ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಬೆಂಗಳೂರು: ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 5,900 ಕೋಟಿ ರೂ.ಗೂ ಅಧಿಕ ರಾಜಸ್ವ ಸಂಗ್ರಹಿಸುವಂಥ ಸಾರಿಗೆ ಇಲಾಖೆಯಲ್ಲೇ ಮಂಜೂರಾದ ಸಾವಿರಾರು ಹುದ್ದೆಗಳು ಖಾಲಿ ಉಳಿದಿವೆ. ಇದರಿಂದಾಗಿ ದಿನನಿತ್ಯದ ಆಡಳಿತ ನಿರ್ವಹಣೆಗೂ ಇತರೆ ಇಲಾಖೆಗಳ ಸಿಬ್ಬಂದಿಯ ಮೊರೆ ಹೋಗುವ ಸ್ಥಿತಿ ಬಂದಿದೆ.

2008-09ರ ನಂತರ ಬಡ್ತಿ, ವಯೋನಿವೃತ್ತಿ ಹಾಗೂ ಇನ್ನಿತರ ಕಾರಣಗಳಿಂದ ತೆರವಾದ ಡಿ-ಗ್ರೂಪ್ ಹುದ್ದೆಗಳು ಭರ್ತಿಯಾಗದೆ 200 ಹುದ್ದೆಗಳು ಖಾಲಿ ಇವೆ. ಜತೆಗೆ ಹೊಸ ಕಚೇರಿಗಳಿಗೂ ಮಂಜೂರಾದ ಗ್ರೂಪ್-ಡಿ ಹುದ್ದೆ ಭರ್ತಿಯಾಗದೇ ಉಳಿದಿದೆ. ಹೀಗಾಗಿ ಈಗಾಗಲೇ ಮಂಜೂರಾತಿ ನೀಡಿರುವ 400 ಗೃಹರಕ್ಷಕ ಸಿಬ್ಬಂದಿ ಜತೆಗೆ ಹೆಚ್ಚುವರಿ 100 ಗೃಹರಕ್ಷಕ ಸಿಬ್ಬಂದಿ ನೀಡಲು ಸಾರಿಗೆ ಆಯುಕ್ತರು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇವರ ವೇತನಕ್ಕೆ ವಾರ್ಷಿಕ 7.23 ಕೋಟಿ ರೂ. ವೆಚ್ಚವಾಗಲಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಪ್ರಸ್ತಾವನೆಗೆ ಸಾರಿಗೆ ಇಲಾಖೆ ಒಪ್ಪಿದ್ದು, 2020 ಮಾ.31ರವರೆಗೆ 500 ಗೃಹರಕ್ಷಕ ಸಿಬ್ಬಂದಿ ಸೇವೆ ಪಡೆಯಲು ಅನುಮತಿ ನೀಡಿದೆ. ಇವರ ವೇತನದ ವೆಚ್ಚವನ್ನು ಇಲಾಖೆಗೆ ಒದಗಿಸಿರುವ ಅನುದಾನ ಮಿತಿಯಲ್ಲೇ ಭರಿಸಬೇಕು. ಇದಕ್ಕಾಗಿ ಹೆಚ್ಚುವರಿ ಅನುದಾನ ಕೇಳಬಾರದು ಎಂದು ಸಾರಿಗೆ ಆಯುಕ್ತರಿಗೆ ಸೂಚಿಸಲಾಗಿದೆ. ಇಲಾಖೆಯಲ್ಲಿ ಒಟ್ಟು 2,806 ಹುದ್ದೆ ಮಂಜೂರಾಗಿವೆ. ಇವುಗಳಲ್ಲಿ 1,547 ಹುದ್ದೆಗಳು ಭರ್ತಿಯಾಗಿದ್ದು, 1,259 ಹುದ್ದೆಗಳು ಖಾಲಿ ಇವೆ. ಹೀಗಾಗಿ ಇರುವ ಸಿಬ್ಬಂದಿ ಮೇಲೆ ಕೆಲಸದೊತ್ತಡ ಅಧಿಕವಾಗಿದ್ದು, ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸೇವೆ ಸಿಗುತ್ತಿಲ್ಲ.