ಸಿಎಂ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ

ಬೀದರ್: ಜೂ. 29 ರಂದು ಬಸವಕಲ್ಯಾಣ ತಾಲೂಕಿನ ಉಜಳಂಬನಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಸಂಬಂಧ ಜಿಲ್ಲಾಧಿಕಾರಿ ಡಾ. ಎಚ್.ಆರ್.ಮಹಾದೇವ ಅವರು ಡಿಸಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಸೋಮವಾರ ನಡೆಸಿದರು.
ಉಜಳಂಬನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಮುಖ್ಯಮಂತ್ರಿ ಸಾರ್ವಜನಿಕರಿಂದ ಅಹವಾಲು ಆಲಿಸಲಿದ್ದಾರೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಎಲ್ಲ ತಾಲೂಕು ತಹಸೀಲ್ದಾರರು ಮತ್ತು ಜಿಲ್ಲಾಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಆಯಾ ತಾಲೂಕುಗಳ ಎಲ್ಲ ಹಳ್ಳಿಗಳಲ್ಲಿ ಡಂಗೂರ ಹೊಡೆಸಬೇಕು. ಜನರ ಸಮಸ್ಯೆ ಕೇಳಿ ಅವರಿಂದ ಅರ್ಜಿ ಸ್ವೀಕರಿಸಬೇಕು. ಅದಕ್ಕಾಗಿ ಒಂದು ಪ್ರತ್ಯೇಕ ವಹಿಯನ್ನಿಟ್ಟು ಬೇಡಿಕೆ ಈಡೇರಿಕೆಗೆ ಒತ್ತು ಕೊಡಬೇಕು ಎಂದು ನಿರ್ದೇಶನ ನೀಡಿದರು.
ಸಿಎಂ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಉಜಳಂಬ ಗ್ರಾಮಸ್ಥರ ಕೆಲ ಬೇಡಿಕೆಗಳಿಗೆ ಕೂಡಲೇ ಪರಿಹಾರ ಕಲ್ಪಿಸಬೇಕಾಗಿದೆ. ಗ್ರಾಮದಲ್ಲಿ ಪ್ರತಿದಿನ ನಾಲ್ಕೈದು ಬಾರಿ ಬಸ್ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಗ್ರಾಮಕ್ಕೆ ಹೊರಡುವ ರಸ್ತೆಗಳು ಅಚ್ಚುಕಟ್ಟಾಗಿ ಸಿದ್ಧಗೊಳ್ಳಬೇಕು. ಗ್ರಾಮದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಜಿಪಂ ಸಿಇಒ ಮಹಾಂತೇಶ ಬೀಳಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

ಗ್ರಾಮಸ್ಥರಿಂದ ನಾನಾ ಬೇಡಿಕೆ : ಉಜಳಂಬನಲ್ಲಿ ವಸತಿ ಶಾಲೆ, ರೈತ ಸಂಪರ್ಕ ಕೇಂದ್ರ ತೆರೆಯಬೇಕು. ಪೊಲೀಸ್ ಠಾಣೆ, ಬ್ಯಾಂಕ್ ಶಾಖೆ ಆರಂಭಿಸಬೇಕು. ಗ್ರಾಮದ ಹಳೆಯ ಕೆರೆಯನ್ನು ಪುನಶ್ಚೇತನಗೊಳಿಸಬೇಕು. ಹೊಸ ಕೆರೆ ಸಹ ನಿರ್ಮಿಸಬೇಕು. ಆರೋಗ್ಯ ಕೇಂದ್ರದಲ್ಲಿನ ಎಲ್ಲ ಹುದ್ದೆ ಭರ್ತಿ ಮಾಡಬೇಕು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಉಜಳಂಬ ಗ್ರಾಮಸ್ಥರು ಬೇಡಿಕೆ ಮಂಡಿಸಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು. ಆಯಾ ಬೇಡಿಕೆಗಳ ಬಗ್ಗೆ ಮೊದಲು ಸರಿಯಾಗಿ ಅಧ್ಯಯನ ಮಾಡಬೇಕು. ನಂತರ ಅಗತ್ಯ ಸೌಕರ್ಯ ಕಲ್ಪಿಸುವ ಸಂಬಂಧ ಕೂಡಲೇ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಜಿಪಂ ಸಿಇಒ ಮಹಾಂತೇಶ ಬೀಳಗಿ ಹೇಳಿದರು.

Leave a Reply

Your email address will not be published. Required fields are marked *