ಸಾಹಿತಿಯ ವಿನೀತ ಭಾವ ವೃದ್ಧಿಸಲಿ

ಗೋಕರ್ಣ: ಪ್ರಶಸ್ತಿ ಪುರಸ್ಕಾರಗಳು ಸಾಹಿತಿಯ ವಿನೀತ ಭಾವವನ್ನು ವೃದ್ಧಿಸಬೇಕು. ಇದರಿಂದ ಮಾತ್ರ ಪಡೆದ ಪ್ರಶಸ್ತಿಯನ್ನು ಗೌರವಿಸಿದಂತಾಗುತ್ತದೆ ಎಂದು ಕವಿ, ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಮುಂಬೈನ ಹವ್ಯಕ ವೆಲ್​ಫೇರ್ ಟ್ರಸ್ಟ್ ನೀಡಿದ ರ್ಕ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ ಸ್ವೀಕರಿಸಿ ಭಾನುವಾರ ಅವರು ಮಾತನಾಡಿದರು.

ಸಾಹಿತ್ಯ ಮತ್ತು ಕಲೋಪಾಸನೆಯ ಮೂಲ ಉದ್ದೇಶ ಮನಸ್ಸುಗಳನ್ನು ಬೆಸೆದು ಸ-ಹಿತವನ್ನು ಉಂಟು ಮಾಡುವುದಾಗಿದೆ. ಸಾಹಿತಿ ಮತ್ತು ಕಲಾವಿದರಾದವರು ಪ್ರಶಸ್ತಿ ಗೌರವಗಳಿಗೆ ಹಾತೊರೆದಾಗ ಅದರ ಮೂಲ ಉದ್ದೇಶಕ್ಕೆ ಧಕ್ಕೆ ಬರುತ್ತದೆ. ಇಂಥ ವಿನೀತ ಭಾವವನ್ನು ಕನ್ನಡದ ಹವ್ಯಕ ಪರಂಪರೆಯಲ್ಲಿ ಕಾಣಬಹುದಾಗಿದೆ. ಎಲ್ಲರನ್ನೂ ತನ್ನಲ್ಲಿ ಒಳಗೊಳ್ಳಬಲ್ಲ ಗೋಕರ್ಣದ ಜಾತ್ಯತೀತ ಹವ್ಯಕ ಪರಿಸರ ನನ್ನನ್ನು ಬೆಳೆಸಿತು. ಮುಂಬೈ ಮಹಾನಗರಿ ನನ್ನ ಸಂವೇದನೆಗಳನ್ನು ರೂಪಿಸುವ ಕಾರ್ಯ ಮಾಡಿತು. ಕಾರಣ ಈ ಎರಡಕ್ಕೂ ನಾನು ಆಜೀವ ಋಣಿಯಾಗಿದ್ದೇನೆ. ಈ ಪ್ರಶಸ್ತಿಯಿಂದ ಇವೆರಡರ ಮಧ್ಯೆ ಅವಿನಾಶಿನಿಯಾದ ಸೇತುವೆಯೊಂದು ನಿರ್ವಣವಾದಂತಾಗಿದೆ ಎಂದು ಜಯಂತ್ ಹೇಳಿದರು.

ಹವ್ಯಕ ವೆಲ್​ಫೇರ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ ಪಿ. ಭಾಗವತ ಅಧ್ಯಕ್ಷತೆ ವಹಿಸಿ ವಿಶ್ವಮಾನ್ಯ ಸಾಹಿತಿಯೊಬ್ಬರಿಗೆ ಈ ಪ್ರಶಸ್ತಿ ನೀಡುತ್ತಿರುವುದು ನಮ್ಮ ಸಂಸ್ಥೆ ಹಾಗೂ ನಮ್ಮೆಲ್ಲರ ಹೆಮ್ಮೆ ಎಂದರು. ಕ್ಯಾನ್ಸರ್ ತಜ್ಞ ಡಾ. ನಾಗರಾಜ ಹುಯಿಲಗೋಳ, ಮುಂಬೈ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮಾತನಾಡಿದರು. ಹವ್ಯಕ ಸಂದೇಶ ಮಾಸಿಕದ ಸಂಪಾದಕಿ ಅಮಿತಾ ಭಾಗವತ, ಪ್ರಶಸ್ತಿ ಸಮಿತಿ ಸಂಚಾಲಕಿ ತನುಜಾ ಹೆಗಡೆ, ಟ್ರಸ್ಟ್ ಉಪಾಧ್ಯಕ್ಷ ಸಂಜಯ ಭಟ್ಟ, ಕೋಶಾಧಿಕಾರಿ ಎ.ಜಿ. ಭಟ್ಟ, ಕಾರ್ಯದರ್ಶಿ ನಾರಾಯಣ ಅಕದಾಸ ನಿರ್ವಹಿಸಿದರು.

ಜಯಂತ್ ಅವರ ಸಾಹಿತ್ಯ ಕರ್ನಾಟಕ ಅಥವಾ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಅದೊಂದು ಲೋಕ ಸಾಹಿತ್ಯ ಎನ್ನುವುದನ್ನು ಇತ್ತೀಚಿನ ದಕ್ಷಿಣ ಏಷ್ಯಾ ಪ್ರಶಸ್ತಿ ಋಜುವಾತು ಮಾಡಿದೆ. ಅವರ ಎಲ್ಲ ಸಾಹಿತ್ಯಗಳು ವಿಶ್ವ ಸಮುದಾಯವನ್ನು ಮುಟ್ಟಲಿ. | ಡಾ. ನಾಗರಾಜ ಹುಯಿಲಗೋಳ, ಮುಂಬೈ ನಾನಾವತಿ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ತಜ್ಞ