ಸಾಮಾಜಿಕ ಪರಿವರ್ತನೆಯ ಬುನಾದಿಯಾಗಲಿ ವ್ಯಾಪಾರ

ಗದಗ: ವ್ಯಾಪಾರದಲ್ಲಿ ಕೇವಲ ಲಾಭಾಂಶವೇ ಮುಖ್ಯವಾಗದೆ, ಸಾಮಾಜಿಕ ಪರಿವರ್ತನೆಯ ಬುನಾದಿಯಾಗಬೇಕು. ವ್ಯಾಪಾರೋದ್ಯಮಗಳು ದೇಶದ ಆರ್ಥಿಕ ಬೆಳವಣಿಗೆಯ ಬೆನ್ನೆಲುಬಾಗಿದ್ದು, ಅವುಗಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು.

ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬೆಂಗಳೂರು ಹಾಗೂ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಜರುಗಿದ ತಾಂತ್ರಿಕ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಾಪಾರೋದ್ಯಮಗಳು ಸರ್ಕಾರದ ಯಾವುದೇ ಯೋಜನೆಯನ್ನು ತಳಮಟ್ಟಕ್ಕೆ ತಲುಪಿಸುವ ಕೆಲಸ ಮಾಡುತ್ತಿವೆ. ಉದ್ಯಮಗಳು ಕೇವಲ ಬೆಂಗಳೂರು ಕೇಂದ್ರೀಕೃತವಾಗದೆ ಪ್ರತಿ ಜಿಲ್ಲೆಗಳಲ್ಲಿ ಸಣ್ಣ, ಮಧ್ಯಮ, ಬೃಹತ್ ಉದ್ಯಮಗಳು ಬೆಳೆಯಬೇಕಿದೆ ಎಂದರು.

ರಾಜ್ಯದಲ್ಲಿ 6.40 ಲಕ್ಷ ಸಣ್ಣ ಕೈಗಾರಿಕೆಗಳಿದ್ದು 38 ಲಕ್ಷ ಜನರು ಉದ್ಯೋಗ ಪಡೆದಿದ್ದಾರೆ. ಕೆಲವು ಉದ್ಯಮಗಳು ಬ್ಯಾಂಕ್​ಗಳನ್ನೇ ಅವಲಂಭಿಸಿದ್ದು, ಅವುಗಳಿಗೆ ಹಣಕಾಸು ಸಂಸ್ಥೆಗಳು ನೆರವು ನೀಡಬೇಕು. ಉದ್ಯಮಿಗಳು ಮುದ್ರಾ, ಸ್ಟಾರ್ಟ್​ಅಪ್ ಬಗ್ಗೆ ಮಾಹಿತಿ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮಿಗಳ ಸಮಸ್ಯೆಗಳು ದಶಕಗಳಿಂದ ಕಗ್ಗಂಟಾಗಿವೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಅಧಿವೇಶನದ ಲಾಭ ಪಡೆದುಕೊಳ್ಳಬೇಕು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಪ್ರತಿ ವರ್ಷ ಹಮ್ಮಿಕೊಳ್ಳುತ್ತಿರುವ ಗದಗ ಉತ್ಸವ ರಾಜ್ಯಕ್ಕೆ ಮಾದರಿಯಾಗಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳನ್ನು ಸಾರ್ವಜನಿಕರಿಗೆ ತಲುಪಿಸಲು ಸಹಾಯವಾಗುತ್ತದೆ ಎಂದರು.

ತಾಂತ್ರಿಕ ಅಧಿನವೇಶನ ಉದ್ಘಾಟನೆ ನಂತರ ಎಪಿಎಂಸಿ, ಇಂಡಸ್ಟ್ರಿಯಲ್, ಬ್ಯಾಂಕಿಂಗ್ ಹಾಗೂ ಜಿಎಸ್​ಟಿ ಕುರಿತು ಕಾರ್ಯಾಗಾರ ಜರುಗಿತು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸುರಕೋಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಟಿ. ದಿನೇಶ, ಸಂಗಮೇಶ ದುಂದೂರ, ವಿ.ಎಸ್. ಮಾಟಲದಿನ್ನಿ, ಶರಣಬಸಪ್ಪ ಕುರಡಗಿ, ಅರವಿಂದ ಪಟೇಲ, ಆರ್.ಬಿ. ದಾನಪ್ಪಗೌಡ್ರ, ಎಸ್.ಪಿ. ಸಂಶಿಮಠ, ಲಿಂಬಯ್ಯಸ್ವಾಮಿ ಲಿಂಬಯ್ಯಸ್ವಾಮಿಮಠ ಇತರರು ಇದ್ದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ಮಧುಸೂದನ ಪುಣೇಕರ್ ವಂದಿಸಿದರು.

ಉದ್ಯಮಿಗಳ ಬಳಿಗೆ ಎಫ್​ಕೆಸಿಸಿಐ
ವರ್ತಕರ ಸಮಸ್ಯೆಗಳ ಪರಿಹಾರಕ್ಕಾಗಿ ಇಂದು ಎಫ್​ಕೆಸಿಸಿಐ ಉದ್ಯಮಿಗಳು ಇರುವಲ್ಲಿಗೆ ಬರುತ್ತಿದೆ. ಕೊಡಗು ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಮನೆ ನಿರ್ವಣಕ್ಕೆ ಟ್ರೇಡರ್ಸ್​ಗಳಿಂದ 30 ಲಕ್ಷ ರೂ. ದೇಣಿಗೆ ಹಸ್ತಾಂತರಿಸಲಾಗಿದೆ. ಹೊಸ ಕೈಗಾರಿಕಾ ನೀತಿ ಬರುತ್ತಿದ್ದು, ಸಾರ್ವಜನಿಕರು ಅಭಿಪ್ರಾಯ, ಉದ್ಯಮಿಗಳು ಅಗತ್ಯ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಎಫ್​ಕೆಸಿಸಿಐ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಚೇರ್ಮನ್ ಎನ್. ಯಶವಂತರಾಜ್ ಹೇಳಿದರು.

ನವೋದ್ಯಮಿಗಳ ಸಮಸ್ಯೆಗೆ ಸ್ಪಂದನೆ
ನವೋದ್ಯಮಿಗಳಿಗೆ ಎದುರಾಗುವ ಬ್ಯಾಂಕ್ ಸಾಲ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಸ್ಪಂದಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಯುವ ಪದವೀಧರರು ಹೆಚ್ಚಾಗಿ ಬೆಂಗಳೂರಿನತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ, ನಿರೀಕ್ಷಿತ ಹುದ್ದೆಗಳು ಸಿಗದೆ, ಸೆಕ್ಯೂರಿಟಿ ಗಾರ್ಡ್, ಕಾರು ಚಾಲಕರಾಗುವ ಪರಿಸ್ಥಿತಿ ನಿರ್ವಣವಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಬಲಪಡಿಸಿದರೆ ಎಲ್ಲದಕ್ಕೂ ಪರಿಹಾರ ಸಿಗಲಿದೆ ಎಂದರು.

ನವೋದ್ಯಮಿಗಳಿಗೆ ಹಲವು ಬ್ಯಾಂಕ್​ಗಳು ಸಾಲ ನೀಡುತ್ತಿಲ್ಲ ಎಂಬ ಆರೋವಿದೆ. ಆದರೆ, ಬ್ಯಾಂಕ್ ಸಾಲ ನೀಡಲು ಹಿಂದೇಟು ಹಾಕಿದರೆ, ಎಫ್​ಕೆಸಿಸಿಐ ನೆರವಿಗೆ ಬರಲಿದೆ. ಪ್ರತೀ ತಿಂಗಳು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರತಿ ಜಿಲ್ಲೆಯ ವಾಣಿಜ್ಯೋದ್ಯಮಿಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಯೋಜನೆ ರೂಪಿಸಲಾಗಿದೆ ಎಂದರು.

ಪ್ರತಿ ಜಿಲ್ಲೆಯಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶಗಳಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕೆಐಎಡಿಬಿಯಿಂದ ಹೆಚ್ಚುವರಿ ಕೈಗಾರಿಕಾ ಪ್ರದೇಶ ನಿರ್ವಣವಾಗಬೇಕು. ಎಪಿಎಂಸಿ ನಿವೇಶನದಾರರಿಗೆ ಎಪಿಎಂಸಿಯಿಂದಲೇ ಕೆಜೆಪಿ ಮಾಡಿಸಿ, ಬ್ಯಾಂಕ್ ಸಾಲ ದೊರೆಯುವಂತೆ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲಿ ಕೃಷಿ ಉತ್ಪಾದನೆಗಳಿಗೆ ಭಾವಾಂತರ ಯೋಜನೆಯನ್ನು ಜಾರಿಗೊಳಿಸಬೇಕು. ಇದರಿಂದ ವರ್ತಕರು ಮತ್ತು ರೈತರಿಗೂ ಹಣ ಪಾವತಿಸುವ ಗೊಂದಲ ನಿವಾರಣೆಯಾಗುತ್ತದೆ ಎಂದು ಹೇಳಿದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸುರಕೋಡ, ಆರ್.ಬಿ. ದಾನಪ್ಪಗೌಡರ, ಎನ್. ಯಶವಂತರಾಜ್ ಸುದ್ದಿಗೋಷ್ಠಿಯಲ್ಲಿದ್ದರು.