ಸಾಹೇಬ್ರಿಗಾಗಿ ಕ್ಯಾಂಟೀನ್ ಸ್ವಚ್ಛ

ಬೆಂಗಳೂರು: ‘ಸಾಹೇಬ್ರು ಬರ್ತಾರೆ ಬೇಗ ಕ್ಲೀನ್ ಮಾಡ್ರಿ.. ಸಾಹೇಬ್ರು ಬಂದು ಕೇಳ್ದಾಗ ತಿಂಡಿ ಚೆನ್ನಾಗಿದೆ ಎಂದು ಹೇಳಿ..’ ಇದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿರಾ ಕ್ಯಾಂಟೀನ್​ಗಳ ಪರಿಸ್ಥಿತಿ ಬಗ್ಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಪರಿಶೀಲನೆಗೆ ತೆರಳಿದ್ದಾಗ ಕಂಡು ಬಂದ ದೃಶ್ಯ. ಇಂದಿರಾ ಕ್ಯಾಂಟೀನ್​ನ ಆಹಾರ ಗುಣಮಟ್ಟ ಸರಿಯಿಲ್ಲ ಮತ್ತು ಕಡಿಮೆ ಜನ ಬಂದರೂ ಹೆಚ್ಚಿನ ಹಣ ಪಾವತಿಸಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಪರಮೇಶ್ವರ್ ಗುರುವಾರ ಕ್ಯಾಂಟೀನ್​ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮೊದಲಿಗೆ ಅನಿರೀಕ್ಷಿತವಾಗಿ ಕ್ಯಾಂಟೀನ್​ಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಮತ್ತು ಆಹಾರದ ಬಗ್ಗೆ ಪರೀಕ್ಷಿಸುವುದಾಗಿ ಪರಮೇಶ್ವರ್ ತಿಳಿಸಿದ್ದರು. ಆದರೆ, ಅಧಿಕಾರಿಗಳಿಗೆ ಡಿಸಿಎಂ ಯಾವ ಕ್ಯಾಂಟೀನ್ ಮತ್ತು ಅಡುಗೆ ಮನೆಗೆ ಬರುತ್ತಾರೆ ಎಂದು ಮೊದಲೇ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಕ್ಯಾಂಟೀನ್​ಗಳನ್ನು ಸ್ವಚ್ಛಗೊಳಿಸಲಾಗಿತ್ತು. ಮೊದಲಿಗೆ ದೀಪಾಂಜಲಿನಗರ ಕ್ಯಾಂಟೀನ್ ಮತ್ತು ಅಡುಗೆ ಮನೆಗೆ ಬರುತ್ತಾರೆ ಎಂದು ತಿಳಿದ ಕೂಡಲೇ ಬೆಳಗ್ಗೆ 7 ಗಂಟೆಯಿಂದಲೇ ಸ್ವಚ್ಛತಾ ಕಾರ್ಯ ಆರಂಭಗೊಂಡಿತ್ತು. ಕ್ಯಾಂಟೀನ್ ಎದುರಿನ ಸರ್ವೀಸ್ ರಸ್ತೆಯಲ್ಲಿದ್ದ ಗುಂಡಿಗಳನ್ನು ಮಣ್ಣಿನಿಂದ ಮುಚ್ಚಲಾಯಿತು. ಕ್ಯಾಂಟೀನ್​ನಲ್ಲಿ ಆಹಾರ ಸೇವಿಸುತ್ತಿರುವವರನ್ನು ಡಿಸಿಎಂ ಮಾತನಾಡಿಸುವುದಕ್ಕೂ ಮುನ್ನ ಅಧಿಕಾರಿಗಳು, ಗ್ರಾಹಕರ ಬಳಿ ತೆರಳಿ ‘ಸಾಹೇಬ್ರು ಕೇಳಿದ್ರೆ ತಿಂಡಿ ಚೆನ್ನಾಗಿದೆ ಎಂದು ಹೇಳಿ’ ಎಂದು ತಿಳಿಸುತ್ತಿದ್ದರು.

ದೀಪಾಂಜಲಿನಗರ ಕ್ಯಾಂಟೀನ್​ನಲ್ಲಿ ಪರಮೇಶ್ವರ್, ಮೇಯರ್ ಗಂಗಾಂಬಿಕೆ, ಉಪ ಮೇಯರ್ ಭದ್ರೇಗೌಡ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಸೇರಿ ಇನ್ನಿತರರು ತಿಂಡಿ ತಿಂದರು. ಕ್ಯಾಂಟೀನ್​ನಲ್ಲಿ ಟೋಕನ್ ಪಡೆದಿದ್ದು ಬಿಟ್ಟರೆ, ಹಣ ಪಾವತಿಸಲಿಲ್ಲ. ಆಗ ಅಧಿಕಾರಿಯೊಬ್ಬರು ನಾನು ಆಮೇಲೆ ಜಘ ಕೊಡುತ್ತೇನೆ, ಲೆಕ್ಕ ಹಾಕಿಟ್ಟುಕೊಳ್ಳಿ ಎಂದರು.

ಒಂದೇ ತಟ್ಟೆಯಲ್ಲಿ ಊಟ: ಪೌರಕಾರ್ವಿುಕರಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸುವ ವೇಳೆ ಪರಮೇಶ್ವರ್ ತಾವೇ ತಟ್ಟೆ ತೆಗೆದುಕೊಂಡು ಅನ್ನ ಮತ್ತು ಸಾಂಬಾರ್ ಹಾಕಿಕೊಂಡರು. ಆಗ ಪಕ್ಕದಲ್ಲಿದ್ದ ಮೇಯರ್, ಉಪಮೇಯರ್, ಆಡಳಿತ ಪಕ್ಷದ ನಾಯಕರೊಂದಿಗೆ ಅದೇ ತಟ್ಟೆಯಲ್ಲಿ ಆಹಾರದ ರುಚಿ ನೋಡಿದರು. ಆಗ ಪರಮೇಶ್ವರ್, ‘ತುಂಬಾ ರುಚಿಯಾಗಿದೆ. ನಮ್ಮ ಮನೆಯಲ್ಲೂ ಈ ರೀತಿಯ ಆಹಾರ ಸಿಗುವುದಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಳಕು ಕಂಡು ತರಾಟೆ

ನಾಯಂಡಹಳ್ಳಿಯಲ್ಲಿನ ಅಡುಗೆ ಮನೆಗೆ ತೆರಳಿದಾಗ ಒಳಭಾಗದಲ್ಲಿ ಸಮರ್ಪಕವಾಗಿ ಸ್ವಚ್ಛತೆ ಕಾಪಾಡದ ಕಾರಣಕ್ಕಾಗಿ ಪರಮೇಶ್ವರ್ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಡುಗೆ ಮಾಡುವಾಗ ಸ್ವಚ್ಛತೆ ಕಾಪಾಡಿದರೆ ಆಹಾರವೂ ಚೆನ್ನಾಗಿರುತ್ತದೆ. ಆ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದರು.

ಬರುತ್ತೀರಾ ಅಂತ ಸ್ವಚ್ಛತೆ..

ನಾಯಂಡಹಳ್ಳಿಯಲ್ಲಿನ ಅಡುಗೆ ಮನೆ ಪರಿಶೀಲಿಸುವ ವೇಳೆ ಸ್ಥಳೀಯ ನಿವಾಸಿಗಳು, ನೀವು ಬರುತ್ತೀರೆಂಬ ಕಾರಣಕ್ಕಾಗಿ ಇಲ್ಲಿ ಸ್ವಚ್ಛಗೊಳಿಸಲಾಗಿದೆ. ಬೆಳಗ್ಗೆ ಅಧಿಕಾರಿಗಳು ಬಂದು ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದಾರೆ. ಇಲ್ಲದಿದ್ದರೆ ಇಲ್ಲಿ ಕಾಲಿಡುವಂತಿರುವುದಿಲ್ಲ ಎಂದು ಪರಮೇಶ್ವರ್​ಗೆ ತಿಳಿಸಿದರು. ಅದಕ್ಕೆ ಪರಮೇಶ್ವರ್, ಇನ್ನು ಮುಂದೆ ಹಾಗಾಗುವುದಿಲ್ಲ. ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ್ದೇನೆ ಎಂದರು. ಪಂತರಪಾಳ್ಯ ಪ್ರದೇಶದಲ್ಲಿ ನೀರಿನ ಸಮಸ್ಯೆಯಿದ್ದು, ಬಗೆಹರಿಸುವಂತೆ ಸ್ಥಳೀಯರು ಆಗ್ರಹಿಸಿದರು. ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿ ಬಗೆಹರಿಸಲಾಗುತ್ತದೆ ಎಂದು ಡಿಸಿಎಂ ಹೇಳಿದರು.

ಭೇಟಿ ನೀಡಿದ ಕ್ಯಾಂಟೀನ್​ಗಳಲ್ಲಿ ತಿಂಡಿ ತಿನ್ನುತ್ತಿದ್ದವರ ಹೆಗಲ ಮೇಲೆ ಪರಮೇಶ್ವರ್ ಕೈ ಹಾಕಿ ಮಾತನಾಡಿಸಿ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನಿಸಿದರು.

ವಾರಕ್ಕೊಮ್ಮೆ ಆಹಾರ ಪರೀಕ್ಷೆ

ಲಕ್ಷಾಂತರ ಜನರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಯೋಜನೆ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಅದನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಕ್ಯಾಂಟೀನ್​ಗಳ ಆಹಾರ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಈಗಾಗಲೇ 33 ಕ್ಯಾಂಟೀನ್​ಗಳಲ್ಲಿನ ಆಹಾರವನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಅದರ ಜತೆಗೆ ಇನ್ನು ಮುಂದೆ ವಾರಕ್ಕೊಮ್ಮೆ ಆಹಾರವನ್ನು ಪರೀಕ್ಷೆಗೆ ಕಳುಹಿಸುವಂತೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ಸದಸ್ಯರು ನಡೆಸಿದ ಆಹಾರ ಪರೀಕ್ಷೆ ಕುರಿತು ವರದಿ ನೀಡಲು ತಿಳಿಸಲಾಗಿದೆ. ಆಹಾರದ ಗುಣಮಟ್ಟದ ಬಗ್ಗೆ ವರದಿ ನೀಡಿದ ರಾಮಯ್ಯ ಪ್ರಯೋಗಾಲಯದ ಅಧಿಕಾರಿಗಳನ್ನು ವಿಚಾರಿಸುವಂತೆ ತಿಳಿಸಲಾಗಿದೆ ಎಂದರು.

ಬಿಜೆಪಿ ಕಾಪೋರೇಟರ್ ಉಮೇಶ್​ಶೆಟ್ಟಿ ಆಹಾರ ಪರೀಕ್ಷೆ ಮಾಡಿರುವ ವಿಧಾನ ಸರಿಯಿಲ್ಲ ಎಂದು ತಿಳಿದುಬಂದರೆ ಅವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

| ಡಾ. ಜಿ. ಪರಮೇಶ್ವರ್ ಡಿಸಿಎಂ

ತಪ್ಪು ಲೆಕ್ಕ ಕಂಡುಬಂದರೆ ಗುತ್ತಿಗೆದಾರರ ವಿರುದ್ಧ ಕ್ರಮ

ಕ್ಯಾಂಟೀನ್​ಗಳಲ್ಲಿ ಆಹಾರ ಸೇವಿಸುವವರಿಗಿಂತ ಹೆಚ್ಚಿನ ಜನರ ಲೆಕ್ಕ ತೋರಿಸಿ ಅಕ್ರಮ ನಡೆಯುತ್ತಿರುವ ಆರೋಪದಿಂದ ಮುಕ್ತವಾಗಲು ಬಿಬಿಎಂಪಿ ಮುಂದಾಗಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿನ 173 ಸ್ಥಿರ ಕ್ಯಾಂಟೀನ್​ಗಳಲ್ಲಿರುವ ಸಿಸಿ ಕ್ಯಾಮರಾಗಳ ಮೂಲಕ ನಿಗಾ ವಹಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಕೇಂದ್ರೀಕೃತ ಸಹಾಯವಾಣಿ ಕೇಂದ್ರ ರೂಪಿಸಿ, ಸಿಸಿ ಕ್ಯಾಮರಾಗಳ ದೃಶ್ಯವನ್ನು ಗಮನಿಸಲಾಗುತ್ತದೆ. ಆಮೂಲಕ ಜನರ ಸಂಖ್ಯೆ ಎಷ್ಟಿದೆ ಎಂಬುದು ಅರಿವಿಗೆ ಬರಲಿದೆ. ಅದನ್ನಾಧರಿಸಿ ಪ್ರತಿ ತಿಂಗಳು ಆಹಾರ ಪೂರೈಕೆ ಗುತ್ತಿಗೆದಾರರು ನೀಡುವ ಲೆಕ್ಕ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಲೆಕ್ಕ ತಪ್ಪಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸರಿಯಿದ್ದರೆ ಬಿಲ್ ಪಾವತಿಸಲಾಗುತ್ತದೆ.

ಸ್ವಚ್ಛ ಕ್ಯಾಂಟೀನ್​ಗೆ ಪ್ರಶಸ್ತಿ?

ಇಂದಿರಾ ಕ್ಯಾಂಟೀನ್ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲು ಪ್ರಶಸ್ತಿಯ ಆಮಿಷವೊಡ್ಡಲು ಚಿಂತಿಸಲಾಗಿದೆ. ಯಾವ ಕ್ಯಾಂಟೀನನ್ನು ಸ್ವಚ್ಛವಾಗಿಟ್ಟುಕೊಳ್ಳಲಾಗುತ್ತದೆಯೋ ಆ ಕ್ಯಾಂಟೀನ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರಶಸ್ತಿ ನೀಡುವ ಬಗ್ಗೆ ರ್ಚಚಿಸಲಾಗುತ್ತಿದೆ. ಆ ಮೂಲಕ ಉಳಿದ ಕ್ಯಾಂಟೀನ್​ಗಳನ್ನು ಸ್ವಚ್ಛವಾಗಿಡಲು ಪ್ರೋತ್ಸಾಹಿಸಿದಂತಾಗಲಿದೆ. ಲೋಕಸಭೆ ಚುನಾವಣೆ ನಂತರ ಪ್ರಶಸ್ತಿ ನೀಡುವ ಕುರಿತು ಮೇಯರ್ ಪ್ರಕಟಿಸುವ ಸಾಧ್ಯತೆಗಳಿವೆ.