ಸಾಲಮನ್ನಾ ‘ಕೈ’ಬಿಟ್ಟ ಕುಮಾರಸ್ವಾಮಿ

ಹಾನಗಲ್ಲ: ರಾಜ್ಯದಲ್ಲಿ ಅಪ್ಪ, ಮಗ, ಸೊಸೆ ಸೇರಿದಂತೆ ಒಂದೇ ಮನೆಯ ಎಲ್ಲರೂ ರಾಜಕೀಯ ಫಲಾನುಭವಿಗಳಾದರೆ ರೈತರಿಗೆಲ್ಲಿ ಅವಕಾಶ? ಕೇವಲ ರೈತನ ಮಗನಾದರೆ ಸಾಲದು, ಅವರ ಬೇಡಿಕೆಗಳನ್ನೂ ಈಡೇರಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಪ್ರಶ್ನಿಸಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರೈತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆಗೂ ಮುನ್ನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಸಿಎಂ ಕುಮಾರಸ್ವಾಮಿ ಮೈತ್ರಿ ಸರ್ಕಾರದ ನೆಪವೊಡ್ಡಿ ಕೈ ಚೆಲ್ಲಿದ್ದಾರೆ. ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಘೊಷಿಸಿದ್ದ ಮೆಡಿಕಲ್ ಕಾಲೇಜ್, ಡಿಸಿಸಿ ಬ್ಯಾಂಕ್ ಕನಸಾಗಿವೆ. ಎಲ್ಲ ಪಕ್ಷದವರೂ ಹಾವೇರಿಯನ್ನೇ ಕೇಂದ್ರೀಕರಿಸಿಕೊಂಡು ಚುನಾವಣೆ ಪ್ರಾರಂಭಿಸುತ್ತಾರೆ. ಜಿಲ್ಲೆಯವರ ಕಲ್ಯಾಣಕ್ಕೆ ಯೋಜನೆಗಳನ್ನು ನೀಡಿಲ್ಲ. ಎಲ್ಲರೂ ಜಾತಿಯನ್ನೇ ಚುನಾವಣೆ ವಸ್ತುವನ್ನಾಗಿಸುತ್ತಿದ್ದಾರೆ. ಬಾಳಂಬೀಡ ಏತ ನೀರಾವರಿ ಅನುಷ್ಠಾನಗೊಳ್ಳದೆ ಜಿಲ್ಲೆಯ ರೈತರು ನಿರಾಶರಾಗಿದ್ದಾರೆ. ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಾಗದೆ ಸಾಲದಲ್ಲಿ ಸಿಲುಕಿ, ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.

ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸದ ಕೇಂದ್ರ ಸರ್ಕಾರ ಚುನಾವಣೆ ಪೂರ್ವದಲ್ಲಿ ರೈತರ ಖಾತೆಗೆ 6 ಸಾವಿರ ರೂ. ನೀಡುವ ಮೂಲಕ ನಾಜೂಕಿನ ಹೆಜ್ಜೆಗಳನ್ನಿಡುತ್ತಿದೆ. ಅಂಬಾನಿಯ ಸಾಲ ಮನ್ನಾ ಮಾಡಿದ ಪ್ರಧಾನಿ, ರೈತರ ಸಾಲ ಮನ್ನಾ ಮಾಡಲಿಲ್ಲ. ರಾಮ ಮಂದಿರದಷ್ಟೇ ರೈತರ ವಿಷಯಕ್ಕೂ ಆದ್ಯತೆ ನೀಡಬೇಕು. ಅನ್ನದಾತರ ಸಮಸ್ಯೆಗಳ ಕುರಿತು ಸಂಸದರಿಗೆ ಮಾತನಾಡಲು ಅವಕಾಶ ಕಲ್ಪಿಸದೆ ಮೋದಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸಂಚಾಲಕ ಮಾಲತೇಶ ಪೂಜಾರ, ಬಾಳಂಬೀಡ ಏತ ನೀರಾವರಿ, ಬೇಡ್ತಿ ನದಿ ನೀರಾವರಿ ಅನುಷ್ಠಾನ ಮೂಲಕ 6 ತಾಲೂಕಿನ ನೂರಾರು ಎಕರೆ ಪ್ರದೇಶಕ್ಕೆ ನೀರು ಹರಿಯಲಿದೆ. ಆದರೆ, ರಾಜ್ಯ ಸರ್ಕಾರ ಹಣದ ಕೊರತೆ ಮುಂದಿಟ್ಟು ನಿರಾಸಕ್ತಿ ತೋರುತ್ತಿದೆ. ನೀರಾವರಿ ನೀಡಿದರೆ ಸಾಲ ಮನ್ನಾ ಕೇಳುವ ಮಾತು ಬರಲಾರದು ಎಂದರು.

ಸಂಘಟನೆ ರಾಜ್ಯ ಪದಾಧಿಕಾರಿಗಳಾದ ಬಸವಂತಪ್ಪ ಕಂಬಳಿ, ಶಿವಪ್ಪ ಅಬ್ಬಣ್ಣಿ, ಮಂಜುನಾಥಗೌಡ, ಮಲ್ಲಿಕಾರ್ಜುನ ರಾಮದುರ್ಗ, ಗಣಪತಿ ಈಳಗೇರ, ಮುನಿಯಪ್ಪ, ಹನುಮಂತಪ್ಪ ಹುಚ್ಚಣ್ಣನವರ, ರವಿ ಸಿದ್ದಮ್ಮನವರ, ಗಣೇಶಪ್ಪ, ಸತ್ಯಪ್ಪ ಕಮಲಾಪುರಿ, ರಾಘವೇಂದ್ರ ನಾಯ್ಕ, ರವೀಂದ್ರಗೌಡ ಪಾಟೀಲ, ಮಹ್ಮದ್ ಕಿಲ್ಲೇದಾರ, ವಸಂತ ಕಾಂಬಳೆ, ಭಾರತಿ ಹುನಗುಂದ, ಸಾವಿತ್ರಮ್ಮ, ತಾಲೂಕಾಧ್ಯಕ್ಷರಾದ ರುದ್ರಪ್ಪ ಬಳಿಗಾರ, ವೀರಪ್ಪ ಮರೆಪ್ಪನವರ, ಚನ್ನಪ್ಪ ಮರಡೂರ, ಮುತ್ತು ಗುಡಿಕೇರಿ, ಎಂ.ಎಂ. ನಾಯಕ, ರಾಜಾಸಾಜ್ ತರ್ಲಘಟ್ಟ, ಲಕ್ಷ್ಮೀ ಕಲಾಲ, ಭುವನೇಶ್ವರ ಶಿಡ್ಲಾಪುರ, ಹಾಲಪ್ಪ ಬಳಿಗಾರ, ಇತರರಿದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಕಲಾ ತಂಡಗಳೊಂದಿಗೆ ಕ್ರೀಡಾಂಗಣದವರೆಗೆ ರೈತರು ಮೆರವಣಿಗೆ ನಡೆಸಿದರು.

ರೈತರು ವಿಧಾನಸಭೆ- ಸಂಸತ್ ಪ್ರವೇಶಿಸಿದರೆ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಬಲ್ಲದು. ಮಾ. 6ರಂದು ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಸಮಾವೇಶ ಕೈಗೊಳ್ಳಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ರೈತರು ಪಾಲ್ಗೊಂಡು ಕೇಂದ್ರ, ರಾಜ್ಯ ಸರ್ಕಾರವನ್ನು ಎಚ್ಚರಿಸಲಿದ್ದಾರೆ.

| ಕೋಡಿಹಳ್ಳಿ ಚಂದ್ರಶೇಖರ, ರಾಜ್ಯಾಧ್ಯಕ್ಷ, ರೈತ ಸಂಘ