ಸಿಕ್ಕಿಬಿದ್ದ ಜೇಬುಗಳ್ಳರು: ರಿಂಗ್​ರಸ್ತೆಯಲ್ಲಿ ಸಂಚರಿಸುವ ಬಿಎಂಟಿಸಿ ಬಸ್​ಗಳೇ ಟಾರ್ಗೆಟ್

ಬೆಂಗಳೂರು: ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಕರ ಪರ್ಸ್, ಮೊಬೈಲ್, ಚಿನ್ನಾಭರಣ ದೋಚುತ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ.

ಗೋರಿಪಾಳ್ಯದ ಸೈಯದ್ ಆಕ್ಮಲ್ (51), ಪಾದರಾಯನಪುರದ ಫೈಜಾನ್ (25) ಮತ್ತು ಅಸ್ಲಾಂ ಪಾಷಾ (46) ಬಂಧಿತರು. ಅಸ್ಲಾಂ ಪುತ್ರ ಅಫ್ಜಲ್ ಸೇರಿ ಹಲವರು ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ 6 ಲಕ್ಷ ರೂ. ಮೌಲ್ಯದ 22 ಮೊಬೈಲ್ ಮತ್ತು 113 ಗ್ರಾಂ ಒಡವೆ ವಶಕ್ಕೆ ಪಡೆದಿರುವುದಾಗಿ ವೈಟ್​ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಜೆ.ಜೆ. ನಗರದ ರೌಡಿ ಅಸ್ಲಾಂ ಪಾಷಾ, ತನ್ನ ಪುತ್ರ ಅಪ್ಜಲ್ ಮತ್ತು ತನ್ನ ಸಹಚರರ ಜತೆ ಗ್ಯಾಂಗ್ ಕಟ್ಟಿಕೊಂಡಿದ್ದ. ಹೊಸೂರು ರಸ್ತೆ, ಕೆ.ಆರ್.ಪುರ, ಮಾರತ್​ಹಳ್ಳಿ ಇನ್ನಿತರ ಕಡೆಗಳ ರಿಂಗ್ ರಸ್ತೆಗಳಲ್ಲಿ ಸಂಚರಿಸುವ ಬಿಎಂಟಿಸಿ ಬಸ್​ಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ದೂರ ಪ್ರಯಾಣ ಮಾಡುವ ಬಿಎಂಟಿಸಿ ಬಸ್​ಗಳಿಗೆ ಪ್ರಯಾಣಿಕರಂತೆ ಏರಿ ನೂಕುನುಗ್ಗಲು ಉಂಟು ಮಾಡಿ ಒಬ್ಬಾತ ಪರ್ಸ್, ಮೊಬೈಲ್ ಇನ್ನಿತರ ವಸ್ತುಗಳನ್ನು ಕದ್ದು ಮತ್ತೊಬ್ಬನಿಗೆ ಕೊಡುತ್ತಿದ್ದ. ಆತ ಇನ್ನೊಬ್ಬನಿಗೆ ಕೊಟ್ಟು ಬಸ್​ನಿಂದ ಇಳಿದು ಹೋಗುತ್ತಿದ್ದರು.