ವಿಜಯವಾಣಿ ಸುದ್ದಿಜಾಲ ಕಲಬುರಗಿ
ದೇಶದ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ 11ರಂದು ನಗರದಲ್ಲಿ ಬೃಹತ್ ರಾಲಿ ಮೂಲಕ ಜನಜಾಗೃತಿ ಮೂಡಿಸುವುದಾಗಿ ಕಲಬುರಗಿ ನಾಗರಿಕ ಸಮಿತಿ ಪ್ರಮುಖರಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಜನರ ಒಳಿತಿಗಾಗಿ ಜಾರಿಯಲ್ಲಿದ್ದ ಕಾಯ್ದೆಯಲ್ಲಿ ಕೆಲವು ಸೆಕ್ಷನ್ಗಳನ್ನು ಮಾತ್ರ ತಿದ್ದುಪಡಿ ಮಾಡಿದ್ದಾರೆ. ಅದರ ಸಾಧಕ-ಬಾಧಕ ಅಧ್ಯಯನ ಮಾಡಿದ್ದೇನೆ. ಮುಸ್ಲಿಂ ಸೇರಿ ದೇಶವಾಸಿಗಳಿಗೆ ಸಮಸ್ಯೆಯಾಗಲ್ಲ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಬೆಳಗ್ಗೆ 10.30ಕ್ಕೆ ನೆಹರು ಗಂಜ್ನಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಸಿಎಎ ಬೆಂಬಲಿಸಿ ಮೆರವಣಿಗೆ ನಡೆಸಲಾಗುವುದು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕಾಯ್ದೆ ಮಾದರಿಯಾಗಿದ್ದು, ಬೆಂಬಲಿಸುತ್ತೇವೆ. ಜಾರಿಗೊಳಿಸುವಂತೆ ಕೋರಿ ಡಿಸಿ ಮೂಲಕ ಪ್ರಧಾನಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದರು.
ಸಿಎಎ ಬಗ್ಗೆ ಕಾಂಗ್ರೆಸಿಗರು ಸೇರಿ ಕೆಲವರು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲಿಮರಿಗೆ ಕಾಯ್ದೆಯಿಂದ ಯಾವುದೇ ತೊಂದರೆ ಆಗಲ್ಲ. ಸುಳ್ಳು ಹೇಳುವವರ ಮಾತು ನಂಬಬೇಡಿ. ನೀವು ಸಹ ಬೆಂಬಲಿಸಿ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಪಾಕಿಸ್ತಾನ, ಬಾಂಗ್ಲಾದೇಶದಲ್ಲಿರುವ ಹಿಂದುಗಳ ಮೇಲೆ ಅಲ್ಲಿನವರು ದಾಳಿ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿರುವ ಮುಸ್ಲಿಂ ಇತರ ಅಲ್ಪಸಂಖ್ಯಾತರಿಗೆ ಸರ್ಕಾರ ಎಲ್ಲ ಸವಲತ್ತು ಕಲ್ಪಿಸಿದೆ. ಅವರೊಂದಿಗೆ ಸರ್ಕಾರವೇ ಇದೆ ಎಂಬುದನ್ನು ಅರಿತುಕೊಂಡು ಅಂದಿನ ರಾಲಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಯುವ ನಾಯಕ ಚಂದ್ರಕಾಂತ (ಚಂದು) ಪಾಟೀಲ್, ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ, ನಾಗರಿಕ ಸಮಿತಿ ಪ್ರಮುಖರಾದ ದಿವ್ಯಾ ಹಾಗರಗಿ, ಎಂ.ಎಸ್. ಪಾಟೀಲ್ ನರಿಬೋಳ, ಸಿದ್ರಾಮಯ್ಯ ಹಿರೇಮಠ, ಮಲ್ಲಿಕಾರ್ಜುನ, ದತ್ತು ಫಡ್ನವಿಸ್, ಸಂತೋಷ ಲಂಗರ ಇತರರಿದ್ದರು.
ತೊಗರಿಗೆ ಪ್ರೋತ್ಸಾಹ ಬೆಲೆ ಕಡಿಮೆ ನಿಗದಿ ಮಾಡಿದ್ದು ನೋವು ತರಿಸಿದೆ. ಅದನ್ನು ಹೆಚ್ಚಿಸುವಂತೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬುಧವಾರ ಭೇಟಿ ಮಾಡಿ ಒತ್ತಾಯಿಸುತ್ತೇನೆ. ಸಚಿವ ಸಂಪುಟ ವಿಸ್ತರಣೆ ಮತ್ತು ಯಾರಿಗೆ ಅವಕಾಶ ನೀಡಬೇಕು ಎಂಬುದನ್ನು ಸಿಎಂ ನಿರ್ಧರಿಸುತ್ತಾರೆ. ಕೆಕೆಆರ್ಡಿಬಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿಸುವ ನಿರ್ಧಾರ ಸೂಕ್ತವಾಗಿದೆ.
| ಮಾಲೀಕಯ್ಯ ಗುತ್ತೇದಾರ್ ಮಾಜಿ ಸಚಿವ
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಎಲ್ಲರಿಗೂ ಅವಕಾಶ ನೀಡಲಾಗಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಆದರೆ ಕಾಂಗ್ರೆಸ್ ಇತರರು ತಪ್ಪು ಮಾಹಿತಿ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಂತಹವರ ಮಾತಿಗೆ ಜನರು ಮರುಳಾಗಬಾರದು. ದೇಶದ ಹಿತದೃಷ್ಟಿಯಿಂದ ಎಲ್ಲರೂ ಬೆಂಬಲ ನೀಡಿ ಪ್ರಗತಿಗೆ ಕೈಜೋಡಿಸಬೇಕು.
| ಚಂದ್ರಕಾಂತ(ಚಂದು) ಪಾಟೀಲ್ ಯುವ ನಾಯಕ