ಸಾವಯವ ಕೃಷಿಗೆ ಮಹತ್ವ ನೀಡಿ

ನರೇಗಲ್ಲ: ದೇಶದ ಬೆನ್ನೆಲುಬು ಕೃಷಿ, ಅದಕ್ಕೆ ಹಸು ಸಹಕಾರಿ. ಹಸುವಿನ ಒಂದು ಗ್ರಾಂ ಸೆಗಣಿ ಮೂರು ಸಾವಿರ ಜೀವಾಣು ಹೊಂದಿರುತ್ತದೆ. ಭೂಮಿಯ ಫಲವತ್ತತೆ ಕಾಯ್ದುಕೊಳ್ಳಲು ಸಾವಯವ ಕೃಷಿಗೆ ಮಹತ್ವಕೊಡಬೇಕು ಎಂದು ಕವಿತಾಳದ ಪ್ರಗತಿಪರ ರೈತ ಮಹಿಳೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಕವಿತಾ ಮಿಶ್ರಾ ಹೇಳಿದರು.

ಸಮೀಪದ ನಿಡಗುಂದಿ ಗ್ರಾಮದ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭೂಮಿಗೆ ಎರೆಹುಳು ಗೊಬ್ಬರ, ಜೀವಾಮೃತ, ಬೀಜಾಮೃತ ಕೊಡುವುದರಿಂದ ಮಣ್ಣಿನಲ್ಲಿ ಹೆಚ್ಚಿನ ಪೋಷಕಾಂಶ ಹೊಂದಿ ಭೂಮಿಗೆ ಫಲವತ್ತತೆ ಬರುತ್ತದೆ. ರಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿದರೆ ಭೂತಾಯಿಗೆ ವಿಷ ಉಣಸಿ, ನಾವು ವಿಷಯುಕ್ತ ಆಹಾರ ತಿಂದು ಸಾವನ್ನು ಹತ್ತಿರ ತಂದುಕೊಳ್ಳುತ್ತಿದ್ದೇವೆ. ಭೂತಾಯಿಯನ್ನು ವಿಷಮುಕ್ತ ಮಾಡುವುದರ ಜತೆಗೆ ವಿಷ ಮುಕ್ತ ಆಹಾರವನ್ನು ಸೇವನೆ ಮಾಡಬೇಕಾಗಿದೆ. ನಮ್ಮಲ್ಲಿರುವ ತ್ಯಾಜ್ಯ ವಸ್ತುಗಳನ್ನು ಬಳಸಿ ದೇಶಿಯ ಕೃಷಿ ಪದ್ಧತಿ ಮಾಡಿ ಪರಿಸರ ರಕ್ಷಿಸಬೇಕಾಗಿದೆ. ನಮ್ಮ ಸರ್ಕಾರಗಳು ರೈತರಿಗೆ ಸಾಲಕೊಡುವ ಬದಲು ಫಸಲಿಗೆ ಉತ್ತಮ ಬೆಲೆಕೊಟ್ಟರೆ ಸಾಕು. ಆಗ ಅನ್ನದಾತ ಆನಂದದಿಂದ ಬದುಕು ಸಾಗಿಸಲು ಸಹಕರಿಸದಂತಾಗುತ್ತದೆ. ಪುರುಷರಂತೆ ಮಹಿಳೆಯರು ಕೃಷಿ ಕಾಯಕದಲ್ಲಿ ನಿರತರಾಗಿ, ಹೈನೋದ್ಯಮದಂತಹ ಕಾಯಕದಲ್ಲಿ ತೊಡಗಿ ಸ್ವಾವಲಂಬಿಗಳಾಗಬೇಕು’ ಎಂದರು.

ಜಿಲ್ಲಾ ಕೃಷಿ ವಿಸ್ತರಣಾಧಿಕಾರಿ ಡಾ. ಸಿ.ಎಂ. ರಫಿ ಮಾತನಾಡಿದರು. ಇದೆ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಸಿದ್ಧರಾಮ ದೇವರು ಸಾನ್ನಿಧ್ಯ ವಹಿಸಿದ್ದರು. ನಿಡಗುಂದಿ ಧರ್ಮರ ಮಠದ ಷಣ್ಮುಖಪ್ಪಜ್ಜನವರು ನೇತೃತ್ವ ವಹಿಸಿದ್ದರು. ಜಗದೀಶ ಕರಡಿ, ಆರ್.ಎಂ. ಪಾಟೀಲ, ಪಿ.ಎಸ್. ಅಣಗೌಡ್ರ, ವಿ.ವಿ. ಲಗುಬಗಿ, ಶವಣ್ಣ ಸೂಡಿ, ವಿ.ಎ. ಕಂಬಳಿ, ವೀರನಗೌಡ ಪಾಟೀಲ, ಡಿ.ವಿ. ಕೊಪ್ಪದ, ಸೋಮಶೇಖರಪ್ಪ ಜಂಗಣ್ಣವರ, ಬಸಪ್ಪ ಅಣಗೌಡ್ರ, ಶಂಕ್ರಪ್ಪ ರೊಟ್ಟಿಗವಾಡ, ಬಸವರಾಜ ಅಣಗೌಡ್ರ, ಐ.ಎಚ್. ಬಿಚ್ಚೂರ ಇತರರಿದ್ದರು.