ಸಾಲ ಮನ್ನಾದಲ್ಲಿ ಸರ್ಕಾರಕ್ಕಿಲ್ಲ ಬದ್ಧತೆ

ಕೋಲಾರ: ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿ ರೈತರ ಸಾಲ ಮನ್ನಾ ಮಾಡುವುದಾಗಿ ಉತ್ಸಾಹದ ಮಾತನಾಡಿದ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲು ಬದ್ಧತೆ ತೋರುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ಮುಳಬಾಗಿಲು ತಾಲೂಕಿನಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಬಂದಿರುವ ಅವರು, ಶುಕ್ರವಾರ ಕಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತರ ಸಾಲ ಮನ್ನಾ ವಿಚಾರದಲ್ಲಿ ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ದೂಷಿಸುವ ಬದಲು ಸಾಲ ಮನ್ನಾ ಮಾಡಲು ಕ್ರಿಯಾಶೀಲತೆಯಿಂದ ಕೆಲಸ ಮಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕಿವಿಮಾತು ಹೇಳಿದರು.

ಸಹಕಾರ ಸಂಘಗಳಿಂದ ಪಡೆದ ಸಾಲ ಮಾತ್ರ ಮನ್ನಾ ಮಾಡಲಾಗುತ್ತಿದೆ. ಆದರೆ ವಾಣಿಜ್ಯ ಬ್ಯಾಂಕ್​ಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡಿಸಲು ಕಾಳಜಿ ತೋರಬೇಕೆಂದು ತಿಳಿಸಿದರು.

ಇಡೀ ರಾಜ್ಯದಲ್ಲಿ ಬರದ ಛಾಯೆ ಗಂಭೀರವಾಗಿದೆ. ಸಚಿವರು ರಾಜ್ಯಪ್ರವಾಸ ಮಾಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಕೆಸಿ ವ್ಯಾಲಿ ಮೂಲಕ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಅಭಿವೃದ್ಧಿಪಡಿಸಲು ಸರ್ಕಾರ ಈಗಾಗಲೇ 1400 ರೂ. ಖರ್ಚು ಮಾಡಿದೆ. ನೀರಿನ ಗುಣಮಟ್ಟದ ಬಗ್ಗೆ ಜನರು ಆತಂಕಗೊಂಡಿರುವುದರಿಂದ ಸರ್ಕಾರ 3ನೇ ಹಂತದ ಶುದ್ಧೀಕರಣ ಘಟಕಕ್ಕೆ ಹಣ ಬಿಡುಗಡೆ ಮಾಡಬೇಕು, ಸರ್ಕಾರದ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸುವಂತೆ ಯಡಿಯೂರಪ್ಪ ಅವರನ್ನು ಕೋರಿದರು.

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿಭಾಯಿಸಲು ಕೈಗೊಂಡಿರುವ ಕ್ರಮಗಳ ಕುರಿತು ತಂಡಕ್ಕೆ ಡಿಸಿ ಜೆ.ಮಂಜುನಾಥ್ ಮಾಹಿತಿ ನೀಡಿ, ಸರ್ಕಾರ ಈಗಾಗಲೇ ಬರ ನಿರ್ವಹಣೆಗೆ ನೀಡಿರುವ ಹಣವನ್ನು ಅಗತ್ಯ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಮೇವಿಗೆ ಕೊರತೆ ಆಗದಂತೆ 70,000 ಮಿನಿ ಕಿಟ್​ಗಳನ್ನು ಎಂಪಿಸಿಎಸ್ ಮೂಲಕ ರೈತರಿಗೆ ನೀಡಲಾಗಿದೆ. ಮೇವಿಗೆ ಕೊರತೆ ಆಗದಂತೆ ಪ್ರತಿ ತಾಲೂಕಿನಲ್ಲಿ ತಲಾ 1 ಮೇವು ಬ್ಯಾಂಕ್ ತೆರೆಯಲು ಉದ್ದೇಶಿಸಿರುವುದಾಗಿ ವಿವರಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಎಮ್ಮೆಲ್ಸಿ ರವಿಕುಮಾರ್, ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಎಮ್ಮೆಲ್ಸಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಶಾಸಕರಾದ ಎ.ನಾಗರಾಜು, ಎನ್.ಸಂಪಂಗಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಸಚ್ಚಿದಾನಂದ ಮೂರ್ತಿ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಜಿಪಂ ಸದಸ್ಯರಾದ ಅಶ್ವಿನಿ, ಮಹೇಶ್, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ವಕ್ತಾರ ಅಲ್ಲಿಕುಂಟೆ ಶ್ರೀನಿವಾಸ್, ಗ್ರಾಮಾಂತರ ಘಟಕ ಅಧ್ಯಕ್ಷ ಬೈಚೇಗೌಡ, ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ, ಮಹಿಳಾ ಮೋರ್ಚಾದ ಪ್ರಮೀಳಾ ಮಲ್ಲಿಕಾರ್ಜುನ್, ಮಮತಾ, ಅರುಣಮ್ಮ ಇದ್ದರು.

ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ: ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಮಳೆಯಿಲ್ಲದೆ ಸಂಪೂರ್ಣ ಒಣಗಿವೆ. ಜನಜಾನುವಾರು ನೀರಿಗೆ ಪರದಾಡುವಂತಾಗಿದೆ. ಸರ್ಕಾರ ಪ್ರತಿ ಕ್ಷೇತ್ರಕ್ಕೆ ಬಿಡುಗಡೆ ಮಾಡಿರುವ 1.25 ಕೋಟಿ ರೂ.ಗಳನ್ನು ಸಮರ್ಪಕವಾಗಿ ಬಳಸಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕೆಂದು ಯಡಿಯೂರಪ್ಪ ತಾಕೀತು ಮಾಡಿದರು.