ಸಾಮಾಜಿಕ ಸಮಸ್ಯೆಗಳ ಸಿನೆಮಾ ಬರಲಿ

ಧಾರವಾಡ: ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ಸಮಸ್ಯೆಗಳ ಕುರಿತು ಹೆಚ್ಚು ಸಿನೆಮಾಗಳು ಬರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಮತ್ತು ನೇಗಿಲಯೋಗಿ ಕಥಾ ಲೇಖಕ ಡಾ. ಮಲ್ಲಿಕಾರ್ಜುನ ಪಾಟೀಲ ಹೇಳಿದರು.

ಕರ್ನಾಟಕ ಮಹಾವಿದ್ಯಾಲಯದ ಶತಮಾನೋತ್ಸವ ಅಂಗವಾಗಿ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಹಮ್ಮಿಕೊಂಡಿರುವ ಸಿನಿ ಸಪ್ತಕದಲ್ಲಿ ಬುಧವಾರ ನಡೆದ ‘ನೇಗಿಲಯೋಗಿ’ ಚಲನಚಿತ್ರದ ಕುರಿತ ವೀಕ್ಷಕರ ಜೊತೆ ಸಂವಾದದಲ್ಲಿ ಅವರು ಮಾತನಾಡಿದರು.

ಈ ಚಿತ್ರದಲ್ಲಿ ಪ್ರಸ್ತುತ ರೈತರು ಅನುಭವಿಸುತ್ತಿರವ ಅನೇಕ ಸಮಸ್ಯೆಗಳ ವಾಸ್ತವಿಕ ತಳಹದಿ ಮೇಲೆ ಚಿತ್ರಕಥೆ ರಚಿಸಲಾಗಿದೆ. ಇಂದು ಚಲನಚಿತ್ರ ಪ್ರಭಾವಿ ಮಾಧ್ಯಮ ಆಗಿರುವುದರಿಂದ ಅನೇಕ ಸಾಮಾಜಿಕ ಸಮಸ್ಯೆ ಕುರಿತು ಸಿನೆಮಾಗಳನ್ನು ಮಾಡಬೇಕಾಗಿದೆ ಎಂದರು.

ಸಿನೆಮಾ ವೀಕ್ಷಣೆಯಿಂದ ಹೊಸ ಕಲ್ಪನಾ ಶಕ್ತಿ ಜೊತೆ ಹೊಸ ವಿಷಯ ತಿಳಿಯಬಹುದು. ಇಂತಹ ಚಲನಚಿತ್ರೋತ್ಸವಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು, ಕಲಾತ್ಮಕ ಚಲನಚಿತ್ರ ನೋಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ನೇಗಿಲಯೋಗಿ ಚಿತ್ರದಲ್ಲಿ ನಟಿಸಿದ ಸಿ.ಎಸ್. ಪಾಟೀಲ ಕುಲಕರ್ಣಿ, ಶಶಿಧರ ಪಾಟೀಲ, ಪ್ರಭು ಹಂಚನಾಳ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ರಂಗಕರ್ವಿು ಯಶವಂತ ಸರದೇಶಪಾಂಡೆ, ಸುರೇಶ ಕುಲಕರ್ಣಿ, ಡಾ. ರಾಜೇಶ್ವರಿ ಮಹೇಶ್ವರಯ್ಯ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಹರ್ಷ ಡಂಬಳ, ನಂದಾ ಪಾಟೀಲ, ಡಾ. ಪ್ರಭಾಕರ ಕಾಂಬಳೆ, ಡಾ. ಬಿ.ಎಸ್ ಭಜಂತ್ರಿ, ಡಾ. ಸುರೇಶ ತುವಾರ, ಡಾ. ಓ. ಕೋಟ್ರೇಶ್ ಇತರರು ಇದ್ದರು. ಸಂವಾದದ ನಂತರ ಡಾ. ಗಿರೀಶ ಕಾರ್ನಾಡ ನಿರ್ದೇಶನದ ಒಂದಾನೊಂದು ಕಾಲದಲ್ಲಿ ಸಿನೆಮಾ ಪ್ರದರ್ಶಿಸಿಲಾಯಿತು.