ಸಿಂಹಸ್ವರದ ಮೃದುಹೃದಯಿ

| ರಮೇಶ ದೊಡ್ಡಪುರ

‘ನಾನು ಆರೆಸ್ಸೆಸ್ಸನ್ನು ಸಂಪೂರ್ಣ ನಾಶಮಾಡುತ್ತೇನೆ. ದೇಶದಲ್ಲಿ ಅದಕ್ಕೆ ಒಂದಿಂಚು ಜಾಗವೂ ದೊರಕದಂತೆ ಮಾಡಲು ನನ್ನೆಲ್ಲ ಶಕ್ತಿ ಬಳಸುತ್ತೇನೆ. ಅಗತ್ಯವೆನಿಸಿದರೆ ಹೊರಗಿನ ಬೆಂಬಲವನ್ನೂ ಪಡೆಯುತ್ತೇನೆ’ ಎಂದು ದೇಶದ ಮೊದಲ ಪ್ರಧಾನಿ ನೆಹರು 1948ರಲ್ಲಿ ಬೆಂಗಳೂರಿನ ಈಗಿನ ರೇಸ್ಕೋರ್ಸ್ ಸ್ಥಳದಲ್ಲಿದ್ದ ವಿಶಾಲ ಮೈದಾನದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅಲ್ಲಿಂದ ಕೂಗಳತೆ ದೂರದಲ್ಲಿದ್ದ ಇಂದಿನ ಫ್ರೀಡಂ ಪಾರ್ಕ್ ಅಂದರೆ ಆಗಿನ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಗಳು ಸ್ಪೀಕರ್ ಮೂಲಕ ತೇಲಿಬರುತ್ತಿದ್ದ ಭಾಷಣವನ್ನು ಕಿವಿಗೊಟ್ಟು ಕೇಳುತ್ತಿದ್ದರು. ಗಾಂಧೀಜಿ ಹತ್ಯೆ ಆರೋಪದಲ್ಲಿ ಆರೆಸ್ಸೆಸ್ಸನ್ನು ನಿಷೇಧಿಸಿದ್ದರಿಂದ ಬಂಧಿತರಾಗಿದ್ದ

ಆ ಕಾರಾಗೃಹವಾಸಿಗಳ ಪೈಕಿ ಇದ್ದವರು ಆಗಿನ್ನೂ 24ರ ಹರೆಯದ ಕೃ.ಸೂರ್ಯನಾರಾಯಣ ರಾವ್.

ಗಣಿತದಲ್ಲಿ ಬಿಎಸ್ಸಿ ಆನರ್ಸ್ ಮುಗಿಸಿದ ಸೂರ್ಯನಾರಾಯಣ ರಾವ್, 1946ರಲ್ಲಿ ಆರೆಸ್ಸೆಸ್ನ ಪೂರ್ಣಕಾಲಿಕ ಪ್ರಚಾರಕರಾಗಿ ಹೊರಟಿದ್ದರು. ದೇಶದ ಮೊದಲ ಸರ್ಕಾರವೇ ಈ ಪಾಟಿ ಉರಿದುಬೀಳುತ್ತಿದ್ದ ಸಮಯದಿಂದ ಸಂಘಟನೆಯನ್ನು ಕಟ್ಟಿ ಬೆಳೆಸಿದ ಸಾವಿರಾರು ನಿಷ್ಠಾವಂತ ಕಾರ್ಯಕರ್ತರಲ್ಲೊಬ್ಬರು, ‘ಸೂರು’ಜಿ.

ಬೆಂಗಳೂರಿನ ಶ್ರೀರಾಮಪುರದಲ್ಲಿ ಕೃಷ್ಣಪ್ಪ ಮತ್ತು ಸುಂದರಮ್ಮ ದಂಪತಿಯ ಮೊದಲ ಪುತ್ರನಾಗಿ 1924ರ ಆಗಸ್ಟ್ 20ರಂದು ಸೂರ್ಯನಾರಾಯಣ ರಾವ್ ಜನಿಸಿದರು. ಸೂರು ಅವರ ಸಹೋದರ ಹಾಗೂ ಆರೆಸ್ಸೆಸ್ ಹಿರಿಯ ಕಾರ್ಯಕರ್ತ ಕೃ. ನರಹರಿಯವರು ಹೇಳುವಂತೆ, ‘ಸಮರ್ಥ ರಾಮದಾಸರಿಂದ ಸ್ಪೂರ್ತಿ ಪಡೆದಿದ್ದ ಬ್ರಹ್ಮಚೈತನ್ಯರ ಪರಂಪರೆ ಮನೆಯಲ್ಲಿ ಹಾಸುಹೊಕ್ಕಾಗಿತ್ತು. ಮರಾಠಿಯಲ್ಲಿದ್ದ ಅಭಂಗಗಳನ್ನು ಸಾಧು ನಂಜುಂಡಸ್ವಾಮಿಯವರು ಕನ್ನಡಕ್ಕೆ ಅನುವಾದಿಸುವಾಗ ಜತೆಯಲ್ಲಿ ಸೂರು ಅವರನ್ನು ಕೂರಿಸಿಕೊಳ್ಳುತ್ತಿದ್ದರು. ಇದೆಲ್ಲವೂ ಭವಿಷ್ಯದಲ್ಲಿ ಸೂರು ಅವರ ಜೀವನವನ್ನು ಪ್ರಭಾವಿಸಿದವು’. 1942ರಲ್ಲಿ ಆರೆಸ್ಸೆಸ್ ಸಂಪರ್ಕಕ್ಕೆ ಬಂದಾಗ, ಯಾದವರಾವ್ ಜೋಷಿ, ಸರಸಂಘಚಾಲಕ ಗುರೂಜಿ ಗೋಳ್ವಲ್ಕರ್ರಿಂದ ಪ್ರಭಾವಿತರಾದರು. ಗುರೂಜಿ ಬೆಂಗಳೂರಿಗೆ ಬಂದಾಗ ಅನೇಕ ಬಾರಿ ಇವರ ನಿವಾಸದಲ್ಲೆ ವಾಸ್ತವ್ಯ ಹೂಡುತ್ತಿದ್ದರು.

ಬ್ರಿಟಿಷರ ಕಾಲದಲ್ಲಿ ಜೈಲಿನ ಬಂದಿಗಳಿಗೆ ನೀಡಲಾಗುತ್ತಿದ್ದ ‘ಧೂಮಪಾನ ಭತ್ಯೆ’ ಸ್ವಾತಂತ್ರ್ಯಾನಂತರದಲ್ಲೂ ಮುಂದುವರಿದೇ ಇತ್ತು. ಗಾಂಧೀಜಿ ಹತ್ಯೆ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದ ಸೂರು ಅವರಿಗೂ ಈ ಭತ್ಯೆ ದೊರೆಯುತ್ತಿತ್ತು. ಜೈಲರ್ಗೆ ಹೇಳಿ ಅಷ್ಟೂ ಹಣದಲ್ಲಿ ಸ್ವಾಮಿ ವಿವೇಕಾನಂದರ ಕುರಿತಾದ ಕೃತಿಯ ಸಂಪೂರ್ಣ ಸಂಪುಟ ಖರೀದಿಸಿದರು. ಒಟ್ಟು 18 ತಿಂಗಳ ಜೈಲುವಾಸದಲ್ಲಿ ಅವರನ್ನು ವಿವೇಕಾನಂದರು ಅದೆಷ್ಟು ಪ್ರಭಾವಿಸಿದರು ಎಂದರೆ, ಅಲ್ಲಿಂದೀಚೆಗಿನ 70 ವರ್ಷಗಳಲ್ಲೂ ಆರೆಸ್ಸೆಸ್ ಸೇರಿದಂತೆ ಎಲ್ಲಿಯೇ ಭಾಷಣ ಮಾಡಿದರೂ ವಿವೇಕಾನಂದರ ಒಂದು ವಿಚಾರ, ಘಟನೆ, ಹೇಳಿಕೆ ಇಲ್ಲದೇ ಸೂರು ಅವರು ಮಾತು ಮುಗಿಸುತ್ತಿರಲಿಲ್ಲ ಎನ್ನುತ್ತಾರೆ ಸೂರು ಅವರ ಜತೆಗೆ ಹಲವಾರು ವರ್ಷ ಒಡನಾಟ ಹೊಂದಿದ್ದ ಹಿರಿಯ ಪ್ರಚಾರಕ ಚಂದ್ರಶೇಖರ ಭಂಡಾರಿ.

ವಿವೇಕಾನಂದರ ಹಾಗೂ ಅವರ ವಿಚಾರಧಾರೆಯ ಕುರಿತು ಅಧಿಕಾರಯುತವಾಗಿ ಮಾತನಾಡುವವರು ಎನ್ನಬಹುದಾದ ಕೆಲವೇ ಜನರ ಪೈಕಿ ಸೂರು ಒಬ್ಬರಾದರು. ಅಧ್ಯಾತ್ಮ ಹಾಗೂ ದೇಶಭಕ್ತಿಯ ಸಂಗಮವಾದ ಸಮರ್ಥ ರಾಮದಾಸರ ವಾಣಿಯಂತೆಯೇ ವಿವೇಕಾನಂದರನ್ನೂ ಅನ್ವಯಿಸಿ ಮಾತನಾಡುತ್ತಿದ್ದ ಸೂರು ಅವರ ಸಿಂಹದಂತಹ ಕಂಚಿನ ಕಂಠದಿಂದ ಭಾಷಣ ಕೇಳಿದರೆ ವಿವೇಕಾನಂದರೇ ಹೇಳುತ್ತಿರುವಂತಿತ್ತು ಎನ್ನುತ್ತಾರೆ ಚಂದ್ರಶೇಖರ ಭಂಡಾರಿ.

1963ರಲ್ಲಿ ಉಡುಪಿಯಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಪೇಜಾವರ ಸ್ವಾಮೀಜಿ, ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಆಚಾರ್ಯ ಬುದ್ಧರಖ್ಖಿತ ಥೇರಾ ಸೇರಿದಂತೆ 500 ಸಾಧು-ಸಂತರನ್ನು ಒಂದೆಡೆ ಸೇರಿಸಿ ‘ಹಿಂದುಗಳೆಲ್ಲ ಬಾಂಧವರು. ಹಿಂದು ಧರ್ಮಗ್ರಂಥಗಳಲ್ಲಿ ಅಸ್ಪೃಶ್ಯತೆಗೆ ಅವಕಾಶವಿಲ್ಲ’ ಎಂದು ಘೊಷಿಸಿದ ಐತಿಹಾಸಿಕ ವಿಶ್ವ ಹಿಂದು ಪರಿಷತ್ ಸಮ್ಮೇಳನ ಆಯೋಜನೆಯ ಸಂಪೂರ್ಣ ಹೊಣೆ ಹೊತ್ತವರು ಸೂರುಜಿ. ಉಡುಪಿಯ ಅಂದಿನ ಪ್ರಖ್ಯಾತ ವೈದ್ಯರಾಗಿದ್ದ ವಿ.ಎಸ್. ಆಚಾರ್ಯ ಅವರು ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿಯಾಗಿದ್ದರು.

ದಲಿತ ಸಮುದಾಯದ ಮೊದಲ ಐಎಎಸ್ ಅಧಿಕಾರಿ ಆರ್. ಭರಣಯ್ಯ ಅವರನ್ನು ಸಮ್ಮೇಳನಕ್ಕೆ ಸೂರುಜಿ ಕರೆತಂದಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ರಂತೆಯೇ ಸಂಸ್ಕೃತದಲ್ಲಿ ಭಾಷಣ ಮಾಡುವಷ್ಟು ವಿದ್ವತ್ ಸಂಪಾದಿಸಿದ್ದ ಭರಣಯ್ಯ ಅವರು ಸಮ್ಮೇಳನದಿಂದ ಅತ್ಯಂತ ಭಾವುಕರಾಗಿದ್ದರು. ಸಮ್ಮೇಳನ ಮುಕ್ತಾಯದ ನಂತರ ‘ನಮ್ಮನ್ನು ಕಾಪಾಡಲು ಅಂತಿಮವಾಗಿ ನೀವಾದರೂ ಬಂದಿರಿ’ ಎನ್ನುತ್ತಾ ಗುರೂಜಿಯವರನ್ನು ಬಿಗಿದಪ್ಪಿದರು. ‘ನಾನೊಬ್ಬನೇ ಅಲ್ಲ, ಇಡೀ ಹಿಂದು ಸಮಾಜ ನಿಮ್ಮ ಜತೆಗಿದೆ’ ಎಂದು ಗುರೂಜಿ ಸಾಂತ್ವನ ಹೇಳಿದ್ದರು.

ಸಮ್ಮೇಳನ ಮುಕ್ತಾಯದ ನಂತರ 1970ರ ಜ.14ರಂದು ಸೂರು ಅವರಿಗೆ ಗುರೂಜಿ ಪತ್ರ ಬರೆದು, ಕಾರ್ಯಕ್ರಮದಲ್ಲಿ ಘೊಷಣೆ ಮಾಡಿದಾಕ್ಷಣ ಯಕ್ಷಿಣಿ ಪ್ರಯೋಗದಂತೆ ತಕ್ಷಣದಲ್ಲೆ ಎಲ್ಲವೂ ಸರಿಹೋಗುವುದಿಲ್ಲ, ಅವಿರತ ಪರಿಶ್ರಮ ಬೇಕು ಎಂದಿದ್ದರು. ವಿ.ಎಸ್. ಆಚಾರ್ಯರ ಸಾಮಾಜಿಕ ಜೀವನ ಆರಂಭವಾಗಿದ್ದು ಈ ಸಮಯದಲ್ಲೆ. ಅಸ್ಪೃಶ್ಯತೆ ತೊಲಗಿಸುವ ಈ ಭಾವನೆಯೇ, 1971ರಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಆಚಾರ್ಯ ಅವರು, ಇಡೀ ದೇಶದಲ್ಲೆ ಮಲಹೊರುವ ಪದ್ಧತಿ ಸಂಪೂರ್ಣ ನಿಷೇಧಿಸಿದ ಮೊದಲ ಸರ್ಕಾರಿ ಘಟಕ ಎಂಬ ದಾಖಲೆ ನಿರ್ವಿುಸಲು ಪ್ರೇರಣೆಯಾಯಿತು.

1970ರಲ್ಲಿ ತಮಿಳುನಾಡಿಗೆ ನಿಯುಕ್ತಿಯಾದ ಸೂರು ಅವರ ಎದುರಿದ್ದದ್ದು ಕಠಿಣದಾರಿ. ಹಿಂದಿ ವಿರೋಧಿ, ಹಿಂದು ದ್ವೇಷಿ, ಬ್ರಾಹ್ಮಣ ವೈರಿ, ಪ್ರತ್ಯೇಕ ದ್ರಾವಿಡ ಜನಾಂಗದಂತಹ ಘೊಷಣೆಗಳು ತಮಿಳುನಾಡಿನಾದ್ಯಂತ ಹಬ್ಬಿದ್ದ ದಿನಗಳವು. ಆರೆಸ್ಸೆಸ್ ಪ್ರತಿಪಾದಿಸುವ ಬಹುತೇಕ ಎಲ್ಲ ವಿಚಾರಕ್ಕೂ ವಿರುದ್ಧವಾದ ವಾತಾವರಣದಲ್ಲಿ ‘ಸಂಘ ಕಾರ್ಯ ಸಾಧ್ಯವೇ?’ ಎಂಬ ಅನುಮಾನಗಳಿದ್ದವು. ಸೂರು ಅವರು ತಮಿಳುನಾಡಿನ ಜನಮಾನಸದಲ್ಲಿ ನೆಲೆಸಿದ ರೀತಿ ಎಂಥದ್ದು ಎಂದರೆ, ಸಂಘ ಪರಿವಾರದ ಅನೇಕ ಕಾರ್ಯಕ್ರಮಗಳಲ್ಲಿ ಅಲ್ಲಿನ ಡಿಎಂಕೆ ಪ್ರಮುಖ ನಾಯಕರೇ ಪಾಲ್ಗೊಂಡರು.

ಆರೆಸ್ಸೆಸ್ನಲ್ಲಿ ಆರಂಭವಾದ ಸೇವಾವಿಭಾಗದ ಪ್ರಥಮ ಅಖಿಲ ಭಾರತ ಪ್ರಮುಖರಾಗಿ ಸೂರು ಅವರನ್ನು ಗುರೂಜಿ ನಿಯುಕ್ತಿ ಮಾಡಿದ್ದರು. ಸೇವಾಕಾರ್ಯ ಕುರಿತಂತೆ ವೈಚಾರಿಕ ಬುನಾದಿ ಹಾಕಿಕೊಟ್ಟವರು ಸೂರುಜಿ. ಸೇವಾವಿಭಾಗದ ವತಿಯಿಂದ ಇಂದು ದೇಶಾದ್ಯಂತ 1.6 ಲಕ್ಷ ಸೇವಾ ಚಟುವಟಿಕೆಗಳು ನಡೆಯುತ್ತಿವೆ. ಕಂಚಿನಕಂಠ ಹೊಂದಿದ್ದರೂ ಅತ್ಯಂತ ಮೃದುಹೃದಯಿಯಾಗಿದ್ದ ಸೂರು ಅವರು ಯಾರನ್ನೂ ಗದರಿಸಿ ಮಾತನಾಡಿದವರಲ್ಲ. ಎಂದಿಗೂ ತನ್ನದು ಉನ್ನತ ಪದವಿ ಎಂಬ ಗರ್ವತೋರದ ಮೃದುಹೃದಯಿ ಎಂದು ನೆನೆಯುತ್ತಾರೆ ಸಹೋದರ ಕೃ. ನರಹರಿ. ಶುಕ್ರವಾರ ಇಹಲೋಕ ತ್ಯಜಿಸಿದ ‘ಸೂರು’ ಜಿ ಅವರಿಗೊಂದು ನುಡಿನಮನ.

Leave a Reply

Your email address will not be published. Required fields are marked *