ಸಾರಿಗೆ ಸಂಸ್ಥೆ ಕಚೇರಿ ಎದುರು ಪ್ರತಿಭಟನೆ

ಗದಗ: ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕರ್ನಾಟಕ ಸರ್ಕಾರದಲ್ಲಿ ವಿಲೀನಗೊಳಿಸಬೇಕು ಎಂದು ಆಗ್ರಹಿಸಿ ವಾಕರಸಾ ಸಂಸ್ಥೆಯ ಗದಗ ವಿಭಾಗೀಯ ನೌಕರರು ನಗರದಲ್ಲಿ ಬುಧವಾರ ಪ್ರತಿಭಟಿಸಿದರು.

ನಗರದ ವಾಕರಸಾ ಸಂಸ್ಥೆಯ ವಿಭಾಗೀಯ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬೇಡಿಕೆಗಳ ಘೊಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಆರೋಗ್ಯ, ಶಿಕ್ಷಣ, ಪೊಲೀಸ್ ಹಾಗೂ ಇತರೆ ಇಲಾಖೆಗಳ ಮಾದರಿಯಲ್ಲಿಯೇ ರಸ್ತೆ ಸಾರಿಗೆ ನೌಕರರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್​ರಡ್ಡಿ ಆಂಧ್ರ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯನ್ನು ಸರ್ಕಾರದಲ್ಲಿ ವಿಲೀನಗೊಳಿಸುವ ಮೂಲಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಕಾರ್ವಿುಕರು, ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆದೇಶ ಹೊರಡಿಸಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸರ್ಕಾರಿ ನೌಕರರಿಗೆ ಲಭ್ಯವಿರುವ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಎಚ್.ಸಿ. ಕೊಪ್ಪಳ, ಆರ್.ಎಸ್. ಕಾಶೀಗೌಡ್ರ, ಎಂ.ಆರ್. ಬೋದ್ಲೇಖಾನ್, ಎಸ್.ಎಂ. ಇಟಗಿ, ಸುಧಾ ಅಬ್ಬಿಗೇರಿ, ಪಿ.ಎಸ್. ಮೇಟಿ, ಎಸ್.ಎ. ಮೆಣಸಗಿ, ವಿ.ಎಸ್. ನರಗುಂದ, ಯು.ಎಸ್. ಮ್ಯಾಗೇರಿ, ಎಂ.ಡಿ. ಕಾಗದಗಾರ, ಡಿ.ವೈ. ಪಾಟೀಲ, ಚಂದ್ರು ಗೌಡರ, ಸತೀಶ ಕುಲಕರ್ಣಿ, ಪ್ರಕಾಶ ಕೊತಬಾಳ, ಶಿವು ಪಾಟೀಲ, ಮಂಗಲಾ ಕುಕನೂರ, ಕೆ.ಪಿ. ರಾಯರ ಇದ್ದರು.

Leave a Reply

Your email address will not be published. Required fields are marked *