ಸಾವನದುರ್ಗ ಬಳಿಯೂ ಕಾಡಾನೆ ಹಾವಳಿ

ಮಾಗಡಿ: ತಾಲೂಕಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು ಸಾವನದುರ್ಗ ಅರಣ್ಯ ಪ್ರದೇಶ ವ್ಯಾಪ್ತಿಯ ಮತ್ತ ಗ್ರಾಮದಲ್ಲಿ ಶನಿವಾರ ರಾತ್ರಿ ಕಾಡಾನೆಗಳ ದಾಳಿಗೆ ರೈತರ ಬೆಳೆ ನಾಶವಾಗಿದೆ.

ಮತ್ತ ಗ್ರಾಮದ ಬೋಮ್ಮೆಗೌಡರ ತೋಟಕ್ಕೆ ಎರಡು ಕಾಡಾನೆಗಳು ನುಗ್ಗಿ, ಮಾವಿನ ಗಿಡ, ತೆಂಗಿನ ಮರ, ಬೋರ್​ವೆಲ್, ಟೊಮ್ಯಾಟೋ, ಹುರುಳಿಕಾಯಿ, ಮಾರಿಗೋಲ್ಡ್, ಸೇವಂತಿಗೆ ಹೂವಿನ ಗಿಡಗಳನ್ನು ನಾಶ ಮಾಡಿದೆ.

ಆನೆ ದಾಳಿಯಿಂದ ಬೆಳೆ ಸಂಪೂರ್ಣ ನಾಶವಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ರೈತ ಬೊಮ್ಮೇಗೌಡ ಅಳಲು ತೋಡಿಕೊಂಡಿದ್ದಾರೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಡುವೆಯೂ ಬೋರ್​ವೆಲ್ ಆಶ್ರಯಿಸಿ ಟೊಮ್ಯಾಟೋ, ಹುರುಳಿಕಾಯಿ ಹಾಗೂ ಹೂವಿನ ಗಿಡಗಳನ್ನು ಬೆಳೆದಿದ್ದೆ. ಫಸಲು ಕೂಡ ಉತ್ತಮವಾಗಿತ್ತು. ಹುರುಳಿ ಕಾಯಿ ಕೆ.ಜಿ.ಗೆ 60 ರೂ., ಟೊಮ್ಯಾಟೋ ಒಂದು ಟ್ರೇಗೆ 800 ರೂ. ಇದೆ. ಈಗ ಬೆಳೆ ಸಂಪೂರ್ಣ ನಾಶವಾಗಿದೆ ಎಂದರು.

ಪ್ರತಿಭಟನೆ ಎಚ್ಚರಿಕೆ: ಸಾಲ ಸೋಲ ಮಾಡಿ ಬೆಳೆದ ಬೆಳೆ ಕೈಸೇರುವ ಮುನ್ನವೇ ನಾಶವಾಗಿದೆ. ನಷ್ಟಕ್ಕೊಳಗಾಗಿರುವ ರೈತರು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಗಳನ್ನು ವಾಪಸ್ ಕಾಡಿಗೆ ಅಟ್ಟುವ ಕೆಲಸಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಇಲಾಖೆ ನಿರ್ಲಕ್ಷ್ಯ: ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ವಿಫಲವಾಗಿದೆ. ಸಾವನದುರ್ಗ ಅರಣ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಗಾರ್ಡ್​ಗಳು ಆನೆಗಳ ಚಲನವಲನದ ರೈತರಿಗೆ ಮುನ್ನೆಚ್ಚರಿಕೆ ನೀಡುತ್ತಿಲ್ಲ. ಆನೆ ಓಡಿಸಲು ಪಟಾಕಿ ನೀಡದೆ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರಾದ ಬಸವರಾಜು, ರೈತ ಮುಖಂಡ ಬೈರೇಗೌಡ, ಚಿಕ್ಕಣ್ಣ, ರಮೇಶ್, ಅಂಬರೀಷ್, ಚಂದ್ರಶೇಖರ್ ಮತ್ತಿತರರು ಆರೋಪಿಸಿದ್ದಾರೆ.

 

ಮೇವು, ನೀರು ಇಲ್ಲದ ಕಾರಣ ಆನೆಗಳು ನಾಡಿಗೆ ಬರುತ್ತಿವೆ. ಸಾವನದುರ್ಗ ಅರಣ್ಯ ವ್ಯಾಪ್ತಿಯಲ್ಲಿ ಆನೆಗಳು ಬಂದಿದ್ದು ಗ್ರಾಮಗಳ ಮೇಲೆ ದಾಳಿ ಮಾಡುತ್ತಿವೆ. ಬೆಳೆ ನಾಶವಾಗಿರುವ ರೈತರಿಗೆ ಶೀಘ್ರ ಪರಿಹಾರ ಬಿಡುಗಡೆ ಮಾಡಲಾಗುವುದು. ಒಂದೊಂದು ಬೆಳೆಗೆ ಒಂದೊಂದು ಬೆಲೆ ನಿಗದಿಯಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದ್ದಾರೆ ಸರ್ಕಾರದಿಂದಲೇ ಪರಿಹಾರ ಬಿಡುಗಡೆ ಆಗಬೇಕು. ರೈತರಿಗೆ ತೊಂದರೆ ಆಗದಂತೆ ಆನೆಗಳನ್ನು ವಾಪಸ್ ಕಾಡಿಗೆ ಕಳಿಸುವ ಕೆಲಸ ಮಾಡಲಾಗುವುದು.

| ತಿಮ್ಮರಾಯಪ್ಪ, ಮಾಗಡಿ ತಾಲೂಕು ವಲಯ ಸಂಕ್ಷರಣಾಧಿಕಾರಿ