ಬೀಳಗಿ: ವೃತ್ತಿ ಬದುಕಿನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಮಲ್ಲೇಶ ಟಿ. ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಬುಧವಾರ ಲೋಕಾಯುಕ್ತರಿಂದ ಆಯೋಜಿಸಿದ್ದ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನ ಸಾಮಾನ್ಯರಿಗೆ ಸರ್ಕಾರಿ ಯೋಜನೆಗಳನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿವಳಿಕೆ ನೀಡಬೇಕು. ಆಯಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆತ್ಮತೃಪ್ತಿಗಾಗಿ ಕೆಲಸ ಮಾಡಬೇಕು. ಆಗ ಮಾತ್ರ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದರು.
ಆಯಾ ಇಲಾಖೆಯಲ್ಲಿ ಎಷ್ಟು ಜನರು ಸರ್ಕಾರಿ ಸೌಲಭ್ಯ ಪಡೆಯಲು ಅರ್ಜಿ ಹಾಕಿದ್ದಾರೆ? ಎಷ್ಟು ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ? ಅದರಲ್ಲಿನ ಎಷ್ಟು ಅರ್ಜಿಗಳು ಇನ್ನೂ ವಿಲೇ ಏಕೆಯಾಗಿಲ್ಲ? ವಿಳಂಬಕ್ಕೆ ಕಾರಣವೇನು? ಅವುಗಳಿಗೆ ಪರಿಹಾರ ಪಡೆದುಕೊಳ್ಳಲು ಏನು ಮಾಡಬೇಕು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಪರಿಹಾರ ಕಂಡುಕೊಳ್ಳಲು ಬಂದ ಅರ್ಜಿಗಳಿಗೆ ಪರಿಹಾರ ದೊರಕಿಸದಿದ್ದರೆ ಜನರು ಆಕ್ರೋಶಗೊಳ್ಳುವುದು ಸಹಜ. ಜವಾಬ್ದಾರಿತ ಅರಿತು ಕೆಲಸ ಮಾಡಿದರೆ ಸಾಕು. ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದು ಎಲ್ಲ ಅಧಿಕಾರಿಗಳು ಕೆಲಸ ಮಾಡುವ ಮನಸ್ಸು ಮಾಡಬೇಕಾಗಿದೆ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಜಿಲ್ಲೆಯಲ್ಲಿ ಎಷ್ಟು ಜನರು ಕಾರ್ಮಿಕರ ಕಾರ್ಡ್ ಪಡೆಯಲು ಅರ್ಜಿ ಹಾಕಿದ್ದಾರೆ. ಅದರಲ್ಲಿ ಎಷ್ಟು ಲಾನುಭವಿಗಳು ಲಾಭ ಪಡೆದುಕೊಂಡಿದ್ದಾರೆ. ಉಳಿದವರು ಏಕೆ ಪಡೆದುಕೊಂಡಿಲ್ಲ. ಅದರಲ್ಲಿ ಎಷ್ಟು ನಕಲಿ ಕಾರ್ಡ್ ರದ್ದುಪಡಿಸಲಾಗಿದೆ ಎಂಬುದರ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿ ರಾಜಶೇಖರ ವಿವರಿಸಿದರು.
ಕೃಷಿ, ತೋಟಗಾರಿಕೆ, ಹೆಸ್ಕಾಂ, ನೀರಾವರಿ, ಆರೋಗ್ಯ ಇಲಾಖೆ, ಯುಕೆಪಿ, ಪುನರ್ವಸತಿ, ಪಶು ಇಲಾಖೆ, ಶಿಕ್ಷಣ, ಸಮಾಜ ಕಲ್ಯಾಣ, ಬಿಸಿಎಂ, ಅರಣ್ಯ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಟ್ಟಣ ಪಂಚಾಯಿತಿ, ಜಲಜೀವ ಮಿಷನ್, ಅಬಕಾರಿ ಸೇರಿ ಹಲವು ಇಲಾಖೆಯಲ್ಲಿನ ವಿವಿಧ ಯೋಜನೆಗಳ ಕಾಮಗಾರಿ ಮಾಹಿತಿಯನ್ನು ಲೋಕಾಯುಕ್ತ ಎಸ್ಪಿ ಪಡೆದುಕೊಂಡರು. ಸಾರ್ವಜನಿಕರಿಂದ ಆಹವಾಲು ಸ್ವೀಕರಿದರು.
ತಹಸೀಲ್ದಾರ್ ವಿನೋದ ಹತ್ತಳ್ಳಿ, ಲೋಕಾಯುಕ್ತ ಡಿಎಸ್‌ಪಿ ಸಿದ್ದೇಶ್ವರ, ಭೀಮನಗೌಡ ಬಿರಾದಾರ, ಬಿ.ಕೆ. ಮುಕತಿಕಹಾಳ, ಸಿಪಿಐ ಎಚ್.ಬಿ. ಸಣ್ಣಮನಿ, ತಾಪಂ ಪರಭಾರಿ ಇಒ ಶ್ರೀನಿವಾಸ ಪಾಟೀಲ ಇದ್ದರು.