ಮೈಸೂರು: ಸಿಎಂ ಸಿದ್ದರಾಮಯ್ಯ ಬಂಗಾರದ ಮನುಷ್ಯ. ಹೀಗಾಗಿ, ಅವರು ಟೀಕೆಗಳಿಗೆ ಹೆದರುವ ಅಗತ್ಯವಿಲ್ಲ. ಶ್ರೀರಾಮನಂತಿರುವ ಅವರ ಪರ ನಾನು ಹನುಮಂತ ರೀತಿಯಲ್ಲಿ ಕೆಲಸ ಮಾಡುವೆ ಎಂದು ಅರಣ್ಯ ವಸತಿ ಹಾಗೂ ವಿಹಾರಧಾಮಗಳ ನಿಗಮದ ಅಧ್ಯಕ್ಷ, ಶಾಸಕ ಅನಿಲ್‌ಚಿಕ್ಕಮಾದು ಹೇಳಿದರು.
ಎಚ್.ಡಿ.ಕೋಟೆಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಎಂ ಅಧಿಕಾರ ಅವಧಿಯನ್ನು ಪೂರ್ಣಗೊಳಿಸುವ ಜತೆಗೆ, ಮುಂದಿನ ವಿಧಾನಸಭೆ ಚುನಾವಣೆಯೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿ. ಮುಂದಿನ 5 ವರ್ಷವೂ ಅವರೇ ಸಿಎಂ ಆಗಲಿ ಎಂದರು.
ಮುಂದಿನ ಚುನಾವಣೆ ವೇಳೆಗೆ ಎಚ್.ಡಿ.ಕೋಟೆ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾದರೂ ನಾನು ಬೇರೆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆ ಇಲ್ಲ. ಇಲ್ಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲು ವಾಲ್ಮೀಕಿ ಮಹರ್ಷಿ ಕಾರಣ. ಅವರು ಇಲ್ಲದಿದ್ದರೆ ಮಂದಿರ ಸ್ಥಾಪನೆಯಾಗುತ್ತಿರಲಿಲ್ಲ. ಶ್ರೀರಾಮನನ್ನು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಎಚ್.ಡಿ.ಕೋಟೆ ಭಾಗದಲ್ಲಿರುವ ಪರಿವಾರ, ತಳವಾರವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಸಿದ್ದರಾಮಯ್ಯ ಅವರೇ ಕಾರಣ. 2014ರಲ್ಲೇ ಅವರೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಹಿಂದೆಯೂ ಎಚ್.ಡಿ.ಕೋಟೆಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಈಗ ವಾಲ್ಮೀಕಿ ಭವನಕ್ಕೆ 2 ಕೋಟಿ ರೂ. ಹಾಗೂ ಮೈಸೂರು- ಮಾನಂದವಾಡಿ ಹೆದ್ದಾರಿ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಕೋರಿದರು.
ತಾರಕ ಜಲಾಶಯದ 30 ಕಿ.ಮೀ. ನಾಲೆಗಳ ಅಭಿವೃದ್ಧಿಗೆ 50 ಕೋಟಿ ರೂ., ಅರಣ್ಯ ಹಕ್ಕು ಕಾಯ್ದೆ ಜಾರಿ ಮಾಡಿ ಕ್ಷೇತ್ರದಲ್ಲಿರುವ ಬುಡಕಟ್ಟು ಜನರಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸಿಎಂ ಬಳಿ ಕೋರಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಸುನೀಲ್ ಬೋಸ್, ಶಾಸಕರಾದ ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್, ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಮಾಜಿ ಶಾಸಕರಾದ ಎಂ.ಶಿವಣ್ಣ, ಕಳಲೆ ಕೇಶವಮೂರ್ತಿ, ನಿಗಮ-ಮಂಡಳಿಯ ಮಾಜಿ ಅಧ್ಯಕ್ಷರಾದ ಜಿ.ವಿ.ಸೀತಾರಾಮ್, ಎಸ್.ಸಿ.ಬಸವರಾಜು ಇನ್ನಿತರರಿದ್ದರು.