ಸಾಲ ಮನ್ನಾ ಮಾಡದಿದ್ದರೆ ಸೋಲಿಸುತ್ತೇವೆ

ಹಾವೇರಿ: ರಾಜ್ಯವಾಗಲಿ, ಕೇಂದ್ರವಾಗಲಿ ಒಮ್ಮೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲವಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರೈತರೆಲ್ಲ ನಿಮ್ಮ ಚರಮಗೀತೆ ಬರೆಯಬೇಕಾಗುತ್ತದೆ. ರೈತರು ಸ್ವಾರ್ಥಕ್ಕಾಗಿ ಸಾಲ ಮಾಡಿಲ್ಲ, ದೇಶದ ಜನರ ಹೊಟ್ಟೆ ತುಂಬಿಸಲು ಮಾಡಿದ್ದು. ಅದನ್ನು ನೀವೇ ಹೊರಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ ಎಚ್ಚರಿಸಿದರು.

ನಗರದ ಮುನ್ಸಿಪಲ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಫೆಬ್ರವರಿಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ಕೃಷಿಗೆ ಎಷ್ಟು ಹಣವಿಡುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ರೈತರ ಸಾಲವು ರಾಜಕೀಯ ಪಕ್ಷಗಳ ಪಾಪದ ಪಿಂಡ. ದೇಶದ ಜನರ ಹೊಟ್ಟೆ ತುಂಬಿಸಲು ಬೆಳೆ ಬೆಳೆಯಿರಿ ಎಂದು ಬ್ಯಾಂಕ್​ಗಳಿಂದ ಸಾಲ ಕೊಡಿಸಿದ್ದೀರಿ. ಬರ, ಸೂಕ್ತ ಬೆಲೆ ಕೊರತೆಯಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ, ಒಮ್ಮೆ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ ಅವರ ಋಣ ತೀರಿಸಬೇಕು ಎಂದರು.

ರೈತ ಹೋರಾಟವೆಂದರೆ ಬರೀ ಅಧಿಕಾರಿಗಳ ವಿರುದ್ಧವಾಗಬಾರದು. ಅದರಿಂದ ಪ್ರಯೋಜನವೂ ಇಲ್ಲ. ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವ ಕಾನೂನು ಮಾಡುವವರ ವಿರುದ್ಧ ಹೋರಾಡಬೇಕು. ವಿಧಾನಸಭೆ, ಲೋಕಸಭೆಗಳಿಗೆ ಬಿಸಿ ಮುಟ್ಟಿಸಬೇಕು. ನಮ್ಮ ಸಮಸ್ಯೆಗೆ ಸ್ಪಂದಿಸದವರನ್ನು ವಿಧಾನಸಭೆ, ಲೋಕಸಭೆಯಿಂದ ಕೆಳಗಿಳಿಸಬೇಕು. ಅದಕ್ಕಾಗಿ ರೈತ ಸಂಘದಿಂದ ಜಾಗೃತಿ ಮೂಡಿಸಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಬೇಕು ಎಂದರು.

ರೈತರು ಹೋರಾಟ ಮಾಡಿದಾಗ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸುವುದಿಲ್ಲ. ರಾಜಕಾರಣಿಗಳು, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸುತ್ತಾರೆ. ರೈತರೊಂದಿಗೆ ಒಳ್ಳೆಯವರಂತೆ ನಟಿಸಿ, ರೈತರ ಮೇಲೆಯೇ ಪ್ರಕರಣ ದಾಖಲಿಸಿ ರಾಜಕೀಯ ತೆವಲು ತೀರಿಸಿಕೊಳ್ಳುವ ಕೆಟ್ಟ ರಾಜಕಾರಣಿಗಳ ಬಗ್ಗೆ ರೈತರು ಎಚ್ಚರದಿಂದ ಇರಬೇಕು ಎಂದರು.

ರೈತ ಸಂಘದ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತ ಸಂಘದ ಮುಖಂಡರಾದ ನಂದಿನಿ ಜಯರಾಂ, ಚುಕ್ಕಿ ನಂಜುಂಡಸ್ವಾಮಿ, ಜೆ.ಎನ್. ವೀರಸಂಗಯ್ಯ, ಪಚ್ಚೆ ನಂಜುಂಡಸ್ವಾಮಿ, ನರಸಿಂಹಮೂರ್ತಿ ದೊಡ್ಡಪಾಳ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಅಕ್ಕಿ, ಇತರರಿದ್ದರು. ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಬಳ್ಳಾರಿ ನಿರ್ವಹಿಸಿದರು.

ರೈತರ ನಾಶಕ್ಕೆ ವ್ಯವಸ್ಥಿತ ಜಾಲ

ರೈತರ ಸಾಲ ಮನ್ನಾಕ್ಕೆ ರಾಜಕೀಯ ಇಚ್ಛಾಶಕ್ತಿಯ ಅವಶ್ಯಕತೆಯಿದೆ. ಕುಮಾರಸ್ವಾಮಿ ಸಾಲ ಮನ್ನಾ ವಿಚಾರದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ದಿಟ್ಟ ಕಾನೂನು ಮಾಡುವ ಇಚ್ಛಾಶಕ್ತಿ ಇಲ್ಲದಿದ್ದರೆ ಅಧಿಕಾರ ಬಿಟ್ಟು ಹೊರಬನ್ನಿ ಎಂದು ಅವರಿಗೆ ನೇರವಾಗಿ ಹೇಳಿದ್ದೇನೆ. ಕೃಷಿಯಲ್ಲಿ ಲಾಭ ಇಲ್ಲದಿದ್ದರೆ ಇಂದು ಕೃಷಿ ಭೂಮಿಗೆ ಬೆಲೆಯೇ ಇರಬಾರದಿತ್ತು. ವಾಸ್ತವದಲ್ಲಿ ಅದರ ಬೆಲೆ ಗಗನಕ್ಕೇರಿದೆ. ಅದನ್ನು ಕೊಳ್ಳುವವರು ಎಲ್ಲಿಂದಲೋ ಬರುತ್ತಿದ್ದಾರೆ. ರೈತರಿಂದ ಭೂಮಿ ಕಿತ್ತುಕೊಂಡು ಕಂಪನಿಗಳ ಗುಲಾಮರನ್ನಾಗಿಸುವ ವ್ಯವಸ್ಥಿತ ಜಾಲ ದೇಶದಲ್ಲಿ ಕೆಲಸ ಮಾಡುತ್ತಿದೆ. ನಮ್ಮಲ್ಲಿನ ಕೃಷಿ ಜ್ಞಾನ, ಬೀಜ, ಭೂಮಿ ಕಿತ್ತುಕೊಳ್ಳುವ ಕಾನೂನುಗಳು ಬರುವ ಸಾಧ್ಯತೆಯಿದೆ. ರೈತರು ಎಚ್ಚರವಾಗಿರಬೇಕು ಎಂದರು.

ದೇಸಿ ಬೀಜ, ಗೊಬ್ಬರ ವಿದೇಶಿ ಕಂಪನಿಗಳ ಪಾಲು

ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತ ಕಿಸಾನ್ ಮುಕ್ತ ಭಾರತ ಮಾಡಲು ಹೊರಟಿದ್ದಾರೆ ಎಂದು ರೈತ ಸಂಘ, ಹಸಿರು ಸೇನೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಂದಿನಿ ಜಯರಾಮ ಹೇಳಿದರು.

ನಗರದ ಮುನ್ಸಿಪಲ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಅವರು ಮಾತನಾಡಿ, ಮೋದಿಯವರು ಪ್ರಧಾನಿಯಾದ ಬಳಿಕ ವಿದೇಶಿ ಕಂಪನಿಗಳಿಗೆ ಭಾರತವನ್ನು ಮಾರುತ್ತಿದ್ದಾರೆ. ರೈತರು ಉಪಯೋಗಿಸುವ ಗೊಬ್ಬರ, ಬೀಜ, ಬೆಳೆವಿಮೆ, ಮಾರುಕಟ್ಟೆ ಎಲ್ಲವೂ ವಿದೇಶಿ ಕಂಪನಿಗಳ ಪಾಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಭಾರತದಲ್ಲಿ ಕೃಷಿಯತ್ತ ಯಾರು ಹೊರಳುವುದಿಲ್ಲ ಎಂದರು.

ರಾಜ್ಯ ಸರ್ಕಾರ ರೈತರ ವಿರೋಧಿಯಾಗಿದೆ. ಹಾಲಿನ 2 ರೂ. ಪ್ರೋತ್ಸಾಹಧನವನ್ನು ಸರಿಯಾಗಿ ನೀಡುತ್ತಿಲ್ಲ. ರಾಜ್ಯದಲ್ಲಿ ನಿತ್ಯ 82 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. 2 ರೂ. ನಂತೆ ರೈತರಿಗೆ ಹಾನಿಯಾದರೆ ದಿನಕ್ಕೆ 1.64 ಕೋಟಿ ರೂ. ನಷ್ಟವಾಗುತ್ತದೆ. ಬೆಳೆವಿಮೆಯಲ್ಲಿ ಬಹುದೊಡ್ಡ ಮೋಸ ರೈತರಿಗಾಗುತ್ತಿದೆ. ಮೋದಿಯವರ ಆಪ್ತ ಕಂಪನಿಗಳು ವಿಮೆ ಜವಾಬ್ದಾರಿ ವಹಿಸಿಕೊಂಡಿವೆ. ಕಳೆದ ವರ್ಷ ಕೃಷಿ ಕ್ಷೇತ್ರದಲ್ಲಿ 22,347 ಕೋಟಿ ರೂ. ವಿಮೆ ತುಂಬಲಾಗಿತ್ತು. ಅದರಲ್ಲಿ 8 ಸಾವಿರ ಕೋಟಿ ರೂ. ಬೆಳೆನಷ್ಟದ ವಿಮೆ ಕೊಡಲಾಗಿದೆ. ಇನ್ನುಳಿದ ಸಾವಿರಾರು ಕೋಟಿ ರೂ. ವಿಮೆ ಕಂಪನಿಗಳ ಪಾಲಾಗಿದೆ ಎಂದು ದೂರಿದರು.

ರೈತ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಶೇ. 70ರಷ್ಟಿದ್ದ ಕೃಷಿಕರು ಈಗ ಶೇ. 47 ಇದ್ದಾರೆ. ಇವರಿಗೆಲ್ಲ ಉದ್ಯೋಗ ಕಲ್ಪಿಸಲಾಗಿಲ್ಲ. ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಶತಕೋಟಿ ಶ್ರೀಮಂತರ ಪಟ್ಟಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ ಎಂದರು.

ನರಸಿಂಹಮೂರ್ತಿ ದೊಡ್ಡಪಾಳ್ಯ, ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ರೈತರು ನನ್ನ ಬೆಳೆ ನನ್ನ ಬೆಲೆ ಚಳವಳಿ ಆರಂಭಿಸಬೇಕು. ಇದಕ್ಕೆ ರೈತ ಸಂಘ ಸಾಥ್ ನೀಡಬೇಕು ಎಂದರು.

ಸಮಾವೇಶದಲ್ಲಿ ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲೆಯ ರೈತರ 14 ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಯಿತು.

ಬೃಹತ್ ಮೆರವಣಿಗೆ: ನಗರದಲ್ಲಿ ಬೆಳಗ್ಗೆ 11.30ರಿಂದ ಮಧ್ಯಾಹ್ನ 1ರವರೆಗೆ ರೈತರ ಬೃಹತ್ ಮೆರವಣಿಗೆ ನಡೆಯಿತು. ಹಾನಗಲ್ಲ ರಸ್ತೆಯ ಜಾನುವಾರು ಮಾರುಕಟ್ಟೆಯಿಂದ ಹೊಸಮನಿ ಸಿದ್ದಪ್ಪ ವೃತ್ತ, ಜೆ.ಪಿ. ಸರ್ಕಲ್, ಜೆ.ಎಚ್. ಪಟೇಲ್ ವೃತ್ತದ ಮೂಲಕ ಸಾಗಿದ ಮೆರವಣಿಗೆ ಮುನ್ಸಿಪಲ್ ಮೈದಾನ ತಲುಪಿತು.

ಜಾನಪದ ತಂಡಗಳು, ಜಾಂಜ್ ಮೇಳ, ಕುಂಭಮೇಳ ಮತ್ತಿತರ ಕಲಾ ತಂಡಗಳು, ಜಿಲ್ಲೆಯ ಸಾವಿರಾರು ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು.