ಸಿಎಂ ಕುರ್ಚಿ ಮೇಲೆ ಹಲವರ ಕಣ್ಣು

ಶಿವಮೊಗ್ಗ: ಸಿಎಂ ಹುದ್ದೆ ಮೇಲೆ ಮೈತ್ರಿಕೂಟದ ಹಲವು ಮುಖಂಡರು ಕಣ್ಣಿಟ್ಟಿದ್ದಾರೆ. ಆದರೆ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣವಾಗಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ಮೈತ್ರಿ ಸರ್ಕಾರದ ಆಯಸ್ಸು ಎಷ್ಟು ದಿನವೋ ಗೊತ್ತಿಲ್ಲ. ಹಲವು ಮುಖಂಡರು ಸಿಎಂ ಆಗಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುವಂಥ ನಡೆ ಅನುಸರಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಹೆಸರು ತೇಲಿಬಿಟ್ಟರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಚ್.ಡಿ.ರೇವಣ್ಣ ಹೆಸರನ್ನು ತೇಲಿಬಿಟ್ಟಿದ್ದಾರೆ. ಇದು ಸರ್ಕಾರ ಉರುಳುವ, ಬದಲಾವಣೆಯ ಮುನ್ಸೂಚನೆ ಎಂದರು.

ಘಟಬಂಧನ್ ಛಿದ್ರ:ಎಲ್ಲ ಸಮೀಕ್ಷೆಗಳಲ್ಲೂ ಎನ್​ಡಿಎ ಬಹುಮತ ಪಡೆಯುವುದು ಸ್ಪಷ್ಟವಾಗಿದೆ. ಸಮೀಕ್ಷೆ ಹಾಗೂ ನಿರೀಕ್ಷೆಯಂತೆ ರಾಜ್ಯದಲ್ಲಿ ಬಿಜೆಪಿ20-25 ಸ್ಥಾನ ಗೆಲ್ಲುವುದು ನಿಶ್ಚಿತ. ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಸಿಎಂ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಮಹಾಘಟಬಂಧನ್ ಒಂದೊಂದು ಹೆಜ್ಜೆಗೂ ಛಿದ್ರ ಆಗುತ್ತ ಹೋಯಿತು. ಇನ್ನೂ ಫಲಿತಾಂಶ ಬಂದ ನಂತರ ಮಹಾಘಟಬಂಧನ್ ಛಿದ್ರಗೊಂಡು ಯಾವ್ಯಾವ ಪಕ್ಷ ಎಲ್ಲೆಲ್ಲಿದೆ ಎಂದು ಹುಡುಕಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಸಿಎಂಗೆ ಭಯ: ಕುಮಾರಸ್ವಾಮಿ ಅವರಿಗೆ ಸೋತು ಗೊತ್ತಿಲ್ಲದೇ ಇರಬಹುದು. ಬೇರೆಯವರೊಂದಿಗೆ ಸರ್ಕಾರ ರಚಿಸಿ ಗೊತ್ತಿದೆ. ಇದೀಗ ಮಗನ ಸೋಲಿನ ಭೀತಿಯೋ, ಸರ್ಕಾರ ಉರುಳುವ ಭಯವೋ ಗೊತ್ತಾಗುತ್ತಿಲ್ಲ. ಬಿಜೆಪಿಗೆ ಗೆದ್ದು ಗೊತ್ತಿರಲಿಲ್ಲ. ಆದರೆ ಸೋಲಿನ ಪಾಠಗಳಿಂದ ಎಚ್ಚೆತ್ತುಕೊಂಡು ಸಂಘಟನೆ ಮಾಡುತ್ತಿರುವ ನಮಗೆ ಮುಂದೆ ಎಲ್ಲ ಚುನಾವಣೆಗಳಲ್ಲೂ ಗೆಲುವು ಎಂದರು.

ಆಪರೇಷನ್ ಹಸ್ತ ಸಾಧ್ಯವಿಲ್ಲ. ಬಿಜೆಪಿಯ 104 ಶಾಸಕರು ಹುಲಿಗಳಿದ್ದಂತೆ. ಹಿಡಿಯಲು ಬಂದರೆ ಅವರಿಗೆ ಅಪಾಯ. ಬಿಜೆಪಿ ಶಾಸಕರ ಸೆಳೆಯಲು ಸಾಧ್ಯವಿಲ್ಲ. ಫಲಿತಾಂಶದ ಬಳಿಕ ಬೇರೆ ಪಕ್ಷದ ಶಾಸಕರೇ ಬಿಜೆಪಿಗೆ ಬರಲಿದ್ದಾರೆ ಎಂದು ತಿಳಿಸಿದರು.

ಅಸ್ತಿತ್ವ ಇಲ್ಲದ ರಾಜ್ಯಗಳಲ್ಲಿ ಖಾತೆ:ಇಲ್ಲದ ರಾಜ್ಯಗಳಲ್ಲಿಯೂ ಬಿಜೆಪಿ/ಎನ್​ಡಿಎ ಖಾತೆ ತೆರೆಯಲಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.ಪಶ್ಚಿಮ ಬಂಗಾಳದಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ/ಎನ್​ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ ಜನ ಹೆಚ್ಚಿರುವ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *