ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ

ಎಚ್.ಡಿ.ಕೋಟೆ: ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡರೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದು ವಿದ್ವಾಂಸ ಡಾ.ಮಳಲಿ ವಸಂತಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಏರ್ಪಡಿಸಿದ್ದ ಗ್ರಾಮೀಣ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕವಿಯಾದವರು ಮೊದಲು ಪ್ರಕೃತಿಯನ್ನು ಆರಾಧಿಸಬೇಕು. ಜಗತ್ತಿನ ಅತಿ ಶ್ರೇಷ್ಠ ಕವಿಗಳಲ್ಲಿ ಪಂಪ ಸಹ ಒಬ್ಬರು. ಜನಪದಗೀತೆ ಮತ್ತು ವಚನಗಳನ್ನು ಬರೆದವರು ಶಾಲೆಗೆ ಹೋದವರಲ್ಲ. ಆದರೂ ವಚನಗಳು ಲಯಬದ್ಧವಾಗಿದ್ದು, ನೀತಿಯುಕ್ತವಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ದಸರಾ ಆಚರಣೆ ಸಾಹಿತ್ಯ, ಸಂಸ್ಕೃತಿಯ ಅನಾವರಣದ ಸಂಕೇತ ಮತ್ತು ನಾಡಿನ ಪರಂಪರೆಯ ಬಗ್ಗೆ ಬೆಳಕು ಚೆಲ್ಲುವ ಹಬ್ಬವಾಗಿದೆ. ಪರಂಪರೆ ಹಿನ್ನೆಲೆಯಲ್ಲಿ ಕಾವ್ಯದ ಸ್ಥಾನ ಮಹತ್ವದ್ದಾಗಿದೆ. ಕವಿ ಸಮಾಜದ ಚೆಲುವು, ಒಲವು, ಸಂತೋಷ, ವಿಷಾದ, ಸಮಸ್ಯೆ ಮತ್ತು ಸವಾಲುಗಳನ್ನು ಕವಿತೆಯ ಮೂಲಕ ಅಭಿವ್ಯಕ್ತಿಸುತ್ತಾನೆ ಎಂದರು.

ತಹಸೀಲ್ದಾರ್ ಆರ್.ಮಂಜುನಾಥ್ ಮಾತನಾಡಿ, ಮನುಷ್ಯ ತನ್ನ ಉತ್ಕಟವಾದ ಭಾವನೆಗಳನ್ನು ಅಭಿವ್ಯಕ್ತಿಪಡಿಸಲು ಗದ್ಯಕ್ಕಿಂತ ಕಾವ್ಯ ಅತ್ಯುತ್ತಮ ಮಾರ್ಗವಾಗಿದೆ. ವೈಯಕ್ತಿಕ ಅಭಿಪ್ರಾಯಗಳು ಕಾವ್ಯಗಳಾಗಬಾರದು. ಅವು ಹೆಚ್ಚು ದಿನ ಉಳಿಯುವುದಿಲ್ಲ, ಕವಿಯ ಭಾವನೆಗಳು ಸಾರ್ವತ್ರಿಕವಾದಾಗ ಮಾತ್ರ ಕಾವ್ಯ ಬಹಳಷ್ಟು ಕಾಲ ಉಳಿಯುವ ಶಕ್ತಿ ಹೊಂದಿರುತ್ತದೆ ಎಂದರು ಹೇಳಿದರು.

ಕವಿ ಚೇತನ ಶರ್ಮ, ಡಾ.ಎಂ.ಎನ್.ರವಿಶಂಕರ್, ಪುನೀತ್ ಅಂಬಳೆ, ಕಿರಣ್, ಹೇಮಾವತಿ, ಡಿ.ರೂಪಾ, ಹೇಮಮಾಲಿನಿ, ಗುರು ರಾಘವೇಂದ್ರ, ಕುಮಾರಿ, ಭಾಸ್ಕರ್ ಕಿತ್ತೂರು, ಬಾಲಸುಬ್ರಹ್ಮಣ್ಯ, ಸಂಜಯ್ ಮೊದಲಾದವರು ಅನೇಕ ವಿಚಾರಗಳ ಕುರಿತು ಬೆಳಕು ಚೆಲ್ಲುವಂತ ಕವನ ವಾಚಿಸಿದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕೆ.ಪಿ.ಬಸವೇಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡಪ್ರಮೋದ, ಗೌರವಕಾರ್ಯದರ್ಶಿ ಎಚ್.ಸಿ.ರವಿಗೌಡ, ಪ್ರಾಂಶುಪಾಲ ಡಾ.ಜೆ.ಎನ್.ವೆಂಕಟೇಶ್, ಅಂತರಸಂತೆ ಹೋಬಳಿ ಘಟಕ ಅಧ್ಯಕ್ಷ ಅಶೋಕ್, ಪತ್ರಕರ್ತ ರವಿಕುಮಾರ್ ಆರಾಧ್ಯ, ಸಂಚಾಲಕ ವಿಜಯಕುಮಾರ್, ಉಪನ್ಯಾಸಕರಾದ ಪುಷ್ಪ, ಡಿ.ಪ್ರಕಾಶ್, ಮಂಜು, ಚನ್ನಕೇಶವನಾಯಕ, ರಾಮಚಂದ್ರು, ವೀಣಾ, ಶೈಲಜಾ, ಸಿದ್ದೇಗೌಡ, ಮಹೇಂದ್ರ, ಸಿದ್ದರಾಜು ಇದ್ದರು.

Leave a Reply

Your email address will not be published. Required fields are marked *