More

  ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು:ಶಾಸಕ ಹೆಚ್.ಪಿ.ಸ್ವರೂಪ್

  ಹಾಸನ: ಸಾಮಾಜಿಕ ಕ್ರಾಂತಿಯ ನೇತಾರ, ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸಮಾಜದ ಎಲ್ಲಾ ವರ್ಗಗಳ ಜನರ ಏಳಿಗೆಗೆ ಶ್ರಮಿಸಿದ್ದಾರೆ. ಅರಸು ಅವರ ಜೀವನ ಚರಿತ್ರೆ, ವ್ಯಕ್ತಿತ್ವವನ್ನು ಈ ಪೀಳಿಗೆಯ ಮಕ್ಕಳು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ತಿಳಿಸಿದರು.
  ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜನರ ಪ್ರಗತಿಗಾಗಿ ಡಿ.ದೇವರಾಜ ಅರಸು ಅವರು ಹಲವು ವರ್ಷಗಳ ಕಾಲ ಶ್ರಮಿಸಿದ್ದು, ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡುಪಿಟ್ಟಿದ್ದರು ಎಂದು ಹೇಳಿದರು.
  ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ರಾಜಕೀಯ, ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಿದ ಕ್ರಾಂತಿಕಾರಿ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಿದ ಗೌರವ ಅರಸು ಅವರಿಗೆ ಸಲ್ಲುತ್ತದೆ, ಉಳುವವನೆ ಭೂಒಡೆಯ ಕಾಯ್ದೆಯನ್ನು ರಾಜ್ಯದಲ್ಲಿ ತಮ್ಮ ಅವಧಿಯಲ್ಲಿ ಜಾರಿಗೊಳಿಸಿದರು ಎಂದು ತಿಳಿಸಿದರು.
  ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ದೇವರಾಜ ಅರಸು ಅವರು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಹಲವರ ಬದುಕಿಗೆ ಧ್ವನಿಯಾಗಿ, ಸಮಾಜದ ಎಲ್ಲಾ ಸಮುದಾಯಗಳ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಉಳುವವನೇ ಭೂಒಡೆಯ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಬಡವರ ಬದುಕಿಗೆ ದಾರಿದೀಪವಾಗಿದ್ದಾರೆ. ಅರಸು ಅವರ ಜೀವನ ಕರ್ನಾಟಕದಲ್ಲಿ ಅವಿಸ್ಮರಣೀಯ ಪುಟವಾಗಿದ್ದು, ಅವರ ಹೆಜ್ಜೆಗುರುತುಗಳನ್ನು ಮೂಡಿಸಿ ಹೋಗಿದ್ದಾರೆ. ನಾವೆಲ್ಲರೂ ಅವರ ಋಣದಲ್ಲಿದ್ದು, ಸ್ಮರಿಸುವ ಕೆಲಸವಾಗಬೇಕು ಎಂದು ಹೇಳಿದರು.
  ಅಂಬೇಡ್ಕರ್ ಅವರಂತೆ ಶಿಕ್ಷಣ, ಸಂಘಟನೆ, ಹೋರಾ ಟಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಸಾಮಾಜಿನ ನ್ಯಾಯದ ಪರಿಕಲ್ಪನೆಯಲ್ಲಿ ತಮ್ಮ ಜೀವನ ನಡೆಸಿದ್ದಾರೆ. ಹಿಂದುಳಿದ ವರ್ಗಗಳು, ದೀನ ದಲಿತರು, ಬಡವರನ್ನು ಮೇಲೆತ್ತಲು ಅವರು ಜಾರಿಗೊಳಿಸಿದ ಅನೇಕ ಯೋಜನೆಗಳು ಈಗಲೂ ಹೆಜ್ಜೆ ಗುರುತುಗಳಾಗಿ ಉಳಿದಿವೆ ಎಂದರು.
  ನಿವೃತ್ತ ಶಿಕ್ಷಕ ಗುರುಮೂರ್ತಿ ವಿಶೇಷ ಉಪನ್ಯಾಸ ನೀಡಿ, ಡಿ.ದೇವರಾಜು ಅರಸು ಅವರು ಚಿಕ್ಕಂದಿನಿಂದಲೇ ಸ್ವಾಭಿಮಾನ ಬೆಳೆಸಿಕೊಂಡು ಬಂದಿದ್ದರು. ಮೈಸೂರು ರಾಜರ ದೂರದ ಸಂಬಂಧಿಯಾದರೂ ಅವರ ನೆರವು ಪಡೆಯದೇ ತಮ್ಮ ಸಾಮರ್ಥ್ಯದಿಂದ ಬೆಳೆದು ಈ ರಾಜ್ಯದ ಮುಖ್ಯಮಂತ್ರಿಯಾದರು. 1941ರಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾಗುವ ಮೂಲಕ ಜನಸೇವೆಗೆ ಕಾಲಿಟ್ಟರು. 1952, 1957ರ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಆಯ್ಕೆಯಾದರು. ಇವರ ಕಾರ್ಯಕ್ಷಮತೆಯನ್ನು ಮೆಚ್ಚಿ 1962ರಲ್ಲಿ ಕ್ಷೇತ್ರದ ಜನತೆ ಅವಿರೋಧವಾಗಿ ಆಯ್ಕೆಯಾದರು. ತಮ್ಮ ಆಡಳಿತದ ಅವಧಿಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಇಂದಿಗೂ ಜನಮಾನಸಲ್ಲಿ ನೆಲೆಸಿದ್ದಾರೆ ಎಂದರು.
  ಎಲ್.ಹಾವನೂರು ಸಮಿತಿ ಸ್ಥಾಪಿಸಿ ಆ ಮೂಲಕ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಮೀಸಲಾತಿ, ಆ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಸ್ಥಾಪಿಸಿದ ಕೀರ್ತಿ ಡಿ.ದೇವರಾಜ ಅರಸು ಸಲ್ಲುತ್ತದೆ. 1972-1980ರ ಅವಧಿಯನ್ನು ಅರಸು ಯುವ ಎಂದೇ ಕರೆಯಲಾಗುತ್ತದೆ. ಅವರ ಆಡಳಿತ ವೈಖರಿ ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಬೇಕು ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗದ ಗೌರವಾಧ್ಯಕ್ಷ ಬಿ.ಸಿ ಶಂಕರಾಚಾರ್, ಕಲಾವಿದ ಬಿ.ಟಿ.ಮಾನವ ಅವರನನು ಸನ್ಮಾನಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಇ.ಕೃಷ್ಣೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಪೌರಾಯುಕ್ತ ಸತೀಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಲಕ್ಷ್ಮೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಚಂದ್ರಶೇಖರ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅದ್ಯಕ್ಷ ಪುಟ್ಟಸ್ವಾಮಿ ಶೆಟ್ಟರ್, ಸ್ವಾತಂತ್ರೃ ಹೋರಾಟಗಾರ ಎಚ್.ಎಂ.ಶಿವಣ್ಣ ಇತರರಿದ್ದರು.
  ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಅರಸು ಅವರ ಭಾವಚಿತ್ರದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಪುಷ್ಪನಮನ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts