ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಹೊರಿಸಿ ಅಧಿಕಾರದಿಂದ ಇಳಿಸುವ ಹತಾಶ ಪ್ರಯತ್ನ ನಡೆದಿದೆ. ಇದಕ್ಕೆ ಜನರು ಬೆಂಬಲ ಕೊಡಬಾರದು ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಎಚ್.ಡಿ.ಕೋಟೆಯಲ್ಲಿ ಮಂಗಳವಾರ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸೂಯೆ, ದ್ವೇಷದಿಂದ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸುತ್ತಿವೆ. ಕಾಂಗ್ರೆಸ್ ಬಲಿಷ್ಠವಾಗುತ್ತಿದೆ ಎಂಬ ಭಯ ಅವುಗಳಿಗೆ ಕಾಡುತ್ತಿದೆ. ಅದಕ್ಕೆ ಹುಸಿ ಟೀಕೆ ಮಾಡುತ್ತಿದ್ದು, ತಪ್ಪು ಮಾಡಿಲ್ಲ. ತನಿಖೆಗೂ ಭಯ ಪಡಲ್ಲ. ಆದರೆ ಸಿಬಿಐ, ಇಡಿ, ಐಟಿ ಸಂಸ್ಥೆಗಳೆಲ್ಲ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿವೆ ಎಂದು ದೂರಿದರು.
ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ಮತ್ತು ಇಂಡಿಯಾ ಕೂಟದ ಪ್ರತಿಪಕ್ಷಗಳನ್ನು ತುಳಿಯುವ ಯತ್ನಗಳು ಪ್ರಜಾಪ್ರಭುತ್ವಕ್ಕೆ ಮಾರಕ. ಇದಕ್ಕೆ ಜನರು ಬೆಂಬಲ ಸೂಚಿಸಬಾರದು.
ಬಿಜೆಪಿ ಬಡವರ ಪರವಲ್ಲ. ಅದು ಶ್ರೀಮಂತರ ಪಕ್ಷ. ಕಾಂಗ್ರೆಸ್ ಕೊಟ್ಟಂತಹ ಒಂದೇ ಒಂದು ಸಣ್ಣ ಕಾರ್ಯಕ್ರಮವನ್ನೂ ನೀಡಿಲ್ಲ ಎಂದು ಹರಿಹಾಯ್ದರು.
ತಳಸಮುದಾಯದ ಮಹನೀಯರ ಜಯಂತಿ ಆಚರಿಸಿ ಸ್ಫೂರ್ತಿ ಪಡೆದುಕೊಳ್ಳಬೇಕು. ಮೇಲ್ವರ್ಗದವರು ಮಾತ್ರ ಪ್ರತಿಭಾವಂತರು, ಕೆಳಸಮುದಾಯದವರು ದಡ್ಡರು ಎಂಬ ಸುಳ್ಳು ಚಿತ್ರಣವನ್ನು ಬಿತ್ತಲಾಗಿದೆ. ಇದನ್ನು ಮುರಿಯಬೇಕು ಎಂದು ಹೇಳಿದರು.