ರಬಕವಿ/ಬನಹಟ್ಟಿ: ಕನ್ನಡ ಸಾಹಿತ್ಯಕ್ಕೆ ರಬಕವಿ-ಬನಹಟ್ಟಿ ತಾಲೂಕಿಗೆ ವಿಶಿಷ್ಠ ಸ್ಥಾನವಿದೆ. ಮಾನವ ಬದುಕಿನಲ್ಲಿ ಬಲವಾದ ಆತ್ಮಬಲ ಹೆಚ್ಚಿಸುವ ಕಾರ್ಯದಲ್ಲಿ ವಿಭಿನ್ನ ಸಾಹಿತ್ಯಗಳು ಅರ್ಥಪೂರ್ಣವಾದ ಕೊಡುಗೆ ನೀಡಿವೆ. ಅದರಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ಸಾಹಿತಿಗಳದ್ದೂ ಸಿಂಹಪಾಲು ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ, ವೀರಶೇವ ಮಹಾಸಭಾ ರಾಜ್ಯಾಧ್ಯಕ್ಷ ಡಾ. ಶಂಕರ ಬಿದರಿ ಹೇಳಿದರು.
ಬನಹಟ್ಟಿಯ ಬದ್ರನ್ನವರ ಸಮುದಾಯ ಭವನದಲ್ಲಿ ಬಸವ ಸಂಪದ ಬಳಗದಿಂದ ಶನಿವಾರ ಮಲ್ಲಿಕಾರ್ಜುನ ಹುಲಗಬಾಳಿಯವರು ರಚಿಸಿದ ಚಿಗಳಿ ಹಾಗೂ ‘ತಿರುಗಾಟ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವ್ಯಕ್ತಿತ್ವವು ಆದರ್ಶ, ಸದಾಚಾರ, ನಿಷ್ಠೆ, ದಕ್ಷತೆ, ಪ್ರಾಮಾಣಿಕತೆ, ಆತ್ಮಬಲಗಳ ಸಂಗಮವಾಗಿದೆ. ಸಾಹಿತ್ಯಗಳ ಅಧ್ಯಯನ ಹಾಗೂ ಅನುಕರಣೆಯಿಂದ ಜೀವನ ಮೌಲ್ಯ ಹೆಚ್ಚಿಸಿಕೊಳ್ಳಬಹುದಾಗಿದೆ. ಅವು ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರೇರಣೆ ಎಂದರು.
ಮಲ್ಲಿಕಾರ್ಜುನ ಹುಲಗಬಾಳಿ ಮಾತನಾಡಿ, ಸಾಹಿತ್ಯವು ಸಾಮಾಜಿಕ ಪ್ರಾಣಿಗಳಿಗೆ ಸಂಸ್ಕಾರ ನೀಡಿ ಮಾನವರಾಗಿ ಮಾಡಿದೆ. ಇಂತಹ ಅಮೂಲ್ಯವಾದ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕಾರ್ಯ ನಡೆಯಬೇಕೆಂದರು.
ವರ್ತಮಾನದ ಅನುಭವವನ್ನು ಸೃಷ್ಠಿಸುವ ಸಾಹಿತ್ಯ ಎಷ್ಟೇ ಪ್ರಾಚೀನವಾದರೂ ಅದು ಸಮಕಾಲೀನವಾಗುತ್ತದೆ ಎಂದು ಹಿರಿಯ ಸಾಹಿತಿ ಎಂ.ಎನ್. ರಾಮನಾಥ ಹೇಳಿದರು.
ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ, ಜಯವಂತ ಕಾಡದೇವರ, ಶಂಕರ ಜುಂಜಪ್ಪನವರ, ಸಿದ್ರಾಮಪ್ಪ ಸವದತ್ತಿ, ಸೋಮಶೇಖರ ಕೊಟ್ರಶೆಟ್ಟಿ, ಕಿರಣ ಆಳಗಿ, ಮಲ್ಲಣ್ಣ ಕಕಮರಿ, ಯಶವಂತ ವಾಜಂತ್ರಿ, ಸಿದ್ಧರಾಮ ಹಾವಿನಾಳ, ಚಿದಾನಂದ ಸೊಲ್ಲಾಪೂರ, ಆನಂದ ಕುಲಗೋಡ, ಮಹಾಶಾಂತ ಶೆಟ್ಟಿ, ಮಧುಕೇಶ್ವರ ಬೆಳಗಲಿ, ಆನಂದ ಕಾಡದೇವರ, ಆನಂದ ಕುಳ್ಳಿ, ವಿಶ್ವಜ ಕಾಡದೇವರ, ಬಸಯ್ಯ ವಸ್ತದ, ಜಿ.ಎಸ್. ವಡಗಾಂವಿ, ನೀಲಕಂಠ ದಾತಾರ, ಶರತ ಜಂಬಗಿ ಇತರರಿದ್ದರು.