ಸಾಹಿತ್ಯ ಸಮ್ಮೇಳನದಲ್ಲಿ ಗೊಂದಲವಿಲ್ಲ

ಬ್ಯಾಡಗಿ:ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಫೆ. 28ರಂದು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರ ವಿಶ್ವಾಸ ಹಾಗೂ ಅಭಿಪ್ರಾಯ ಪಡೆದು ಸಮ್ಮೇಳನ ನಡೆಸಲಾಗುತ್ತಿದೆ ಎಂದು ತಾಲೂಕು ಅಧ್ಯಕ್ಷ ಬಿ.ಎಂ. ಜಗಾಪುರ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಜಿಲ್ಲಾ ಮಟ್ಟದ ಕಸಾಪ ಸಮ್ಮೇಳನ ಬ್ಯಾಡಗಿಯಲ್ಲಿ ನಡೆದಿದ್ದು, ರಾಜ್ಯಮಟ್ಟದಲ್ಲಿ ಪ್ರಶಂಸೆ ಪಡೆದಿದೆ. ಆಗ ಎಲ್ಲ ಸಂಘ, ಸಂಸ್ಥೆ ಸೇರಿ ಸಾಹಿತ್ಯಾಭಿಮಾನಿಗಳ ವಿಶ್ವಾಸ ಹಾಗೂ ಸಲಹೆ ಸೂಚನೆ ಪಡೆಯಲಾಗಿತ್ತು. ಕೆಲ ಸಾಹಿತ್ಯಾಸಕ್ತರಿಗೆ ಅವಕಾಶ ಸಿಕ್ಕಿರಲಿಲ್ಲ. ಅಂಥವರಿಗೆ ತಾಲೂಕು ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಲಾಗಿದೆ. ತಾಲೂಕು ಘಟಕದ ಪೂರ್ವಭಾವಿ ಸಭೆಯಲ್ಲಿ ಹೋಬಳಿ ಘಟಕದ ಆಶ್ರಯದಲ್ಲಿ ಚಿಕ್ಕಬಾಸೂರು ಗ್ರಾಮದಲ್ಲಿ ಕಸಾಪ ತಾಲೂಕು ಸಮ್ಮೇಳನ ನಡೆಸಲು ನಿರ್ಧರಿಸುವ ಮೂಲಕ ಸ್ಥಳೀಯರ ಸಹಕಾರ ಪಡೆದು ಕಾರ್ಯಕ್ರಮ ಆಯೋಜಿಸಲಾಗಿದೆ. ಸಮ್ಮೇಳನ ಮುಗಿದ ಬಳಿಕ ಸಾರ್ವಜನಿಕ ಸಭೆ ಕರೆದು ಲೆಕ್ಕಪತ್ರ ನೀಡಲಾಗುವುದು ಎಂದರು.

ಯಾರನ್ನೂ ಕಡೆಗಣಿಸಿಲ್ಲ: ಸಾಹಿತಿ ಸಂಕಮ್ಮ ಸಂಕಣ್ಣನವರ ಸೇರಿ ಯಾವ ಸಾಹಿತ್ಯಾಸಕ್ತರನ್ನೂ ಕಡೆಗಣಿಸಿಲ್ಲ. ಅನಿವಾರ್ಯ ಕಾರಣದಿಂದ ಕೆಲವೊಮ್ಮೆ ಸಣ್ಣಪುಟ್ಟ ಗೊಂದಲ, ಭಿನ್ನಾಭಿಪ್ರಾಯಗಳು ಉಂಟಾಗಿರಬಹುದು. ನಾವು ಎಲ್ಲ ಮುಖಂಡರ ಮನೆಮನೆಗೂ ತೆರಳಿ ಆಹ್ವಾನ ಪತ್ರಿಕೆ ನೀಡಿ ಸಹಕಾರ ಕೋರಿದ್ದೇವೆ ಎಂದರು.

ಕಾಗಿನೆಲೆ ಹೋಬಳಿ ಕಸಾಪ ಅಧ್ಯಕ್ಷ ಎನ್.ಎಫ್. ಹರಿಜನ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕನ್ನಡಾಭಿಮಾನ ಹೆಚ್ಚಿಸುವ ಹಾಗೂ ಇನ್ನಷ್ಟು ಜಾಗೃತಿ ಮೂಡಿಸುವ ಸಲುವಾಗಿ ಈ ಬಾರಿ ತಾಲೂಕು ಸಮ್ಮೇಳನ ಗ್ರಾಮೀಣ ಭಾಗದಲ್ಲಿ ನಡೆಸಲಾಗುತ್ತಿದೆ. ಗ್ರಾಮಸ್ಥರು, ಜನಪ್ರನಿಧಿಗಳು, ಸಂಘ, ಸಂಸ್ಥೆಯವರು ಸ್ವಯಂ ಆಸಕ್ತಿ ವಹಿಸಿ, ಸಹಕಾರ ನೀಡುತ್ತಿದ್ದಾರೆ. ಸಮ್ಮೇಳನಾಧ್ಯಕ್ಷ ಡಾ.ಶಶಿಧರ ವೈದ್ಯ ಅವರನ್ನು ಆಯ್ಕೆ ಮಾಡಿದ್ದು, ಗ್ರಾಮೀಣ ಶೈಲಿಯಲ್ಲಿ ಅದ್ದೂರಿ ಮೆರವಣಿಗೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು.

25 ಸಾಧಕರಿಗೆ ಸನ್ಮಾನ: ಕಲೆ, ಸಾಹಿತ್ಯ, ಕೃಷಿ, ಕ್ರೀಡೆ, ವಿಜ್ಞಾನ, ಉದ್ಯೋಗ ಸೇರಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನದ ಬಯಲು ಜಾಗದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದ್ದು, ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ನಾಲ್ಕು ಬಾರಿ ಪೂರ್ವಭಾವಿ ಸಭೆ ಮಾಡಲಾಗಿದ್ದು, ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಸುರೇಶ ಆಸಾದಿ, ವೀರೇಂದ್ರ ಶೆಟ್ಟರ್, ಎಸ್.ಪಿ. ಮಠದ, ರಾಜಶೇಖರ ಹೊಸಳ್ಳಿ, ಅಶೋಕ ಮೂಡಿ, ಎಸ್.ಎಸ್. ಅಜಗೊಂಡರ, ವಿಷ್ಣುಕಾಂತ ಬೆನ್ನೂರು ಇತರರಿದ್ದರು.

ಹಿಂದಿನ ಮೂರು ವರ್ಷದ ಅವಧಿಯಲ್ಲಿ ಯಾವುದೇ ಹಣಕಾಸಿನ ಅವ್ಯವಹಾರಗಳು ನಡೆದಿಲ್ಲ. ನಯಾಪೈಸೆಯೂ ವ್ಯಯ ಮಾಡದೆ ಲೆಕ್ಕಪತ್ರ ಇಡುವ ಮೂಲಕ ಪದಾಧಿಕಾರಿಗಳು ಹಾಗೂ ಸಾಹಿತಿಗಳ ಸಮ್ಮುಖದಲ್ಲಿ ನಡೆದಿದೆ. ತಾವು ಎರಡು ವರ್ಷದ ಹಿಂದೆ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷನಾಗಿ ಆಯ್ಕೆಗೊಂಡು ಎಲ್ಲರ ಗೌರವ ಸ್ವೀಕರಿಸಿದ್ದೇನೆ. ನನಗೆ ತಿಳಿದ ಮಟ್ಟಿಗೆ ಪ್ರಸಕ್ತ ಕಸಾಪ ಅಧ್ಯಕ್ಷ, ಪದಾಧಿಕಾರಿಗಳು ಅವ್ಯವಹಾರ ಮಾಡಿಲ್ಲ. ಒಂದು ವೇಳೆ ಯಾರಿಗಾದರೂ ಲೆಕ್ಕಪತ್ರ ಬೇಕಿದ್ದಲ್ಲಿ ಕಸಾಪ ಸಭೆಯಲ್ಲಿ ಬಂದು ಮಾಹಿತಿ ಪಡೆಯಬಹುದು.

| ಎಸ್.ಬಿ. ತವರದ ನಿವೃತ್ತ ಪ್ರಾಂಶುಪಾಲ