ಸಾರಿಗೆ ಸಿಬ್ಬಂದಿ- ಪ್ರಯಾಣಿಕರ ಪರ-ವಿರೋಧ ಪ್ರತಿಭಟನೆ

ಯಲ್ಲಾಪುರ: ಪ್ರಯಾಣಿಕನ ಮೇಲೆ ಹಲ್ಲೆ ಮಾಡಿ ಪೊಲೀಸ್ ಠಾಣೆಗೆ ಎಳೆದೊಯ್ದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಶನಿವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಬಸ್ ತಡೆದು ಪ್ರತಿಭಟನೆ ನಡೆಸಿದರು.

ಒಂದು ಗಂಟೆ ಎಲ್ಲ ಬಸ್​ಗಳನ್ನು ನಿಲ್ಲಿಸಿ, ಪ್ರತಿಭಟನೆ ನಡೆಸಿದ ನಂತರ ಹಲ್ಲೆ ಮಾಡಿದ ಚಾಲಕ-ನಿರ್ವಾಹಕರು ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರೌಢಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರೊಬ್ಬರು ಬಸ್ ಹತ್ತುವಾಗ ಚಾಲಕ-ನಿರ್ವಾಹಕರು ಎಳೆದಾಡಿ, ಅವರ ಮೇಲೆ ಹಲ್ಲೆ ಮಾಡಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಎದುರಿಗೆ ಪೊಲೀಸ್ ಠಾಣೆಗೆ ಎಳೆದೊಯ್ದ ಘಟನೆ ಖಂಡಿಸಿ ತಾಲೂಕು ಹವ್ಯಕ ಸಂಘ, ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಚಾಲಕ ಎಂ.ಎ. ಬಿರಾದಾರ್ ಮತ್ತು ನಿರ್ವಾಹಕ ಎಂ.ಎಚ್. ಮಾಯಣ್ಣನವರ್ ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಘಟಕ ವ್ಯವಸ್ಥಾಪಕ ಸಿ.ವಿ. ಇಟಗಿ, ಸೂಕ್ತ ಕ್ರಮ ಕೈಗೊಳ್ಳಲು ನಾಲ್ಕು ದಿನ ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡರು. ನಮ್ಮ ಸಿಬ್ಬಂದಿ ಘಟನೆಯ ಮಾಹಿತಿಯನ್ನು ನಮಗೆ ನೀಡದೇ ಠಾಣೆಗೆ ದೂರು ಕೊಡಲು ಹೋಗಿದ್ದು ತಪ್ಪು. ಅವರಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಿದ್ದೇವೆ ಎಂದರು.

ಅಡಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ತಾಲೂಕು ಹವ್ಯಕ ನೌಕರರ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ, ಹವ್ಯಕ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಬ್ಲಾಕ್ ಕಾಂಗ್ರೆಸ್ ಸಂಘದ ಅಧ್ಯಕ್ಷ ಡಿ.ಎನ್. ಗಾಂವ್ಕರ, ವಿವಿಧ ಸಂಘಟನೆಗಳ ಪ್ರಮುಖರಾದ ಡಾ. ರವಿ ಭಟ್ಟ, ದ್ಯಾಮಣ್ಣ ಭೋವಿವಡ್ಡರ್, ಸುಬ್ರಹ್ಮಣ್ಯ ಗಾಂವ್ಕಾರ, ಸಂಜೀವಕುಮಾರ ಹೊಸ್ಕೇರಿ, ಪ್ರಶಾಂತ ಸಭಾಹಿತ ಸೇರಿ 500ಕ್ಕೂ ಹೆಚ್ಚು ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಸಾರ್ವಜನಿಕರ ಆಕ್ರೋಶ: ಸಿಬ್ಬಂದಿಯ ತಪ್ಪನ್ನು ಸಮರ್ಥಿಸಿಕೊಳ್ಳಲು ಪ್ರತಿಭಟನೆಗೆ ಮುಂದಾದ ಕೆಎಸ್​ಆರ್​ಟಿಸಿ ನೌಕರರ ಕ್ರಮದ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರ ಪ್ರತಿಭಟನೆ ಮುಕ್ತಾಯಗೊಂಡ ನಂತರ ಸಮರ್ಪಕವಾಗಿ ಬಸ್​ಗಳ ಓಡಾಟ ನಡೆಯುವಂತೆ ನೋಡಿಕೊಳ್ಳಬೇಕಾದ ಘಟಕ ವ್ಯವಸ್ಥಾಪಕರೇ ತಮ್ಮ ಸಿಬ್ಬಂದಿಯ ಜೊತೆಗೆ ಪ್ರತಿಭಟನೆಗೆ ಸಾಥ್ ನೀಡಿರುವುದು ಟೀಕೆಗೆ ಗುರಿಯಾಗಿದೆ.

ಸಿಬ್ಬಂದಿಯಿಂದಲೂ ಪ್ರತಿಭಟನೆ: ಸಾರ್ವಜನಿಕರ ಪ್ರತಿಭಟನೆ ಖಂಡಿಸಿ ಕೆಎಸ್​ಆರ್​ಟಿಸಿ ನೌಕರರೂ ಪ್ರತಿಭಟನೆ ನಡೆಸಿದರು. ಬಸ್ ನಿಲ್ದಾಣದ ಆವಾರದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಂಸ್ಥೆಯ ನೌಕರರನ್ನು ನಿಂದಿಸಿದ್ದಾರೆ ಎಂದು ಸಂಸ್ಥೆಯ ನೌಕರರು ಘಟಕ ವ್ಯವಸ್ಥಾಪಕರ ನೇತೃತ್ವದಲ್ಲಿ ಸಿಪಿಐ ಡಾ.ಮಂಜುನಾಥ ನಾಯಕ ಅವರಿಗೆ ಮನವಿ ಸಲ್ಲಿಸಿದರು. ಘಟಕದ ನೌಕರರು ಘಟಕದಿಂದ ಬಿಡುವ 15ಕ್ಕೂ ಹೆಚ್ಚು ಬಸ್​ಗಳನ್ನು ಬಿಡದೇ 3 ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುವಂತಾಯಿತು.

ಇಂತಹ ದೌರ್ಜನ್ಯ ಸಹಿಸುವುದಿಲ್ಲ. ಪ್ರಯಾಣಿಕರ ಜೊತೆ ಬಸ್ ಸಿಬ್ಬಂದಿ ಸೌಜನ್ಯಯುತವಾಗಿ ವರ್ತಿಸಬೇಕು. ಶಾಲೆ-ಕಾಲೇಜ್ ವಿದ್ಯಾರ್ಥಿಗಳಿಗೆ ಕೆಲವು ಚಾಲಕ, ನಿರ್ವಾಹಕರು ಶೋಷಣೆ ಮಾಡುತ್ತಿರುವುದು ಕಂಡುಬಂದಿದೆ. ಇದು ಮುಂದುವರಿದರೆ ಉಗ್ರ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ. | ಪಿ.ಜಿ. ಭಟ್ಟ ಬರಗದ್ದೆ ರೈತ ಮುಖಂಡ

Leave a Reply

Your email address will not be published. Required fields are marked *