ಬಣಕಲ್: ಜಾನಪದವು ಸಾಹಿತ್ಯದ ಬೇರು ಇದ್ದಂತೆ. ಹಳ್ಳಿಯ ಜನರ ಜೀವನ ಜಗತ್ತಿಗೇ ಮಾದರಿ. ಬಸವಣ್ಣ, ಸಂತರು, ಶರಣರು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಬಣಕಲ್ ಹೋಬಳಿ ಘಟಕದಿಂದ ಭಾರತೀಬೈಲ್‌ನಲ್ಲಿ ನಡೆದ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಮತ್ತು ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ವಚನ ಸಾಹಿತ್ಯ, ಚುಟುಕು ಸಾಹಿತ್ಯ, ನವ್ಯ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ ಎಂದರು.
ಜಿಲ್ಲಾ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಬಣಕಲ್ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್ ಶೆಟ್ಟಿ ಘಟಕದ ದೊಡ್ಡ ಶಕ್ತಿ ಆಗಿದ್ದರು ಎಂದರು. ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಕೊಟ್ಟಿಗೆಹಾರ ಪ್ರೌಢಶಾಲೆಯ ನೌಶಿಬಾ, ಸಮಾಜಸೇವಕ ರಾಮಚಂದ್ರ ಅವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯುವ ಸಾಹಿತಿಗಳಾದ ಶಾಲಿನಿ ಜೀವನ್ ಕುಂದೂರು, ಲಕ್ಷ್ಮಣ್ ಹೊಸಳ್ಳಿ, ಮಿನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಬಡ್ಡಿ ಆಟದಲ್ಲಿ ಚಿನ್ನದ ಪದಕ ಗೆದ್ದ ಅಂಕಿತಾ ಮತ್ತು ಶರಣ್ಯ ಅವರನ್ನು ಸನ್ಮಾನಿಸಲಾಯಿತು.
ಲೋಕೇಶ್ ಬೆಟ್ಟಗೆರೆ, ಡಿ.ಕೆ.ಲಕ್ಷ್ಮಣ್ ಗೌಡ, ಬಕ್ಕಿ ಮಂಜುನಾಥ್, ಮಂಜುನಾಥ್ ರಾಥೋಡ್, ನಾಟ್ಯ ರಂಜಿತ್, ಶಿವಪ್ರಸಾದ್, ಎಚ್.ಪಿ.ಕೃಷ್ಣೇಗೌಡ, ರವಿ ಗೌಡ, ಹೊರಟ್ಟಿ ರಘು, ರಾಮಚಂದ್ರ, ಶಶಿಕಾಂತ್, ಶ್ರೀಜೀತ್, ದೀಲಿಪ್ ಕನ್ನಗೆರೆ, ಎಚ್.ಬಿ.ಶಶಿಧರ್, ಸುಮಾ, ಲಕ್ಷ್ಮಣ್ ಹೊಸಳ್ಳಿ, ಶಾಲಿನಿ ಜೀವನ್, ಸಂಗಮ್, ಪ್ರಜ್ವಲ್, ಮಹೇಶ್, ವಸಂತ್ ಹಾರ್ಗೋಡ್, ಭಕ್ತೇಶ್, ಚಂದ್ರು ಸಾಲಿಯಾನ ಇದ್ದರು.