More

  ಸಾಲ ಮಾಡಿಯಾದರೂ ಸಂತ್ರಸ್ತರಿಗೆ ಪರಿಹಾರ

  ಕುಮಟಾ: ಪ್ರವಾಹದಿಂದ ರಾಜ್ಯದಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ವಣಕ್ಕೆ 5 ಲಕ್ಷ ರೂ. ನೀಡುವ ಭರವಸೆಯಿಂದ ಹಿಂದೆ ಸರಿಯುವುದಿಲ್ಲ. ಕೇಂದ್ರದಿಂದ 1800 ಕೋಟಿ ರೂ. ನೆರವು ಸಿಕ್ಕಿದೆ. ಇನ್ನೂ ಬೇಕಾದಲ್ಲಿ ಸಾಲ ಮಾಡಿಯಾದರೂ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್. ಅಶೋಕ ತಿಳಿಸಿದರು.

  ಬುಧವಾರ ಕುಮಟಾದ ಡಯಟ್ ಆವಾರದಲ್ಲಿ ಮಿನಿವಿಧಾನಸೌಧ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಅಡಿ ವಿವಿಧೋದ್ದೇಶ ಆಶ್ರಯತಾಣ ಉದ್ಘಾಟನೆ ನೆರವೇರಿಸಿ ಹವ್ಯಕ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

  ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಆಶ್ವಾಸನೆಯಂತೆ ಮೊದಲ ಕಂತಿನ 1 ಲಕ್ಷ ರೂ. ಈಗಾಗಲೇ ವಿತರಿಸಲಾಗಿದೆ. ಎರಡನೇ ಕಂತು ಕೊಡಲು ಸಿದ್ಧರಿದ್ದೇವೆ ಎಂದರು.

  ಹಿಂದೆ ಜಿಲ್ಲಾಧಿಕಾರಿಗಳು ಖಾತೆಯಲ್ಲಿ ಹಣ ಇಲ್ಲ ಎಂದು ಅನುದಾನಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದರು. ಈಗ ವ್ಯವಸ್ಥೆ ಬದಲಾಗಿದೆ. ಸರ್ಕಾರ ಪ್ರತಿ ಜಿಲ್ಲಾಧಿಕಾರಿ ಖಾತೆಯಲ್ಲಿ ಯಾವುದೇ ಸಂದರ್ಭದಲ್ಲಿ ಕನಿಷ್ಠ 5 ಕೋಟಿ ರೂ ಇರಲೇಬೇಕು ಎಂಬ ನಿಯಮ ತಂದು ಹಣಕಾಸು ಒದಗಿಸುತ್ತಿದೆ. ಉ.ಕ. ಜಿಲ್ಲಾಧಿಕಾರಿ ಖಾತೆಯಲ್ಲಿ ಈಗಾಗಲೇ 50 ಕೋಟಿ ರೂ.ಗೂ ಹೆಚ್ಚಿದೆ. ಸಂತ್ರಸ್ತರು ಮನೆ ಕಟ್ಟುವ ಕೆಲಸ ಶೀಘ್ರ ಆರಂಭಿಸಿ ಎಂದರು.

  ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ ಮೃತಪಟ್ಟ ನಾಲ್ವರಿಗೆ 20 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಅಲ್ಲದೆ, 14367 ಹೆ. ಕೃಷಿ ತೋಟಗಾರಿಕೆ ಹಾನಿಯಾಗಿದ್ದು, 13.80 ಕೋಟಿ ರೂ. ಪರಿಹಾರ ಹಣ ಸಂತ್ರಸ್ತರ ಖಾತೆಗೆ ಜಮಾ ಆಗಿದೆ. 546 ಕಿ.ಮೀ. ರಸ್ತೆ ಹಾನಿಯಾಗಿದ್ದು, 8.81 ಕೋಟಿ ರೂ. ಮಂಜೂರಿಯಾಗಿದೆ. ಪ್ರವಾಹ ಪೀಡಿತ ಪ್ರದೇಶದ ತುರ್ತು ಕುಡಿಯುವ ನೀರು ಪೂರೈಕೆಗಾಗಿ 6 ಕಾಮಗಾರಿಗಾಗಿ 88 ಲಕ್ಷ ರೂ. ನೀಡಲಾಗಿದೆ. ಹಾನಿಗೊಳಗಾದ 168 ದೋಣಿಗಳಿಗೆ 41.52 ಲಕ್ಷ ರೂ. ಹಾಗೂ 460 ಬಲೆಗಳ ಹಾನಿಗೆ 57.17 ಲಕ್ಷ ರೂ. ವಿತರಿಸಲಾಗಿದೆ ಎಂದರು.

  ಬಳಿಕ ತಾಲೂಕಿನಲ್ಲಿ ಸರ್ಕಾರದಿಂದ ಉಚಿತವಾಗಿ ಪದವಿ ವಿದ್ಯಾರ್ಥಿಗಳಿಗೆ ನೀಡಲಾಗುವ ಲ್ಯಾಪ್​ಟಾಪ್​ಗಳನ್ನು ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವೇದಿಕೆಯಲ್ಲಿ ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ. ಹರೀಶಕುಮಾರ, ಜಿಪಂ ಸಿಇಒ ಎಂ. ರೋಷನ್, ಜಿಪಂ ಸದಸ್ಯ ರತ್ನಾಕರ ನಾಯ್ಕ, ಗಜಾನನ ಪೈ, ಶ್ರೀಕಲಾ ಭಟ್, ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ಪಿಡಬ್ಲ್ಯುಡಿ ಕಾರವಾರ ವಿಭಾಗೀಯ ಇಂಜಿನಿಯರ್ ಅಶೋಕ ಬರಗುಂಡಿ ಇನ್ನಿತರರು ಇದ್ದರು. ತಹಸೀಲ್ದಾರ್ ಮೇಘರಾಜ ನಾಯ್ಕ ಸ್ವಾಗತಿಸಿದರು. ರವೀಂದ್ರ ಭಟ್ ಸೂರಿ ನಿರೂಪಿಸಿದರು.

  ಜಿಲ್ಲೆಯ ಸಮಸ್ಯೆಯ ಅನಾವರಣ: ಕುಮಟಾದ ಕೆವಿಜಿ ಬ್ಯಾಂಕ್ ವಿಭಾಗೀಯ ಕಚೇರಿ ಸಭಾಭವನದಲ್ಲಿ ಬುಧವಾರ ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್. ಅಶೋಕ, ಸಂಸದ ಅನಂತಕುಮಾರ ಹೆಗಡೆ ಜತೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಜಿಪಂ ಸಿಇಒ ಎಂ. ರೋಷನ್, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಒಂದೆಡೆ ಅರಣ್ಯ, ಇನ್ನೊಂದೆಡೆ ಸಮುದ್ರ, ಗಜನಿ, ಹಿನ್ನೀರು ಪ್ರದೇಶದ ಸೀಮಿತ ಕ್ಷೇತ್ರ ವ್ಯಾಪ್ತಿಯಲ್ಲಿ ಬದುಕು ಕಟ್ಟಿಕೊಂಡಿರುವ, ಚಿಕ್ಕ ಚಿಕ್ಕ ಭೂಮಿ ಹೊಂದಿರುವ ನಿವಾಸಿಗಳಿಗೆ ದಿಕ್ಕೇ ತೋಚದ ಸ್ಥಿತಿ ಇದೆ. ಕಟ್ಟಡ ಇಂಡಸ್ಟಿ್ರ ಸಂಪೂರ್ಣ ಮಲಗುವಂತಾಗಿದೆ ಎಂದು ವಿವರಿಸಿದರು. ಶರಾವತಿ ಎಡ ಹಾಗೂ ಬಲದಂಡೆ ನೆರೆಪೀಡಿತರನ್ನು ಸ್ಥಳಾಂತರಿಸುವ ಬಗ್ಗೆ ಸರ್ಕಾರಕ್ಕೆ ಅರ್ಜಿ ನೀಡಿದ್ದೇವೆ. ಮಂಕಿಯ ಗುಂದದಲ್ಲೂ 25ಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರ ಬಯಸಿವೆ ಎಂದು ಭಟ್ಕಳ ಶಾಸಕ ಸುನೀಲ ನಾಯ್ಕ ಸಚಿವರ ಗಮನ ಸೆಳೆದರು. ಸಚಿವರು ಪ್ರತಿಕ್ರಿಯಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಲಾಗಿದ್ದು, ಸೂಕ್ತ ಕಂದಾಯ ಭೂಮಿಗೆ ಕಾಯಂ ನೆರೆ ಪೀಡಿತರನ್ನು ಸ್ಥಳಾಂತರಿಸಿ ಎಂದರು. ಪ್ರವಾಹ ಹಾನಿ ಮತ್ತು ಪರಿಹಾರ, ಪಿಡಬ್ಲ್ಯುಡಿ ರಸ್ತೆ ಕಾಮಗಾರಿ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಿತು.

  ಅಧಿಕಾರಿಗಳ ಚಪ್ಪಲಿಯೂ ಸವೆಯಬೇಕಿದೆ: ಜಿಲ್ಲಾಧಿಕಾರಿ ಸೇರಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಳ್ಳಿಗಳಲ್ಲಿ ಒಂದು ದಿನ ಉಳಿದು ಜನರ ಸಮಸ್ಯೆ ಅರಿತು ಬಗೆಹರಿಸಬೇಕು ಎಂದು ಈಗಾಗಲೇ ನಿರ್ದೇಶನ ನೀಡಿದ್ದೇವೆ. ಹಿಂದೆ ಅಧಿಕಾರಿಗಳ ಕಚೇರಿಗೆ ಹೋಗಿ ಹೋಗಿ ಜನರ ಚಪ್ಪಲಿ ಸವೆದಿದೆ. ಈಗ ಅಧಿಕಾರಿಗಳ ಚಪ್ಪಲಿಯನ್ನೂ ಸ್ವಲ್ಪ ಸವೆಸಬೇಕಿದೆ ಎಂದು ಸಚಿವ ಆರ್. ಅಶೋಕ ಹೇಳಿದರು.

  ಅಧಿಕಾರಿಗೆ ಗದರಿದ ಸಂಸದ ಹೆಗಡೆ: ಸಭೆಯಲ್ಲಿ ಚತುಷ್ಪಥ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಕುರಿತು ಸಂಸದ ಹೆಗಡೆ ಬೇಸರ ವ್ಯಕ್ತಪಡಿಸಿ ಹೆದ್ದಾರಿ ಪ್ರಾಧಿಕಾರದ ಚತುಷ್ಪಥ ಉಸ್ತುವಾರಿ ಇಂಜಿನಿಯರ್ ನವೀನ್ ಬಳಿ ಕಾರಣ ಕೇಳಿದರು. ಸಮರ್ಪಕ ಉತ್ತರ ಕೊಡುವಲ್ಲಿ ವಿಫಲರಾದ ಹೆದ್ದಾರಿ ಪ್ರಾಧಿಕಾರದ ನವೀನ್​ಗೆ ಗದರಿದ ಸಂಸದರು, ಬೇಜವಾಬ್ದಾರಿ ಉತ್ತರ ನೀಡಲು ಬಂದಿದ್ದೀರಾ, ನಾವಿಲ್ಲಿ ಟೈಮ್ ಪಾಸ್ ಮಾಡಲು ಬಂದಿಲ್ಲ. ಸರಿಯಾದ ಉತ್ತರ ಕೊಡಿ. ನಿಮ್ಮ ಮೇಲಧಿಕಾರಿಗಳು ಬರುವವರೆಗೂ ಸಭೆ ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಂದಿನ 60 ದಿನದೊಳಗೆ ಎಲ್ಲ ಅಗತ್ಯ ಕೆಲಸಗಳೂ ಮುಗಿಯಬೇಕು. ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಪ್ರಗತಿ ತಿಳಿಸಬೇಕು. ಪ್ರಾಧಿಕಾರಕ್ಕೆ ಕಳುಹಿಸಲಾದ ಭೂಸ್ವಾಧೀನ ಇನ್ನಿತರ ಪ್ರಸ್ತಾವನೆಗಳ ಸ್ಥಿತಿ-ಗತಿಯ ಕುರಿತು ಜ. 27ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಪೂರ್ಣ ವರದಿ ಒಪ್ಪಿಸುವಂತೆ ತಾಕೀತು ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts