ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಎಷ್ಟು ಮುಖ್ಯ?

ನಾನು ವಿಜಯವಾಣಿ ಮನಿ ಮಾತು ಅಂಕಣದ ಅಭಿಮಾನಿ. ಪತಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದರ ಕ್ರೆಡಿಟ್ ಕಾರ್ಡ್ ಪಡೆದುಕೊಂಡರು. ಅದನ್ನು ಬಳಸುವುದು ಹೇಗೆ ಎನ್ನುವ ಬಗ್ಗೆ ಅವರಿಗೆ ಅರಿವಿರಲಿಲ್ಲ. ಆರು ತಿಂಗಳ ಕಾಲ ಕಾರ್ಡನ್ನು ಆಕ್ಟಿವೇಟ್ ಮಾಡದೆ ಇಟ್ಟಿದ್ದರು. ಆದರೂ ನಮಗೆ ಪ್ರತಿ ತಿಂಗಳು ಬಿಲ್ ಬರುತ್ತಿತ್ತು. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಕೇಳಿದರೆ ಬಾಕಿ ಪಾವತಿಸಿ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವಂತೆ ಹೇಳುತ್ತಿದ್ದರು. ನಮ್ಮ ಮಗನ ಓದಿಗೆ ಸಾಲದ ಅಗತ್ಯವಿತ್ತು. ಇದರಿಂದಾಗಿ ನಮಗೆ ಸಾಲ ಕೂಡ ಸಿಗಲಿಲ್ಲ. ನಾವು ಕ್ರೆಡಿಟ್ ಕಾರ್ಡ್ ಬಳಸದಿದ್ದರೂ ಶುಲ್ಕ ಕಟ್ಟಬೇಕೆ? ದಯವಿಟ್ಟು ಈ ಸಮಸ್ಯೆ ಪರಿಹಾರಕ್ಕೆ ಮಾರ್ಗದರ್ಶನ ಮಾಡಿ.

-ಹೆಸರು ಊರು ಬೇಡ

ಮನಿ ಮಾತು ಅಂಕಣದ ಮೇಲೆ ನೀವಿಟ್ಟಿರುವ ವಿಶ್ವಾಸಕ್ಕೆ ಧನ್ಯವಾದ. ಮೊದಲನೆಯದಾಗಿ ನಿಮ್ಮ ಪತಿ ಕ್ರೆಡಿಟ್ ಕಾರ್ಡ್​ನ ಪೂರ್ವಾಪರ ತಿಳಿಯದೆ ಅದನ್ನು ಖರೀದಿಸಿದ್ದು ದೊಡ್ಡ ತಪ್ಪು. ಕಾನೂನಿನ ಅರಿವಿನ ಕೊರತೆ ಕೂಡ ಶಿಕ್ಷಾರ್ಹ ಅಪರಾಧ ಎಂದು ನಮ್ಮ ಕಾನೂನು ಹೇಳುತ್ತದೆ! ಯಾರೋ ಸೇಲ್ಸ್ ಮ್ಯಾನ್ ಹೇಳಿದ ಎಂಬ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಖರೀದಿಸುವುದು ವಿವೇಚನೆ ಇಲ್ಲದ ನಿರ್ಧಾರವಾಗುತ್ತದೆ. ಆ ತಪ್ಪಾದ ಮೇಲೆ ನಿರ್ವಹಣಾ ಶುಲ್ಕ ಪಾವತಿಸಬೇಕು ಎಂಬ ಸೂಚನೆ ಬಂದಾಗಲಾದರೂ ನೀವು ಎಚ್ಚೆತ್ತುಕೊಳ್ಳಬಹುದಿತ್ತು. ಆದರೆ, ಆಗಲೂ ನೀವು ಎಡವಿದ್ದೀರಿ. ಈಗ ಆ ಬಾಕಿ ಶುಲ್ಕದ ಹಣವನ್ನೆಲ್ಲ ಪಾವತಿಸಿ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿಸಲು ಅರ್ಜಿ ಸಲ್ಲಿಸುವುದು ಸರಿಯಾದ ನಿರ್ಧಾರವಾಗುತ್ತದೆ. ಕ್ರೆಡಿಟ್ ಕಾರ್ಡ್​ನ ಶುಲ್ಕದ ಬಾಕಿ ಪಾವತಿಸದಿದ್ದರೆ ನಿಮಗೆ ಬ್ಯಾಂಕ್​ಗಳು ಭವಿಷ್ಯದಲ್ಲಿ ಸಾಲ ನೀಡುವುದು ಕಷ್ಟಸಾಧ್ಯ. ಇದಲ್ಲದೆ ಕ್ರೆಡಿಟ್ ಕಾರ್ಡ್ ಪೇಮೆಂಟ್ ಬಾಕಿ ಉಳಿಸಿಕೊಂಡರೆ ಅದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಈಗ ಕ್ರೆಡಿಟ್ ಕಾರ್ಡ್​ನ ಶುಲ್ಕ ಪಾವತಿಸಿ ತಪ್ಪನ್ನು ಸರಿಪಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸುವ ಜತೆಗೆ ಸಾಲ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನೆನಪಿನಲ್ಲಿಡಿ, ಭವಿಷ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಕೊಳ್ಳುವುದಾದರೆ ಅದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡು ಮುನ್ನಡೆಯಿರಿ. ಕ್ರೆಡಿಟ್ ಕಾರ್ಡ್ ಉಚಿತ, ಯಾವುದೇ ಶುಲ್ಕಗಳಿಲ್ಲ ಎಂದು ಬ್ಯಾಂಕ್ ಏಜೆಂಟ್​ಗಳು ಬಣ್ಣಬಣ್ಣದ ಮಾತುಗಳನ್ನಾಡಿದರೆ ನಂಬಬೇಡಿ. ಬಹುತೇಕ ಕಡೆ ವ್ಯಾಪಿಸಿರುವಂತೆ ಬ್ಯಾಂಕಿಂಗ್, ಇನ್ಶೂರೆನ್ಸ್, ಹೂಡಿಕೆ, ಮ್ಯೂಚುವಲ್ ಫಂಡ್ ಸೇರಿ ಹಣಕಾಸು ಉತ್ಪನ್ನಗಳ ಮಾರಾಟ ವಲಯದಲ್ಲಿ ಮೋಸದ ಮಾರಾಟವೂ ಅವ್ಯಾಹತವಾಗಿದೆ. ಯಾವುದೇ ಹೂಡಿಕೆ ಮಾಡುವಾಗ ಸಾಕಷ್ಟು ಲೆಕ್ಕಾಚಾರ ಮಾಡಿ ಮುನ್ನಡೆಯಿರಿ.

ನಾನು ಮತ್ತು ನನ್ನ ಪತ್ನಿ ಸರ್ಕಾರಿ ನೌಕರರಾಗಿದ್ದು, ಗೃಹ ಸಾಲ ಪಡೆಯಲು ನಿರ್ಧರಿಸಿದ್ದೇವೆ. ಸಾಲ ಪಡೆಯಲು ಯಾವ ಬ್ಯಾಂಕ್ ಉತ್ತಮ ತಿಳಿಸಿ.

-ಸತೀಶ್ ಡಿ.ಎಸ್. ದಾವಣಗೆರೆ

ಗೃಹ ಸಾಲ ಪಡೆಯಲು ಇಂಥದ್ದೇ ಬ್ಯಾಂಕ್ ಒಳಿತು ಎಂದು ಹೇಳುವುದು ಸರಿಯಾದ ಕ್ರಮವಲ್ಲ. ಉತ್ತಮ ಸೇವೆ ನೀಡುವ, ಕಡಿಮೆ ಬಡ್ಡಿದರಕ್ಕೆ ಸಾಲ ನೀಡುವ ಹಾಗೂ ಅತ್ಯಂತ ಕಡಿಮೆ ಪರಿಷ್ಕರಣಾ ಶುಲ್ಕ ವಿಧಿಸುವ ಯಾವುದಾದರೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕ್​ನ ಆಯ್ಕೆಗೆ ಕಡಿಮೆ ಬಡ್ಡಿದರ, ಉತ್ತಮ ಸೇವೆ ಮತ್ತು ಕಡಿಮೆ ಶುಲ್ಕ ನಿಗದಿಯೇ ಉತ್ತಮ ಮಾನದಂಡಗಳು. ಗೃಹ ಸಾಲದ ಮೇಲಿನ ಬಡ್ಡಿದರವನ್ನು ನಿಗದಿ ಮಾಡುವಾಗ ಬ್ಯಾಂಕ್​ಗಳು ಕ್ರೆಡಿಟ್ ಸ್ಕೋರ್ (ಸಿಬಿಲ್ ಸ್ಕೋರ್) ಅನ್ನು ಪರಿಗಣಿಸುತ್ತವೆ. ನೀವು ಸಾಲ ಮಾಡಿದ್ದರೆ ಕ್ರೆಡಿಟ್ ಸ್ಕೋರ್ ಅದರ ಇತಿಹಾಸ ಮತ್ತು ಮರುಪಾವತಿ ಮಾಹಿತಿಯನ್ನು ತಿಳಿಸುತ್ತದೆ. ನಿಮ್ಮ ಸಾಲ ಮರುಪಾವತಿಯ ಶಿಸ್ತಿನ ಆಧಾರದ ಮೇಲೆ ಕ್ರೆಡಿಟ್ ಸ್ಕೋರ್ ಇರುತ್ತದೆ.

ನಾನು ಖಾಸಗಿ ಕಂಪನಿ ಉದ್ಯೋಗಿ. 12 ವರ್ಷಗಳಿಂದ ನಿಯಮಿತವಾಗಿ ಪಿಎಫ್ ಕಡಿತವಾಗುತ್ತಿದೆ. ಪ್ರಸ್ತುತ ಕಂಪನಿಯಲ್ಲಿ ತಿಂಗಳಿಗೆ 2,500 ರೂ. ಕಡಿತವಾಗುತ್ತಿದೆ. ನಾನು ಈಗ ಇನ್ನೂ ಎಷ್ಟು ಹೆಚ್ಚುವರಿ ಪಿಎಫ್ ಕಡಿತಗೊಳಿಸಬಹುದು. ಇದು ಮುಂದಿನ ದಿನಗಳಲ್ಲಿ ಆದಾಯ ಹೆಚ್ಚಿಸುವುದೇ?

-ವಿಜಯಕುಮಾರ್ ಎಂ.ಎಂ.

ಉದ್ಯೋಗಿ ತನ್ನ ಮೂಲ ವೇತನದ ಶೇ. 12ರಷ್ಟು ಹಣವನ್ನು ಪಿಎಫ್​ಗೆ ನೀಡಬೇಕು ಎನ್ನುವುದು ನಿಯಮ. ಆದರೆ, ಅದಕ್ಕಿಂತ ಹೆಚ್ಚು ಹಣವನ್ನು ಪಿಎಫ್ (ಕಾರ್ವಿುಕರ ಭವಿಷ್ಯ ನಿಧಿ)ನಲ್ಲಿ ಹೂಡಿಕೆ ಮಾಡಬೇಕು ಎಂದರೆ ಹೆಚ್ಚುವರಿ ಪಿಎಫ್ ಕಡಿತಕ್ಕೆ ಖಂಡಿತವಾಗಿಯೂ ಅವಕಾಶವಿದೆ. ನಿಮ್ಮ ಮೂಲ ವೇತನದ ಶೇ. 100 ರಷ್ಟು ಹಣವನ್ನು (ತುಟ್ಟಿ ಭತ್ಯೆ ಒಳಗೊಂಡು) ಪಿಎಫ್​ನಲ್ಲಿ ಹೂಡಿಕೆ ಮಾಡಬಹುದು. ಆದರೆ ನೌಕರಿ ನೀಡಿರುವ ಕಂಪನಿಯು ಶೇ. 12ಕ್ಕಿಂತ ಹೆಚ್ಚು ಹಣವನ್ನು ಪಿಎಫ್​ಗೆ ನೀಡಲು ಬರುವುದಿಲ್ಲ ಎನ್ನುವ ಅಂಶ ನಿಮಗೆ ತಿಳಿದಿರಲಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕಂಪನಿಯ ಅಕೌಂಟ್ಸ್ ಅಥವಾ ಮಾನವ ಸಂಪನ್ಯೂಲ ವಿಭಾಗವನ್ನು ಸಂರ್ಪಸಿ. ಪಿಎಫ್ ಸುರಕ್ಷಿತ ಮತ್ತು ನಿಶ್ಚಿತ ಲಾಭ ತಂದುಕೊಡುವ ಹೂಡಿಕೆ ಆಗುವುದರಿಂದ ಖಂಡಿತವಾಗಿಯೂ ನೀವು ಹೆಚ್ಚುವರಿ ಹಣವನ್ನು ಪಿಎಫ್​ನಲ್ಲಿ ತೊಡಗಿಸುವುದರಿಂದ ಸಮಸ್ಯೆ ಇಲ್ಲ. ಹಣದ ಅಗತ್ಯ ತೀರಾ ಇದೆ ಎನ್ನುವಾಗ ಪಿಎಫ್​ಅನ್ನು ಹಿಂತೆಗೆಯಲು ಸಹ ಯಾವುದೇ ಅಡೆತಡೆ ಇಲ್ಲ. ಹೀಗಾಗಿ ಅಗತ್ಯಕ್ಕೆ ಅನುಗುಣವಾಗಿ ಪಿಎಫ್​ಗೆ ನೀಡುವ ಕೊಡುಗೆಯನ್ನು ಹೆಚ್ಚಿಸಿಕೊಳ್ಳಬಹುದು.

ಉಚಿತ ಕ್ರೆಡಿಟ್ ಸ್ಕೋರ್

ಯಾವುದೇ ವ್ಯಕ್ತಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ತನ್ನ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು. ನೀವು ಖಾಸಗಿಯಾಗಿ ಈ ಕ್ರೆಡಿಟ್ ಸ್ಕೋರ್ ಚೆಕ್ ಮಾಡಲು 500ರಿಂದ 700 ರೂ. ವರೆಗೆ ಖರ್ಚು ಮಾಡಬೇಕು. ಆದರೆ ಈಗ ಇಂಡಿಯನ್ ಮನಿ ಡಾಟ್ ಕಾಂ ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಲು ತನ್ನ ವೆಬ್​ಸೈಟ್​ನಲ್ಲಿ ಅವಕಾಶ ಕಲ್ಪಿಸಿದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರಷ್ಟೇ ಬ್ಯಾಂಕ್​ಗಳು ಗೃಹ ಸಾಲ ಅಥವಾ ವೈಯಕ್ತಿಕ ಸಾಲ ನೀಡಲು ಮುಂದೆ ಬರುತ್ತವೆ. ಹೀಗಿರುವಾಗ ಗ್ರಾಹಕರಿಗೆ ಕ್ರೆಡಿಟ್ ಸ್ಕೋರ್ ಬಗ್ಗೆ ಅರಿವು ಅಗತ್ಯ. ಇಂಡಿಯನ್ ಮನಿ ಡಾಟ್ ಕಾಂ ವೆಬ್​ಸೈಟ್​ಗೆ ಭೇಟಿ ನೀಡುವ ಅನೇಕರು ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಲು ಅವಕಾಶ ಕಲ್ಪಿಸುವಂತೆ ಕೋರುತ್ತಿದ್ದರು. ಅದರಂತೆ ಈಗ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ವ್ಯಕ್ತಿ ಇಂಡಿಯನ್ ಮನಿ ಡಾಟ್ ಕಾಂ ವೆಬ್​ಸೈಟ್​ಗೆ ಭೇಟಿ ನೀಡಿ ಕ್ರೆಡಿಟ್ ಸ್ಕೋರ್ ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ ಹೆಸರು, ಪ್ಯಾನ್ ಕಾರ್ಡ್ ನಂಬರ್ ಸೇರಿ ಸಣ್ಣ ಪುಟ್ಟ ಮಾಹಿತಿ ಭರ್ತಿ ಮಾಡಿದರೆ ಸಾಕು, ಕೆಲವೇ ಸೆಕೆಂಡುಗಳಲ್ಲಿ ಕ್ರೆಡಿಟ್ ಸ್ಕೋರ್ ಉಚಿತವಾಗಿ ತಿಳಿಯಲಿದೆ. ನಿಮ್ಮ ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ, ಸಾಲ ಮತ್ತು ಕ್ರೆಡಿಟ್ ಕಾರ್ಡ್ ಮಂಜೂರಾತಿ ಸುಲಭವಾಗುತ್ತದೆ. ಕ್ರೆಡಿಟ್ ಸ್ಕೋರ್​ನಲ್ಲಿ ಈ ಹಿಂದೆ ಸಾಲ ಮಾಡಿರುವ ಮಾಹಿತಿ, ಸಾಲ ಮರು ಪಾವತಿ ಮಾಡುತ್ತಿರುವ ಮಾಹಿತಿ, ಕ್ರೆಡಿಟ್ ಕಾರ್ಡ್ ಪೇಮೆಂಟ್ ಮಾಡದೆ ಇರುವುದು ಸೇರಿದಂತೆ ಸಾಲಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಇರುತ್ತದೆ.

Leave a Reply

Your email address will not be published. Required fields are marked *