿದ್ದಾಗ ಶಾಲೆಯಲ್ಲಾಗಲಿ ಮನೆಯಲ್ಲಾಗಲಿ ಎಂದೂ ಜಗಳವಾಡಿದ ನೆನಪೇ ಇಲ್ಲ. ಆದರೆ ಇಂದು ಶಾಲೆ ಮಕ್ಕಳೊಂದಿಗೆ ಸಂವಾದ ಮಾಡುತ್ತ, ‘ಯಾರಿಗೆ ಕೋಪ ಮೂಗಿನ ತುದಿಯ ಮೇಲಿರುತ್ತದೆ, ಗೆಳೆಯರೊಂದಿಗೆ ಜಗಳವಾಡುತ್ತೀರಿ ಕೈಎತ್ತಿ’ ಎಂದು ಕೇಳಿದರೆ ಪ್ರತಿಯೊಬ್ಬ ಮಗು ಕೈಎತ್ತಿದ್ದನ್ನು ಕಂಡು ದಂಗಾದೆ! ಇದಕ್ಕೆ ಕಾರಣ ಯೋಚಿಸಿದಾಗ ನನಗೆ ಅನ್ನಿಸಿದ್ದು, ಇಂದು ಮಕ್ಕಳಿಗೆ ಚಿತ್ರನಟರು ಆದರ್ಶವಾಗಿದ್ದಾರೆ. ಅವರು ಹಣಕ್ಕಾಗಿ ನಟಿಸಿ ಪೌರುಷದಿಂದ ಕಾದಾಡುವುದೇ ಹೀರೋಗಳ ಲಕ್ಷಣ ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿ ಮೂಡುತ್ತಿದೆ. ಮನೆಯಲ್ಲಿ ತಂದೆ-ತಾಯಿಯರ ಜಗಳ, ಶಾಲೆಯಲ್ಲಿ ಇತರರೊಂದಿಗೆ ಜಗಳ, ಟಿವಿ-ಚಲನಚಿತ್ರಗಳಲ್ಲಿ ರಂಜನೆಗಾಗಿ ಜಗಳ- ಹೀಗೆ ಜಗಳದಲ್ಲಿಯೇ ಬೆಳೆದ ಮಕ್ಕಳು, ಕೋಳಿಗಳಂತೆ ಅಥವಾ ಟಗರಿನಂತೆ ಅಥವಾ ಗೂಳಿಗಳಂತೆ ಕಾದಾಡುವುದೇ ಬದುಕುವ ರೀತಿ ಎಂಬ ಭಾವನೆಯನ್ನು ಮನಸ್ಸಿನಲ್ಲಿ ಮೂಡಿಸಿಕೊಳ್ಳುತ್ತಿದ್ದಾರೆ.

ನಾನು ಚಿಕ್ಕವಳಿದ್ದಾಗ, ‘ಕೆಟ್ಟಮಾತು ಆಡಿದರೆ ಬಾಯಲ್ಲಿ ಹುಳ ಬೀಳುತ್ತದೆ’ ಎಂದು ನಮ್ಮ ತಾಯಿ ಹೆದರಿಸುತ್ತಿದ್ದರು. ನಾವು ತಾಯಿಮಾತನ್ನು ನಂಬಿ, ಎಂದೂ ತಪ್ಪಿಕೂಡ ಬಾಯಿಂದ ಕೆಟ್ಟಮಾತು ಬರದಂತೆ ಎಚ್ಚರವಹಿಸುತ್ತಿದ್ದೆವು. ತಪ್ಪಿ ಕೂಡ ಯಾರಿಗಾದರೂ ಕಾಲು ತಾಗಿದರೆ ಅವರನ್ನು ಮುಟ್ಟಿ ಕ್ಷಮೆ ಕೇಳಿ ನಮಸ್ಕರಿಸುತ್ತಿದ್ದೆವು. ಒಂದು ಸಲ ಅಮೆರಿಕದ ಪ್ರತಿಷ್ಠಿತ ಬಾಸ್ಟನ್ ಆಸ್ಪತ್ರೆಯಲ್ಲಿ ನನ್ನ ಕಾಲು ತಾಗಿದವರನ್ನು ಮುಟ್ಟಿ ನಮಸ್ಕರಿಸಿದಾಗ ಆ ವೈದ್ಯೆ ತಿರುಗಿ ಚಕಿತಳಾಗಿ “What’s that?’ ಅಂತ ಕೇಳಿದರು. ನಾನು ವಿವರಿಸಿದಾಗ “Oh, that was my fault’’ ಅಂತ ಹೇಳಿ ನನ್ನನ್ನು ಮುಟ್ಟಿ ನನ್ನಂತೆ ಕಣ್ಣಿಗೊತ್ತಿಕೊಂಡಿದ್ದರು. ಅಂದರೆ ವಿಶ್ವಕ್ಕೆ ಮಾದರಿಯಾದ ನಮ್ಮ ಸಂಸ್ಕೃತಿಯನ್ನು ಬಿಟ್ಟು ನಾವು ಯಾಕೆ ಕಚ್ಚಾಡುತ್ತಿದ್ದೇವೆ?

ವಿಜ್ಞಾನ ಏನು ಹೇಳುತ್ತದೆ?: ಕೋಪದಿಂದ ಶರೀರ ಮತ್ತು ಮನಸ್ಸು ಎರಡೂ ರೋಗಗ್ರಸ್ತವಾಗುತ್ತವೆ. ಕೋಪಗೊಂಡವನ ಮನಸ್ಸಿನ ತಳಮಳ, ಜಿಗುಪ್ಸೆ ಹೆಚ್ಚುತ್ತವೆ. ಮದ, ಮತ್ಸರ, ಸೇಡಿನಂಥ ನಕಾರಾತ್ಮಕ ಭಾವನೆ ಬೆಳೆದು ನಿದ್ರೆ ಬರದಂತೆ ಆಗುತ್ತದೆ. ಹೃದಯದ ಬಡಿತ ಹೆಚ್ಚಾಗಿ, ನಾಡಿಮಿಡಿತದ ವೇಗ ಹೆಚ್ಚುತ್ತದೆ. ರಕ್ತದ ಒತ್ತಡ ಹೆಚ್ಚಾಗಿ ಉಸಿರಾಟದ ವೇಗ ಕೂಡ ಹೆಚ್ಚುತ್ತದೆ. ಮೈ ಬೆವೆತುಕೊಂಡು, ಕೈಕಾಲು ನಡುಕ ಉಂಟಾಗಿ, ನರ-ನಾಡಿ, ಸ್ನಾಯು ಬಿಗಿದುಕೊಳ್ಳುತ್ತವೆ. ಕಾರಣ, ಕೋಪಗೊಂಡಾಗ ಮಿದುಳಿನಿಂದ “Fight or Flight harmone’ ಅಂದರೆ Catecholomines ಮತ್ತು Cortisol ಉತ್ಪತ್ತಿ 400 ಪಟ್ಟು ಹೆಚ್ಚುತ್ತದೆ.

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ನಡೆಸಿದ ವೈಜ್ಞಾನಿಕ ಸಮೀಕ್ಷೆ ಪ್ರಕಾರ, 30-58 ವರ್ಷದ ಒಂದು ಸಾವಿರ ಜನರಲ್ಲಿ ಕೋಪಗೊಳ್ಳುವವರಲ್ಲಿ ಹೃದಯಾಘಾತ ಮೂರು ಪಟ್ಟು ಹೆಚ್ಚು ಎಂದು ತಿಳಿದುಬಂದಿದೆ! ಕೋಪಗೊಂಡಾಗ ಉತ್ಪತ್ತಿ ಆದ Catacholomineಗಳು ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕಿರೀಟಧಮನಿ (Coronary artery)ಗಳನ್ನು ಸಂಕುಚಿತಗೊಳಿಸುತ್ತವೆ. ಇದರಿಂದ ಹೃದಯಾಘಾತ, ಹೃದಯ ನಿಷ್ಕ್ರಿಯಗೊಳ್ಳುವ ಸಂಭವ ಹೆಚ್ಚುತ್ತದೆ. ಇದರಿಂದ ಹೃದಯದಿಂದ ಹೊರಹೊಮ್ಮುವ ರಕ್ತ ಕಡಿಮೆ ಆಗಿ ಪ್ರಾಣವಾಯು ಪೋಷಣೆ ಕಡಿಮೆ ಆಗಿ ವ್ಯಕ್ತಿ ನಿತ್ರಾಣನಾಗುತ್ತಾನೆ. ಹೀಗೆ ಹೃದಯದ ಮೇಲೆ ಆದ ದುಷ್ಪರಿಣಾಮ ಸರಿಯಾಗಲು 72 ಗಂಟೆಗಳು ಬೇಕು. ಯೋಗ, ಧ್ಯಾನ ಮಾಡಿ ಮನಸ್ಸನ್ನು ಸ್ಥಿಮಿತಕ್ಕೆ ತಂದರೆ ಹೃದಯ ಚೇತರಿಸಿಕೊಳ್ಳುತ್ತದೆ.

ಇನ್ನು, ವ್ಯಕ್ತಿ ಕೋಪಗೊಂಡಾಗ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿ ವಿಪರೀತ ಹೆಚ್ಚುತ್ತದೆ. ಅದಕ್ಕೆ ಉತ್ತಮ ಉದಾಹರಣೆ, ಪಾವ್​ಲಾವ್ ಎಂಬ ಹುಡುಗನ ಹೊಟ್ಟೆಗೆ ತೂತಾಗಿ ಹೊಟ್ಟೆಯಿಂದ ಎಲ್ಲ ಹೊರಬರುತ್ತಿತ್ತು. ಆ ಹುಡುಗನಿಗೆ ಕೋಪ, ಈರ್ಷ್ಯೆ ಉಂಟಾದಾಗ ಸುಮಾರು ಎರಡು ಲೀಟರಿನಷ್ಟು ಆಮ್ಲವು ಹೊರಸುರಿದು ಸುತ್ತಲಿನ ಚರ್ಮ ಸುಡುತ್ತಿತ್ತು. ಬಹುಶಃ ನಮ್ಮ ಪೂರ್ವಜರಿಗೆ ಇದು ತಿಳಿದಿತ್ತೋ ಏನೋ. ಅದಕ್ಕೆ ಇದನ್ನು ‘ಹೊಟ್ಟೆಕಿಚ್ಚು’ ಅಂತ ಕರೆದರು. ಆಮ್ಲವು ಕಿಚ್ಚಿನಂತೇ ಸುಡುತ್ತದೆ. ಇದರಿಂದ ಆಗುವ ಉರಿಯನ್ನು ‘ಹೊಟ್ಟೆ ಉರಿ’ ಎಂದರು! ಕನ್ನಡದ ಪದಗಳೂ ಎಷ್ಟು ವೈಜ್ಞಾನಿಕವಾಗಿವೆ ಎಂದು ಆಶ್ಚರ್ಯವಾಗುತ್ತದೆ. ಜಗತ್ತಿನಲ್ಲಿ ಎಲ್ಲ ಕಾಯಿಲೆಗಳಿಗೆ ಮದ್ದಿದೆ, ಆದರೆ ಹೊಟ್ಟೆಕಿಚ್ಚು ಅಥವಾ ಹೊಟ್ಟೆ ಉರಿಗೆ ಮದ್ದೇ ಇಲ್ಲ. ಅದಕ್ಕೆ ಮದ್ದು ನಮ್ಮ ಮನಸ್ಸನ್ನು ನಿಗ್ರಹಿಸಿ ಸ್ಥಿತಪ್ರಜ್ಞರಾಗುವುದು. ಕೋಪಿಷ್ಟರಿಗೆ ಬಿಪಿ ಹೆಚ್ಚು. ಆದರೆ ಬಿಪಿ ಇದ್ದವರು ಕೋಪಮಾಡಿಕೊಂಡಾಗ ಅದು ವಿಪರೀತ ಏರಿ ಮಿದುಳಿನಲ್ಲಿ ರಕ್ತಸ್ರಾವವಾಗಿ ಪಾರ್ಶ್ವವಾಯು ಆಗುತ್ತದೆ. ಹೀಗೆ ಲಕ್ವ ಹೊಡೆದಾಗ ಮಾತು ನಿಂತುಹೋಗುತ್ತದೆ, ಕೈಕಾಲು ಸ್ವಾಧೀನ ಕಳೆದುಕೊಳ್ಳುತ್ತವೆ. ಆದ್ದರಿಂದ ಕೋಪಗೊಂಡು ಹೆಂಡತಿಗೆ ಬೈಯುವವರು ಹೊಡೆಯುವವರು ನೆನಪಿಡಿ- ನಿಮ್ಮ ಕೋಪಕ್ಕೆ ನೀವೇ ಬಲಿಯಾಗುತ್ತೀರಿ. ವೈದ್ಯರು ಸಾಮಾನ್ಯವಾಗಿ ಶರೀರ ನಾಶಮಾಡುವ ಉಪು್ಪ, ಜಿಡ್ಡು, ಸಕ್ಕರೆ ಕಡಿಮೆ ಮಾಡಿ ಎಂದು ಹೇಳುತ್ತಾರೆ. ಆದರೆ ಅದರೊಂದಿಗೆ ಲಕ್ವ, ಬಿಪಿ, ಹೃದಯಾಘಾತ ಹೆಚ್ಚಿಸುವ ಸಿಟ್ಟು, ಸೊಕ್ಕು, ಸೇಡನ್ನು ಬಿಟ್ಟುಬಿಡಿ ಎಂದು ಪ್ರತಿಯೊಬ್ಬರಿಗೂ ಕಟ್ಟಪ್ಪಣೆ ಮಾಡಬೇಕು.

ತತ್ತ್ವಜ್ಞಾನ ಏನು ಹೇಳುತ್ತದೆ?: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವು ನರಕಕ್ಕೆ ಬಾಗಿಲುಗಳು ಎಂದು ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದರೆ, ಭಗವಾನ್ ಬುದ್ಧ ಹೇಳುತ್ತಾರೆ- ‘ಕೋಪ ಎಂಬುದು ಕೈಯಲ್ಲಿ ಕೆಂಡ ಹಿಡಿದು ಇನ್ನೊಬ್ಬರ ಮೇಲೆ ಎಸೆಯಲು ಹೋದಂತೆ. ಅದು ಮೊದಲು ನಿಮ್ಮ ಕೈಯನ್ನು ಸುಡುತ್ತದೆ’. 12ನೇ ಶತಮಾನದ ಶಿವಶರಣರು ಕೋಪದ ಬಗ್ಗೆ ಅದ್ಭುತವಾದ ವಚನಗಳನ್ನು ರಚಿಸಿದ್ದಾರೆ. ಸೊನ್ನಲಿಯ ಸಿದ್ಧರಾಮೇಶ್ವರರು ಹೇಳುತ್ತಾರೆ- ‘ಯೋಗಿಗೆ ಕೋಪವೇ ಮಾಯೆ, ರೋಗಿಗೆ ಅಪಥ್ಯವೇ ಮಾಯೆ, ಜ್ಞಾನಿಗೆ ಮಿಥ್ಯವೇ ಮಾಯೆ, ಅರಿದೆನೆಂದವರಿಗೆ ನಾನು ನೀನೆಂಬ ಮಾಯೆ ಕಪಿಲಸಿದ್ಧ ಮಲ್ಲಿಕಾರ್ಜುನ’. ಪರಮಾತ್ಮನನ್ನು ಅರಿತಿದ್ದೇವೆ ಎನ್ನುವವರಿಗೆ ನಾನು ನೀನು ಎಂಬ ಭೇದವಿರಬಾರದು. ಪರಮಾತ್ಮನ ಅಂಶವಾದ ಆತ್ಮ ಎಲ್ಲರಲ್ಲೂ ಇರುವುದರಿಂದ ನಾವು ಸಕಲ ಜೀವಾತ್ಮರಲ್ಲಿ ಪರಶಿವನನ್ನು ಕಾಣಬೇಕು ಎನ್ನುವುದೇ ಸಿದ್ಧರಾಮೇಶ್ವರರ ಸಂದೇಶ. ಸಿದ್ಧರಾಮೇಶ್ವರರ ಇನ್ನೊಂದು ವಚನ- ‘ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯಲಿ ಮುಳುಗಿದರೇನಾಗುವುದಯ್ಯಾ? ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು? ಕಳಂಕವ ಬಿಡದಾಯಿತ್ತಯ್ಯಾ. ಅದು ಕಾರಣ ಒಬ್ಬರ ಮನವ ನೋಯಿಸದವನೆ, ಒಬ್ಬರ ಘಾತವ ಮಾಡದವನೆ, ಪರಮ ಪಾವನ ನೋಡ ಕಪಿಲಸಿದ್ಧ ಮಲ್ಲಿಕಾರ್ಜುನ’.

ಇಂದು ಸಮಾಜದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಡಲು ಪ್ರೇರೇಪಿಸುವ ಸಿಟ್ಟು, ಸೊಕ್ಕು, ಸೇಡನ್ನು ಜನ ನಿಯಂತ್ರಿಸಲೇಬೇಕು. ಇದನ್ನು ವಿಶ್ವಗುರು ಬಸವಣ್ಣ ತಮ್ಮ ವಚನದಲ್ಲಿ- ‘ಕಾಮವೇಕೋ ಲಿಂಗಪ್ರೇಮಿಯೆನಿಸುವಂಗೆ? ಕ್ರೋಧವೇಕೋ ಶರಣವೇದ್ಯನೆನಿಸುವಂಗೆ? ಲೋಭವೇಕೋ ಭಕ್ತಿಭಾವ ಲಾಭವ ಬಯಸುವಂಗೆ? ಮೋಹವೇಕೋ ಪ್ರಸಾದವೇದ್ಯನೆನಿಸುವಂಗೆ? ಮದಮತ್ಸರವುಳ್ಳವರಿಗೆ ಹೃದಯಶುದ್ಧ ವೆಲ್ಲಿಯದೋ? ಹದುಳಿಗಾದರಲಿಪ್ಪ ನಮ್ಮ ಕೂಡಲಸಂಗಮ ದೇವ’ ಎಂದಿದ್ದಾರೆ. ಇಂದು ಅರಿಷಡ್ವರ್ಗಗಳು ಸಮಾಜಕ್ಕೆ ಮಾರಕವಾಗಿವೆ. ಶರಣೆ ಆಯ್ದಕ್ಕಿ ಲಕ್ಕಮ್ಮ ಹೇಳಿದಂತೆ- ‘ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೇ ಅಯ್ಯಾ? ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ…..’

ರೋಷ ಯಮದೂತರಿಗಲ್ಲ ಯಮನ ಸ್ವರೂಪವೆಂದು ಇಂದು ವಿಜ್ಞಾನ ತೋರಿಸಿದೆ. ಆದ್ದರಿಂದ ನಾವು ಸುಂದರ, ಸುಖಕರ, ಸಂತೃಪ್ತಿಯ ಜೀವನ ನಡೆಸಬೇಕೆಂದರೆ ಸಿಟ್ಟು, ಸೊಕ್ಕು, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಬಿಡಬೇಕು. ಇಂಥ ಕೆಟ್ಟದ್ದನ್ನು ತೋರಿಸುವ ಧಾರಾವಾಹಿಗಳನ್ನು ನೋಡುವುದನ್ನು ಬಿಡಬೇಕು. ಕೋಪದಿಂದ ಮಾನವೀಯತೆಯ ದಮನ, ಶಾಂತಿಯಿಂದ ವಿಶ್ವದ ವಿಕಾಸ. ಅಕ್ಕಮಹಾದೇವಿ ಹೇಳಿದಂತೆ- ‘ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ-ನಿಂದೆಗಳು ಬಂದಡೆ ಮನದೊಳು ಕೋಪ ತಾಳದೆ ಸಮಾಧಾನಿಯಾಗಿರಬೇಕು’. ಕೋಪವು ಪಾಪದ ನೆಲೆಗಟ್ಟು, ಮರೆಯದಿರಿ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *