ಸಾರಿಗೆ ಕಾರ್ವಿುಕರ ಮೇಲೆ ಕಿರುಕುಳ ನಿಲ್ಲಿಸಿ

ಶಿವಮೊಗ್ಗ: ಸರ್ಕಾರ ಮತ್ತು ಆಡಳಿತ ವರ್ಗದ ವಿರೋಧಿ ನೀತಿಗಳಿಂದ ಸಾರಿಗೆ ಇಲಾಖೆಯ ಕಾರ್ವಿುಕರು ದಿನನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಹೇಳಿದರು.

ಕರ್ನಾಟಕ ಸಂಘದ ಸಭಾಂಗಣದಲ್ಲಿ ಸಿಐಟಿಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘ ಮಂಗಳವಾರ ಆಯೋಜಿಸಿದ್ದ ಶಿವಮೊಗ್ಗ ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕಿರುಕುಳ ಅನುಭವಿಸುವ ಜತೆಯಲ್ಲಿ ಪ್ರತಿ ಹಂತದಲ್ಲಿಯೂ ಕೆಲವು ಕಡೆ ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ನಿಯಮಾನುಸಾರ ಆಡಳಿತ ನಡೆಸದೆ ಭ್ರಷ್ಟ ವ್ಯವಸ್ಥೆ ರೂಪುಗೊಳ್ಳಲು ಕಾರಣರಾಗಿದ್ದಾರೆ. ಶೋಷಣೆಗೆ ಒಳಗಾಗುವ ಕಾರ್ವಿುಕರಿಗೆ ಕೆಲಸದಲ್ಲಿ ಒತ್ತಡ ಹಾಕಲಾಗುತ್ತಿದೆ. ಕಡಿಮೆ ವೇತನ, ಹೆಚ್ಚಿನ ದುಡಿಮೆ ಅವಧಿ ಎನ್ನುವಂತಾಗಿದೆ ಎಂದು ತಿಳಿಸಿದರು.

ಕಾನೂನು ನಿಯಮ ಮೀರಿ ಹೆಚ್ಚಿನ ಅವಧಿ ಕೆಲಸ ಮಾಡಿಸಲಾಗುತ್ತಿದೆ. 300 ಕಿಮೀನ 8 ಗಂಟೆ ಕೆಲಸದ ಬದಲಾಗಿ 410 ಕಿಮೀ ನಿಗದಿಪಡಿಸಲಾಗಿದೆ. ಇದರಿಂದ ಚಾಲಕ ಮತ್ತು ನಿರ್ವಾಹಕರು ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಆರೋಗ್ಯ ಹಾಳಾಗುವ ಜತೆಯಲ್ಲಿ ಕಿರುಕುಳ ಹೆಚ್ಚಿದ ಸಂದರ್ಭದಲ್ಲಿ ಕಾರ್ವಿುಕರ ಮೇಲೆ ಹಲ್ಲೆಗಳೂ ನಡೆಯುತ್ತಿವೆ ಎಂದು ಆರೋಪಿಸಿದರು.

ಕರ್ತವ್ಯದ ವೇಳೆ ಸಣ್ಣ ಕಾರಣಗಳನ್ನು ನೀಡಿ ದಂಡ ಹಾಕುವುದು, ಇಂಕ್ರಿಮೆಂಟ್ ಕಡಿತ, ಅಮಾನತುಗೊಳಿಸುವುದು ಸೇರಿ ನಿರಂತರ ಶೋಷಣೆ ಹಾಗೂ ಹಿಂಸೆ ಮಾಡಲಾಗುತ್ತಿದೆ. ಕಾನೂನಿನ ಅಡಿಯಲ್ಲಿ ಸುತ್ತೋಲೆ ಮಾಡದೆ ತಮಗೆ ಬೇಕಾದಂತೆ ಸುತ್ತೋಲೆ ತಯಾರಿಸಿ ಕಾರ್ವಿುಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರಿಗೂ ರಾಜ್ಯ ಸರ್ಕಾರದ ಮೂರು ಮತ್ತು ನಾಲ್ಕನೇ ದರ್ಜೆ ನೌಕರರಿಗೆ ನೀಡುವ ವೇತನಕ್ಕೆ ಸಮಾನ ವೇತನ ನೀಡಬೇಕು. ಶೀಘ್ರವೆ ರಾಜ್ಯ ಸರ್ಕಾರ ಹಾಗೂ ಸರ್ಕಾರಿ ನೌಕರರಿಗೂ ಇರುವ ವೇತನ ತಾರತಮ್ಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಉಪಾಧ್ಯಕ್ಷ ಕೆ.ಪ್ರಕಾಶ್, ಸಿಐಟಿಯು ಮುಖಂಡ ಶಿವಶಂಕರ್, ಪ್ರಮುಖರಾದ ಕೆ.ಹನುಮಂತಪ್ಪ, ಎಸ್.ರವಿ, ಮೊಹಿಬುಲ್ಲಾಖಾನ್, ಕೆ.ಎಂ.ಜಗದೀಶ್, ಕಾಶಿನಾಥ್ ಹೊನ್ನಾಳಿ, ಕರಿಬಸಪ್ಪ, ಆನಂದ್, ಹರೀಶ್​ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

27 ವರ್ಷಗಳಿಂದ ಚುನಾವಣೆ ನಡೆಸಿಲ್ಲ:ಸಾರಿಗೆ ಸಂಸ್ಥೆಯಲ್ಲಿ ಕಾರ್ವಿುಕರ ಸಂಘದ ಮಾನ್ಯತೆಗಾಗಿ 1992ರ ಬಳಿಕ ಚುನಾವಣೆ ನಡೆದಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಹೇಳಿದರು. 27 ವರ್ಷಗಳಿಂದ ಚುನಾವಣೆಯನ್ನೇ ನಡೆಸಿಲ್ಲ. ಸಾರಿಗೆ ನೌಕರರಿಗೆ ಸಂಘದ ಸದಸ್ಯರ ಆಯ್ಕೆ ಮಾಡುವ ಹಕ್ಕನ್ನು ನೀಡದೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆ ನಶಿಸಿ ಹೋಗಿದೆ. ಮೊದಲು ಚುನಾವಣೆ ನಡೆಸಲು ಮುಂದಾಗಬೇಕು. ನಂತರ ಎಲ್ಲರೂ ಒಗ್ಗಟ್ಟಾಗಿ ಬೇಡಿಕೆಗಳನ್ನು ಈಡೇರಿಸಲು ಒತ್ತಡ ಹಾಕಬೇಕು. ಕಾನೂನಾತ್ಮಕ ಆಡಳಿತದ ಹಕ್ಕು ಸಿಗದಿದ್ದರೆ ನ್ಯಾಯ ಸಿಗುವುದಿಲ್ಲ. ಚುನಾವಣೆ ನಡೆಯದ ಪರಿಣಾಮ ಶೋಷಣೆ ಹೆಚ್ಚಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *