ಮುಂಡರಗಿ: ಬಯಲಾಟ ಯುವ ಕಲಾವಿದರು ಉತ್ತಮ ಆರೋಗ್ಯ ಕಂಡುಕೊಳ್ಳುವುದರ ಜೊತೆಗೆ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ಸಾಹಿತ್ಯ ಮತ್ತು ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಜಾನಪದ ಬಯಲಾಟ ಕಲಾ ಪರಿಷತ್ನಿಂದ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಾಧಕರಿಗೊಂದು ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಲೆ ಮತ್ತು ಕಲಾವಿದರನ್ನು ಪೋ›ತ್ಸಾಹಿಸುವ ಕೆಲಸ ಮಾಡಬೇಕು. ಬಯಲಾಟಕ್ಕೆ ಬೇಕಾಗುವ ಪರಿಕರಗಳನ್ನು ತಯಾರಿಸುವ ಕಲಾವಿದ ಮೌನೇಶ ಬಡಿಗೇರ ಅವರಿಗೆ ಪೋ›ತ್ಸಾಹ ರೂಪದಲ್ಲಿ ಶ್ರೀಮಠದಿಂದ 5 ಸಾವಿರ ರೂ. ನೀಡಲಾಗುತ್ತದೆ’ ಎಂದರು.
ರಂಗಭೂಮಿ ಕಲಾವಿದ ವೈ.ಎನ್.ಗೌಡರ ಮಾತನಾಡಿ, ಸಾಂಸ್ಕೃತಿಕ ತಾಯಿ ಬೇರಾಗಿರುವಂತ ಬಯಲಾಟ ಇತ್ತೀಚೆಗೆ ಮಾಯವಾಗುತ್ತಿದೆ. ನಾಡಿನ ಸಂಸ್ಕೃತಿ ಉಳಿಸುವಂತ ಕಾರ್ಯವಾಗಬೇಕು. ಬಯಲಾಟ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಸಿದಂತೆ ಎಂದರು.
ರಂಗಕರ್ವಿು ಡಾ.ಎಸ್.ಎಲ್.ಎನ್.ಸ್ವಾಮಿ ಮಾತನಾಡಿ, ರಂಗಭೂಮಿ ಎನ್ನುವುದು ಶಕ್ತಿ ಇದ್ದಂತೆ. ರಂಗಭೂಮಿ ಎಲ್ಲ ಕಲೆಗಳನ್ನು ಒಳಗೊಂಡಿರುವಂತ ಕಲೆಯಾಗಿದೆ. ಬದುಕನ್ನು ಮತ್ತು ಸಮಾಜವನ್ನು ರೂಪಿಸುವಂತದ್ದು ರಂಗಭೂಮಿ ಕಲೆಯಾಗಿದೆ ಎಂದರು.
ಡಾ.ನಿಂಗು ಸೊಲಗಿ, ಕೆ.ಎಸ್.ಸತ್ಯನಾರಾಯಣ ಮಾತನಾಡಿದರು. ಗದಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಂದ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು. ಡಾ.ಎಸ್.ಎಲ್.ಎನ್.ಸ್ವಾಮಿ, ಹೇಲನ್ ಮೈಸೂರು, ಗಣೇಶ ರಾಯ್ಕರ, ಸುರೇಶ ರೇವಣಕರ, ನಾಗರಾಜ ರೇವಣಕರ, ರೇಮೊನಾ ಮಂಗಳೂರ ಸೇರಿದಂತೆ 71 ಸಾಧಕರನ್ನು ಸನ್ಮಾನಿಸಿ, ಮೃಡಗಿರಿ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜಸೇವಕ ಮಂಜುನಾಥ ಇಟಗಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಡಾ.ಬಿ.ಜಿ. ಜವಳಿ ಚಿತ್ರಕಲೆ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಬಯಲಾಟ ಕಲಾ ಪರಿಷತ್ ಅಧ್ಯಕ್ಷ ಮೌನೇಶ ಬಡಿಗೇರ, ಕರಬಸಪ್ಪ ಹಂಚಿನಾಳ, ಎಸ್.ವಿ.ಪಾಟೀಲ, ಡಾ.ಕುಮಾರಸ್ವಾಮಿ ಹಿರೇಮಠ, ಬಿ.ಬಾಬು, ನಾಗೇಶ ಹುಬ್ಬಳ್ಳಿ, ಪವನ ಮೇಟಿ, ರಾಜಾಬಕ್ಷೀ ಬೆಟಗೇರಿ, ರೈಮಾನಸಾಬ್ ಮಲ್ಲಿನಕೇರಿ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ದೇವು ಹಡಪದ, ಪ್ರಾಣೇಶ ಪುರದ, ಶಿವಣ್ಣ ಅರವಟಗಿ ಉಪಸ್ಥಿತರರು ಇದ್ದರು. ಮಂಜುನಾಥ ಮುಧೋಳ ಕಾರ್ಯಕ್ರಮ ನಿರೂಪಿಸಿದರು.