ಸಾಮಾನ್ಯ ವ್ಯಕ್ತಿಯ ಮನ್ನಣೆ ತಿಳಿಸಲು ಸ್ಪರ್ಧೆ

ಶಿರಸಿ: ಹಣ, ಜಾತಿ ಬಲ ಮತ್ತು ತೋಳ್ಬಲವೇ ಇತ್ತೀಚಿನ ಚುನಾವಣೆಯ ಪ್ರಮುಖ ಅಸ್ತ್ರವಾಗುತ್ತಿದೆ. ಇದಾವುದೂ ಇರದ ಸಾಮಾನ್ಯ ವ್ಯಕ್ತಿಯೂ ಚುನಾವಣೆಯಲ್ಲಿ ನಿಂತು ಜನ ಮನ್ನಣೆ ಗಳಿಸಬಹುದು ಎಂಬುದನ್ನು ತೋರಿಸಲು ರಾಜ್ಯದ 27 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ, ಚಿತ್ರನಟ ಉಪೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು,‘ಉತ್ತಮ ಪ್ರಜಾಕೀಯ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಏನೂ ಭರವಸೆ ನೀಡಿಲ್ಲ. ಇದರ ಬದಲು ಖಾಲಿ ಜಾಗವನ್ನು ಬಿಟ್ಟು ಜನರಿಂದಲೇ ತಮ್ಮ ಬೇಡಿಕೆಗಳು ಏನು ಎಂದು ಬರೆದುಕೊಡಲು ವಿನಂತಿಸುತ್ತಿದ್ದೇವೆ. ಪ್ರಣಾಳಿಕೆ ಚುನಾವಣೆ ಎದುರಿನಲ್ಲಿ ನೀಡಿ ಮರೆತು ಬಿಡುವಂತಹದ್ದಲ್ಲ. ಆಯ್ಕೆಯಾದ ವ್ಯಕ್ತಿ ತನ್ನ ಕ್ಷೇತ್ರದ ಅಗತ್ಯತೆಗಳನ್ನು ಮನಗಂಡು ಪ್ರಣಾಳಿಕೆಯಾಗಿ ಸ್ವೀಕರಿಸಿ ಅಭಿವೃದ್ಧಿ ಮಾಡುತ್ತ ಹೋಗಬೇಕಾಗುತ್ತದೆ’ ಎಂದರು.
ಅಭ್ಯರ್ಥಿ ಸುನೀಲ ಪವಾರ ಇದ್ದರು.

ಸೆಲ್ಪೀಗಾಗಿ ಸರದಿ ಸಾಲು!: ಉಪೇಂದ್ರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರೆ ಭವನದ ಹೊರಗಡೆ ಉಪೇಂದ್ರ ಅಭಿಮಾನಿಗಳು ಕಾದು ನಿಂತಿದ್ದರು. ಸುದ್ದಿಗೋಷ್ಠಿ ಮುಗಿಸಿ ಹೊರ ಬರುತ್ತಿದ್ದಂತೆಯೇ ಅವರೊಂದಿಗೆ ಸೆಲ್ಪೀತೆಗೆದುಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿದ್ದರು.‘ಉಪೇಂದ್ರ ಅವರಿಗೆ ಶಿವಮೊಗ್ಗಕ್ಕೆ ಹೋಗಬೇಕು, ಬೇಗ ಬೇಗ ಮುಗಿಸಿ ಎಂದು ಕಾರ್ಯಕರ್ತರು ಹೇಳುತ್ತಿದ್ದರೂ ಸೆಲ್ಪಿ ಕಾರ್ಯಕ್ರಮವೇ ಅರ್ಧ ಗಂಟೆಗೂ ಅಧಿಕ ಸಮಯ ಹಿಡಿದಿತ್ತು!