ಸಾಲ ಮನ್ನಾ ಪೂರ್ಣ ಪರಿಹಾರವಲ್ಲ

ಧಾರವಾಡ: ಕೃಷಿ ಕ್ಷೇತ್ರದ ಸಂಕಷ್ಟಗಳಿಗೆ ಸಾಲ ಮನ್ನಾ ಪೂರ್ಣ ಪರಿಹಾರವಲ್ಲ. ಯೋಜನಾಬದ್ಧ, ವ್ಯವಹಾರಿಕ, ವ್ಯವಸ್ಥಿತ ಹಾಗೂ ವೈವಿಧ್ಯತೆಯಿಂದ ಕೂಡಿದ ಒಕ್ಕಲುತನದಿಂದ ದೇಶ ವಿಶ್ವಕ್ಕೆ ಆಹಾರ ಉಣಿಸಬಹುದು.

ಧಾರವಾಡದಲ್ಲಿ ನಡೆಯತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಕೃಷಿ ಕ್ಷೇತ್ರದ ಸವಾಲುಗಳು ಗೋಷ್ಠಿಯಲ್ಲಿ ತಜ್ಞರು ರೈತರಿಗೆ ಈ ಸಲಹೆಗಳನ್ನು ನೀಡಿದರು.

ಸಾಲ ಮನ್ನಾ ಎಂಬುದು ಸರ್ಕಾರಿ ನೌಕರರಿಗೆ ಆಗಾಗ ನೀಡುವ ಬೋನಸ್, ಇನ್​ಸೆಂಟಿವ್ ಇದ್ದಂತೆ. ರಾಜಕಾರಣಿಗಳು ವೋಟ್ ಬ್ಯಾಂಕಿಗಾಗಿ ನಡೆಸುವ ಗಿಮಿಕ್. ಇದು ರೈತರ ಸಂಕಷ್ಟಗಳಿಗೆ ಎಂದಿಗೂ ಶಾಶ್ವತ ಪರಿಹಾರ ಆಗಲಾರದು.

ದೆಹಲಿಯಲ್ಲಿ ರೈತನೊಬ್ಬ ಅಣಬೆ ಬೆಳೆದು ವಾರ್ಷಿಕ 12 ಕೋಟಿ ರೂ. ಆದಾಯ ಗಳಿಸುತ್ತಾನೆ. ಇಲ್ಲೇ ಹತ್ತಿರದ ಬೆಳಗಾವಿಯಲ್ಲಿ ಮಹಿಳೆಯೊಬ್ಬರು ಅರ್ಧ ಎಕರೆ ಜಮೀನಿನಲ್ಲಿ ಆರ್ಕಿಡ್ ಬೆಳೆದು ವರ್ಷಕ್ಕೆ 70 ಲಕ್ಷ ರೂ. ಆದಾಯ ಗಳಿಸಿದ್ದಾರೆ. ವ್ಯವಸ್ಥಿತ ವ್ಯಾವಹಾರಿಕವಾಗಿ ಒಕ್ಕಲುತನ ಮಾಡಿದರೆ ಸಂಪತ್ತು ಗಳಿಸಬಹುದು ಎಂಬುದಕ್ಕೆ ಇವು ದೃಷ್ಟಾಂತಗಳಾಗಿವೆ ಎಂದು ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃವಿವಿ ವಿಶ್ರಾಂತ ಕುಲಪತಿ ಡಾ. ಎಸ್.ಎ. ಪಾಟೀಲ ಹೇಳಿದರು.

ರೈತರು ಹೊಲದಲ್ಲಿ ಹೆಚ್ಚಿನ ಶ್ರಮಹಾಕಿ ಕೆಲಸ ಮಾಡಬೇಕು. ಒಂದು ಅಧ್ಯಯನದ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ವರ್ಷವಿಡೀ ರೈತರು ಕೇವಲ 96 ಗಂಟೆ ಕೆಲಸ ಮಾಡುತ್ತಾರಂತೆ. ನಮ್ಮ ಹೊಲದಲ್ಲಿ ನಾವೇ ಕೆಲಸ ಮಾಡಿದರೆ, ಹೆಚ್ಚಿನ ಆದಾಯ ಗಳಿಸಬಹುದು ಎಂದು ಸಲಹೆ ನೀಡಿದರು.

ಸಾಲ ಮನ್ನಾ ಸಾಧಕ ಬಾಧಕಗಳು ಕುರಿತು ಮಾತನಾಡಿದ ಎಸ್.ಬಿ. ಮನಗೂಳಿ ಮಾತನಾಡಿ, ರಾಮರಾಜ್ಯ ಕಲ್ಪನೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯೇ? ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬ ಘೊಷಣೆಯಂತೆ ವಿಕಾಸದಲ್ಲಿ ರೈತರಿಗೆ ಪಾಲುದಾರಿಕೆ ಇಲ್ಲವೇ? ಆತ್ಮಹತ್ಯೆಗೆ ಕಾರಣವಾಗಿರುವ ಅಂಶಗಳನ್ನು ಗಮನಿಸಿದರೆ ಸಾಲ ಮನ್ನಾ ಬೇಕಾಗಿಲ್ಲ ಎಂಬುದು ರೈತರ ಆಭಿಪ್ರಾಯವಾಗಿದೆ ಎಂದು ನಾನು ಭಾವಿಸಿದ್ದೇನೆ. ಸಾಲ ಮನ್ನಾವು ಎನ್​ಪಿಎ ಪ್ರಮಾಣ ಹೆಚ್ಚಿಸುತ್ತದೆ. ಕಟಬಾಕಿದಾರರನ್ನು ಸೃಷ್ಟಿಸುತ್ತದೆ ಎಂದರು.

ರೈತ ಮುಖಂಡ ಮಾರುತಿ ಮಾನ್ಪಡೆ ಮಾತನಾಡಿ, 2000ರಲ್ಲಿ ಕೇಂದ್ರ ಸರ್ಕಾರ ಹಾಗೂ 2006ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಕೃಷಿ ನೀತಿಗಳು ರೈತರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಿಲ್ಲ. ಬದುಕೇ ಬೇಡವೆಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ನೋವಿನ ಸಂಗತಿ. ಫಸಲ್ ಭಿಮಾ ಯೋಜನೆ ವಿಮಾ ಕಂಪನಿಗಳಿಗೆ ವರವಾಗಿದೆ. ರೈತರಿಗೆ ಮಾರಕವಾಗಿದೆ. ಸಮಗ್ರ ಕೃಷಿ ನೀರು ಜಾರಿಗೆ ಬರಬೇಕು. ಕೃಷಿ ಸಬ್ಸಿಡಿ ಹೆಚ್ಚಾಗಬೇಕು ಎಂದರು.

ಆನಂದತೀರ್ಥ ಪ್ಯಾಟಿ ಅವರು ಪರಿಹಾರ ಕೃಷಿ ವಿಧಾನಗಳ ಕುರಿತು ಮಾತನಾಡಿದರು. ಪ್ರಕಾಶ ಗಿರಿಮಲ್ಲನವರ ಸ್ವಾಗತಿಸಿದರು. ಅಮೃತ ಮಡಿವಾಳರ ನಿರೂಪಿಸಿದರು. ರಾಘವೇಂದ್ರ ಬಳ್ಳಾರಿ ವಂದಿಸಿದರು. ಎಂ.ಕೆ. ರಂಗಪ್ಪ ಉಪಸ್ಥಿತರಿದ್ದರು.