ಸಿಕ್ಕಿಂನಲ್ಲಿ ಗುಡ್ಡ ಕುಸಿದು ನಿಪ್ಪಾಣಿ ಯೋಧ ಹುತಾತ್ಮ

ನಿಪ್ಪಾಣಿ: ಸಿಕ್ಕಿಂ ರಾಜ್ಯದ ಗ್ಯಾಂಗ್‌ಟೊಕ್‌ನಲ್ಲಿ ಸೋಮವಾರ ಬೆಳಗ್ಗೆ ಗುಡ್ಡ ಕುಸಿದು ಸಂಭವಿಸಿದ ಅಪಘಾತದಲ್ಲಿ ನಿಪ್ಪಾಣಿ ತಾಲೂಕು ಆಡಿ ಗ್ರಾಮದ ನಿವಾಸಿಯಾಗಿದ್ದ ಯೋಧ ರೋಹಿತ ಸುನೀಲ ದೇವರ್ಡೆ (25) ಹುತಾತ್ಮರಾಗಿದ್ದಾರೆ.

ಸಿಕ್ಕಿಂನಲ್ಲಿ ಕರ್ತವ್ಯನಿರತನಾಗಿದ್ದಾಗ ಅವರು ಹುತಾತ್ಮರಾಗಿದ್ದಾರೆ ಎಂದು ಸೇನೆಯಿಂದ ಸಂದೇಶ ಬಂದಿದ್ದು, ಯೋಧನ ಪಾರ್ಥಿವ ಶರೀರ ಬರುವ ಕುರಿತು ಇನ್ನೂ ನಿಖರವಾದ ಮಾಹಿತಿಯಿಲ್ಲ ಎಂದು ತಹಸೀಲ್ದಾರ ಮಹಾದೇವ ಬಾಣಸಿ ತಿಳಿಸಿದ್ದಾರೆ. ಯೋಧನ ತವರು ನೆಲ ಆಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಮಹಾರಾಷ್ಟ್ರದ ಇಚಲಕರಂಜಿ ಮೂಲದ ರೋಹಿತ ತನ್ನ ತಾಯಿ ಮತ್ತು ಸಹೋದರರೊಂದಿಗೆ ಆಡಿ ಗ್ರಾಮದಲ್ಲಿ ತನ್ನ ತಾಯಿಯ ಸಹೋದರನ ಮನೆಯಲ್ಲಿ ನೆಲೆಸಿದ್ದರು. ರೋಹಿತ ಒಂದು ವರ್ಷನಿದ್ದಾಗಲೇ ಅವರ ತಂದೆ ನಿಧನರಾದರು. ಅಂದಿನಿಂದ ಅವರ ತಾಯಿ ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಗ್ರಾಮದ ಹಿರಿಯ ಮಲಗೊಂಡಾ ಪಾಟೀಲ ತಿಳಿಸಿದರು.

7 ವರ್ಷಗಳಿಂದ ಸೈನಿಕರಾಗಿ ದೇಶ ಸೇವೆಯಲ್ಲಿದ್ದರು. ಬೆಂಗಳೂರಿನ ಎಎಸ್‌ಸಿ 517 ಬಟಾಲಿಯನ್‌ನಲ್ಲಿ ತರಬೇತಿ ಪಡೆದ ಅವರು ಕೆಲ ದಿನಗಳ ಹಿಂದೆ ಸಿಕ್ಕಿಂಗೆ ವರ್ಗಾವಣೆಗೊಂಡಿದ್ದರು. ರಜೆ ಪಡೆದು ಜ.9ರಂದು ಗ್ರಾಮಕ್ಕೆ ಬರಲಿದ್ದೇನೆ ಎಂದು ತಿಳಿಸಿದ್ದ ಅವರು, ಏಕಾಏಕಿ ತಮ್ಮ ರಜೆಯನ್ನು ಮುಂದೂಡಿ ಕೆಲ ದಿನಗಳಲ್ಲಿ ಬರುತ್ತೇನೆ ಎಂದು ತಿಳಿಸಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದರು. ರೋಹಿತ ಅವರ ಹಿರಿಯ ಸಹೋದರ ಎಂಜಿನೀಯರ್ ಆಗಿದ್ದು, ಹೈದರಾಬಾದ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.